ದರ ಕಡಿತಗೊಳಿಸದೆ ಗ್ರಾಹಕರಿಗೆ ವಂಚನೆ: ಅಧಿಕಾರಿಗಳಿಂದ ದಾಳಿ
ಮಂಗಳೂರು, ನ. 25: ಕೇಂದ್ರ ಸರಕಾರ 177 ಉತ್ಪನ್ನಗಳ ಮೇಲಿನ ಜಿಎಸ್‌ಟಿ ದರ ಇಳಿಕೆ ಮಾಡಿದ್ದರೂ ದರ ಕಡಿತಗೊಳಿಸದೆ ಗ್ರಾಹಕರನ್ನು ವಂಚಿಸುತ್ತಿದ್ದ ನಾಲ್ಕು ಮಾಲ್‌ಗಳು ಮತ್ತು ಸೂಪರ್ ಮಾರ್ಕೆಟ್ ಮಳಿಗೆಗಳ ಮೇಲೆ ತೂಕ ಮತ್ತು ಕಾನೂನು ಮಾಪನಶಾಸ್ತ್ರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಬೆಂದೂರುವೆಲ್‌ನಲ್ಲಿರುವ ಸೂಪರ್ ಮಾರ್ಕೆಟ್ ಮತ್ತು ಕೆಲವು ಮಾಲ್‌ಗಳಿಗೆ ದಾಳಿ ನಡೆಸಿದ ಅಧಿಕಾರಿಗಳು, ಅಲ್ಲಿ ಮಾದರಿ ಉತ್ಪನ್ನಗಳನ್ನು ಖರೀದಿಸಿದಾಗ ಜಿಎಸ್‌ಟಿ ಕಡಿತಗೊಳಿಸದೆ ಇರುವುದು ಗಮನಕ್ಕೆ ಬಂದಿದೆ. ಗ್ರಾಹಕರಿಗೆ ವಂಚನೆ ನಡೆಸುತ್ತಿರುವ ಈ ಮಳಿಗೆಗಳ ಮೇಲೆ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಲ್ಲದೆ, ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.ಇನ್ನು ಮುಂದೆ ನಗರದ ಕಿರಾಣಿ ಅಂಗಡಿಗಳು, ಮಾಲ್‌ಗಳ ಮೇಲೆ ನಿರಂತರವಾಗಿ ದಾಳಿ ನಡೆಸುತ್ತೇವೆ. ವಂಚನೆ ನಡೆಸುತ್ತಿರುವುದು ಕಂಡುಬಂದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ದೂರು ನೀಡಿ
ಜಿಎಸ್‌ಟಿ ಇಳಿಕೆಯಾಗಿರುವ ಕುರಿತು ಗ್ರಾಹಕರು ಜಾಗೃತರಾಗಬೇಕು. ಅಂಗಡಿಗಳಲ್ಲಿ ಹಿಂದಿನ ಜಿಎಸ್‌ಟಿ ಬೆಲೆಗೆ ವಸ್ತುಗಳನ್ನು ಮಾರಾಟ ಮಾಡುತ್ತಿರುವುದು ಕಂಡುಬಂದರೆ ತೂಕ ಮತ್ತು ಮಾಪನಶಾಸ್ತ್ರ ಇಲಾಖೆಯ ವೆಬ್‌ಸೈಟ್‌ನಲ್ಲಿ ದೂರು ದಾಖಲಿಸಬಹುದು. ಹೀಗೆ ಮಾಡಿದರೆ ಆ ನಿರ್ದಿಷ್ಟ ಪ್ರಕರಣದ ಕುರಿತು ಅಧಿಕಾರಿಗಳು ಕ್ರಮ ಕೈಗೊಂಡು ದೂರಿಗೆ ಪ್ರತಿಕ್ರಿಯೆ ನೀಡಲು ಸುಲಭವಾಗುತತಿದೆ ಎಂದು ಇಲಾಖೆಯ ಸಹಾಯಕ ನಿಯಂತ್ರಕ ಗಜೇಂದ್ರ ಅವರು ತಿಳಿಸಿದ್ದಾರೆ.







