ಪೊಲೀಸರ ಮೇಲೆ ಹಲ್ಲೆ ನಡೆಸುವವರ ವಿರುದ್ಧ ರೌಡಿಶೀಟ್: ಸಚಿವ ರಾಮಲಿಂಗಾರೆಡ್ಡಿ

ತುಮಕೂರು, ನ.25:ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಮೂಲಕ ರಾಜ್ಯದ ನಾಗರಿಕರು ನೆಮ್ಮದಿ ಮತ್ತು ಶಾಂತಿಯಿಂದ ಇರಬೇಕೆಂಬುದೇ ಸರಕಾರದ ಧ್ಯೇಯವಾಗಿದ್ದು, ಈ ನಿಟ್ಟಿನಲ್ಲಿ ಪೊಲೀಸರು ಶಾಂತಿ ಕಾಪಾಡುವಲ್ಲಿ ಹಾಗೂ ಸುಗಮ ಸಂಚಾರ ವ್ಯವಸ್ಥೆಗೆ ಕ್ರಮ ಕೈಗೊಳ್ಳುವಾಗ ಪೊಲೀಸರ ಮೇಲೆ ವಿನಾ ಕಾರಣ ಹಲ್ಲೆ ಮಾಡಿದರೆ ಅಂತಹವರ ವಿರುದ್ಧ ರೌಡಿಶೀಟರನ್ನಾಗಿ ದಾಖಲಿಸಲಾಗುವುದು ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ತುಮಕೂರು ತಾಲೂಕಿನ ಹೆಬ್ಬೂರು ಮತ್ತು ತುಮಕೂರು ನಗರದ ಜಯನಗರ ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿ ಅಲ್ಲಿ ಸಾರ್ವಜನಿಕರಿಗೆ “ಜನಸ್ನೇಹಿ” ವಾತಾವರಣ ಕಲ್ಪಿಸಲಾಗಿದೆಯೇ, ಇಲ್ಲವೇ, ಎಂಬುದನ್ನು ಪರಿಶೀಲಿಸಿ ಬಳಿಕ ಮಾತನಾಡಿ ಅವರು, ಇತ್ತೀಚೆಗೆ ಪೊಲೀಸರ ಮೇಲೆ ವಿಶೇಷವಾಗಿ ಸಂಚಾರಿ ಪೊಲೀಸರ ಮೇಲೆ ರಾಜ್ಯದಲ್ಲಿ ಆಗಿಂದಾಗ್ಗೆ ಹಲ್ಲೆಗಳು ನಡೆಯುತ್ತಿದ್ದು, ಇದರಿಂದಾಗಿ ಪೊಲೀಸರು ತಮ್ಮ ಕರ್ತವ್ಯವನ್ನು ನಿರ್ವಹಿಸಲು ಕಷ್ಟವಾಗುತ್ತಿದ್ದು, ಇದರಿಂದ ನಾಗರಿಕರಿಗೂ ಸಹ ತೊಂದರೆಯಾಗುತ್ತಿರುವುದನ್ನು ಮನಗಂಡು ಈ ಆದೇಶವನ್ನು ಪಾಲಿಸುವಂತೆ ಪೊಲೀಸರಿಗೆ ಸೂಚಿಸುವುದಾಗಿ ಅವರು ತಿಳಿಸಿದರು.
ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಜನಸ್ನೇಹಿ ವಾತಾವರಣ ನಿರ್ಮಿಸಲು ಈಗಾಗಲೇ ಎಲ್ಲಾ ಠಾಣೆಗಳಿಗೆ ರೂ. ಒಂದು ಲಕ್ಷ ಅನುದಾನ ನೀಡಲಾಗಿದೆ. ರಾಜ್ಯದ ಪೊಲೀಸರಿಗೆ ಅನುಕೂಲವಾಗುವಂತೆ 6ನೆ ವೇತನ ಆಯೋಗದಲ್ಲಿ ಕ್ರಮ ಕೈಗೊಳ್ಳಲಾಗಿದೆ. ಪೊಲೀಸರಿಗಾಗಿ 11 ಸಾವಿರಕ್ಕೂ ಹೆಚ್ಚು ವಸತಿ ಗೃಹಗಳನ್ನು ನಿರ್ಮಿಸಲಾಗಿದೆ, 26ಸಾವಿರ ಪೊಲೀಸರನ್ನು ಹಾಗೂ ಒಂದು ಸಾವಿರ ಇನ್ ಸ್ಪೆಕ್ಟರ್‍ಗಳನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದರು.
ಈ ಸಂದರ್ಭದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಡಾ.ದಿವ್ಯಾ ಗೋಪಿನಾಥ್, ಉಪಾಧೀಕ್ಷಕರಾದ ಶೋಭಾರಾಣಿ, ಹಿರಿಯ ಪೊಲೀಸ್ ಅಧಿಕಾರಿಗಳು ಹಾಜರಿದ್ದರು







