ಲಂಚ ಪ್ರಕರಣ ಸಾಬೀತು: ಅಪರಾಧಿಗೆ ಸಜೆ, ದಂಡ
ಮಂಗಳೂರು, ನ. 25: ದ.ಕ. ಜಿಲ್ಲೆಯ ಅಂಬೇಡ್ಕರ್ ನಿಗಮದ ವಸೂಲಾತಿ ಅಧಿಕಾರಿ ಮತ್ತು ಜಿಲ್ಲಾ ವ್ಯವಸ್ಥಾಪಕ ಗುಲ್ಲಯ್ಯ ಅವರ ವಿರುದ್ಧ 2009ರಲ್ಲಿ ದಾಖಲಾಗಿದ್ದ ಲಂಚ ಪಡೆದ ಆರೋಪಕ್ಕೆ ಸಂಬಂಧಿಸಿ ಲೋಕಾಯುಕ್ತ ವಿಶೇಷ ನ್ಯಾಯಾಲಯ ಅಪರಾಧಿಗೆ 1 ವರ್ಷ ಸಾದಾ ಸಜೆ ಮತ್ತು 10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಸಹಾಯಧನವನ್ನು ಬಿಡುಗಡೆ ಮಾಡಿ ಕೊಡಲು ಗುಲ್ಲಯ್ಯ ಅವರು ವಾಮನ ನಾಯಕ್ ಅವರಿಂದ 4 ಸಾವಿರ ರೂ. ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದರು. ಅನಂತರ ಅಂದು ಇನ್‌ಸ್ಪೆಕ್ಟರ್ ಆಗಿದ್ದ ಉದಯ ನಾಯಕ್ ಅವರು ಗುಲ್ಲಯ್ಯರನ್ನು ಬಂಧಿಸಿದ್ದರು. ಅಲ್ಲದೆ, ಆರೋಪಿ ಗುಲ್ಲಯ್ಯನಿಗೆ ಸಹಾಯ ಮಾಡಲು ನ್ಯಾಯಾಲಯದಲ್ಲಿ ವ್ಯತಿರಿಕ್ತ ಸುಳ್ಳು ಸಾಕ್ಷಿ ನುಡಿದ ದೂರುದಾರ ವಾಮನ ನಾಯಕ್ ವಿರುದ್ಧವೂ ಪ್ರತ್ಯೇಕ ಕ್ರಿಮಿನಲ್ ಕೇಸ್ ದಾಖಲಿಸಲು ನ್ಯಾಯಾಲಯ ಆದೇಶಿಸಿದೆ. ಮಂಗಳೂರಿನ ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಬಿ.ಮುರಳೀಧರ್ ಪೈ ಅವರು ಈ ತೀರ್ಪು ನೀಡಿದ್ದಾರೆ. ಪ್ರಕರಣಗಳಲ್ಲಿ ವಿಶೇಷ ಸರಕಾರಿ ಅಭಿಯೋಜಕ ಮತ್ತು ನ್ಯಾಯವಾದಿ ಕೆ. ಎಸ್. ಎನ್. ರಾಜೇಶ್ ವಾದ ಮಂಡಿಸಿದ್ದಾರೆ.





