ಗ್ರಾಪಂಗಳಿಗೆ 29.60 ಲಕ್ಷ ರೂ. ಮರಳುಗಾರಿಕೆ ರಾಜಧನ

ಉಡುಪಿ, ನ.25: ಜಿಲ್ಲೆಯ ಕರಾವಳಿ ನಿಯಂತ್ರಣ ವಲಯದಲ್ಲಿ ಗುರುತಿಸ ಲಾಗಿರುವ ಮರಳು ದಿಬ್ಬಗಳನ್ನು ತೆರವು ಗೊಳಿಸಲು, ಪರವಾನಗಿ ಪಡೆದಿರು ವವರು ಸರಕಾರಕ್ಕೆ ಪಾವತಿಸಿರುವ ರಾಜಧನದ ಮೊತ್ತದಲ್ಲಿ 29.60 ಲಕ್ಷ ರೂ. ಗಳನ್ನು ಸ್ಥಳೀಯ ಗ್ರಾಪಂಗಳಿಗೆ ರಾಜ್ಯ ಮೀನುಗಾರಿಕೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ವಿತರಿಸಿದರು.
ಶನಿವಾರ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಗ್ರಾಪಂಗಳಿಗೆ ಮರಳುಗಾರಿಕೆ ರಾಜಧನ ವಿತರಿಸುವ ಕುರಿತು ಆಯೋಜಿಸಿದ್ದ ಸಭೆಯಲ್ಲಿ ಅವರು ಚೆಕ್‌ಗಳನ್ನು ವಿತರಿಸಿದರು.
ಕರಾವಳಿ ನಿಯಂತ್ರಣ ವಲಯ (ಸಿಆರ್‌ಝಡ್)ದಲ್ಲಿ ಗುರುತಿಸಿರುವ ಮರಳು ದಿಬ್ಬಗಳನ್ನು ತೆರವುಗೊಳಿಸಲು ಪರವಾನಗಿ ಪಡೆದಿರುವವರು ಸರಕಾರಕ್ಕೆ ಪಾವತಿಸಿರುವ ರಾಜಧನದಲ್ಲಿ ಶೇ.25ರಷ್ಟನ್ನು ಸ್ಥಳೀಯ ಗ್ರಾಪಂಗಳಿಗೆ ನೀಡುವಂತೆ ಸರಕಾರದ ನಿರ್ದೇಶನ ನೀಡಿದ್ದು, ಅದರಂತೆ ಜಿಲ್ಲೆಯ 24 ಗ್ರಾಪಂಗಳಿಗೆ ಒಟ್ಟು 29.60 ಲಕ್ಷ ರೂ. ಮೊತ್ತವನ್ನು ಪಾವತಿಸಲಾಗುತ್ತಿದೆ. ಈ ಮೊತ್ತದಲ್ಲಿ ಪಂಚಾಯತ್‌ಗಳು ತಮ್ಮ ವ್ಯಾಪ್ತಿಯಲ್ಲಿ ಸಮರ್ಪಕ ರೀತಿಯಲ್ಲಿ ತ್ಯಾಜ್ಯ ವಿಲೇವಾರಿ ಮಾಡಲು ಹಾಗೂ ರಸ್ತೆಗಳನ್ನು ದುರಸ್ತಿಪಡಿಸಲು ಮಾತ್ರ ಬಳಸುವಂತೆ ಸಚಿವರು ತಿಳಿಸಿದರು.
ಪ್ರಸ್ತುತ ಗ್ರಾಪಂಗಳಿಗೆ ಪ್ರಥಮ ಹಂತದ ರಾಜಧನ ಮಾತ್ರ ಮಂಜೂರಾಗಿದ್ದು, ಇದು ಇನ್ನು ಮುಂದೆಯೂ ದೊರೆಯಲಿದೆ ಎಂದು ಸಚಿವರು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಜಿಪಂ ಸಿಇಒ ಶಿವಾನಂದ ಕಾಪಶಿ, ಕುಂದಾಪುರ ಉಪ ವಿಬಾಗಾಧಿಕಾರಿ ಶಿಲ್ಪಾನಾಗ್ ಹಾಗೂ ವಿವಿಧ ಗ್ರಾಪಂಗಳ ಅಧ್ಯಕ್ಷರು ಹಾಗೂ ಪಿಡಿಓಗಳು ಉಪಸ್ಥಿತರಿದ್ದರು.







