ಫೆ.7-12: ಗುಜರಾತಿನಲ್ಲಿ ‘ಪ್ಲಾಸ್ಟಿ ಇಂಡಿಯಾ -2018’ ಅಂತಾರಾಷ್ಟ್ರೀಯ ಸಮ್ಮೇಳನ
ವಿಶ್ವದ ಮೂರನೆ ಅತ್ಯಂತ ದೊಡ್ಡ ಪ್ಲಾಸ್ಟಿಕ್ ಉತ್ಪನ್ನಗಳ ವಸ್ತುಪ್ರದರ್ಶನ

ಮಂಗಳೂರು, ನ. 25: ಮುಂದಿನ ವರ್ಷದ ಫೆಬ್ರವರಿ 7ರಿಂದ 12ರವರೆಗೆ ಗುಜರಾತಿನ ಗಾಂಧಿನಗರದಲ್ಲಿ ‘ಪ್ಲಾಸ್ಟಿ ಇಂಡಿಯಾ -2018’ ಹೆಸರಿನ 10ನೆ ಅಂತಾರಾಷ್ಟ್ರೀಯ ಸಮ್ಮೇಳನ ಮತ್ತು ವಸ್ತು ಪ್ರದರ್ಶನ, ವಿಶ್ವದ ಮೂರನೆ ಅತ್ಯಂತ ದೊಡ್ಡ ಪ್ಲಾಸ್ಟಿಕ್ ಉತ್ಪನ್ನಗಳ ವಸ್ತುಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ಎಂದು ಪ್ಲಾಸ್ಟಿ ಇಂಡಿಯಾ 2018 ಸಮ್ಮೇಳನ ಸಮಿತಿಯ ಪ್ರಚಾರ ಸಮಿತಿಯ ಸಹ ಸಂಚಾಲಕ ಹರಿರಾಮ್ ತಕ್ಕರ್ ಸುದ್ದಿಗೊಷ್ಠಿಯಲ್ಲಿಂದು ತಿಳಿಸಿದ್ದಾರೆ.
ಆಗ್ನೇಯ ಏಷ್ಯಾದಲ್ಲಿಯೇ ಅತ್ಯಂತ ದೊಡ್ಡ ಸಮ್ಮೇಳನ ಮತ್ತು ವ್ಯಾಪಾರಿ ಮೇಳ ಪ್ಲಾಸ್ಟಿ ಇಂಡಿಯಾ -2018ರಲ್ಲಿ ಜಗತ್ತಿನಾದ್ಯಂತ 2ಲಕ್ಷಕ್ಕೂ ಅಧಿಕ ಪ್ರತಿನಿಧಿಗಳು, 40 ದೇಶಗಳಿಂದ 2 ಸಾವಿರ ಪ್ರದರ್ಶನಕಾರರು, ಖ್ಯಾತ ಉದ್ಯಮ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ಜರ್ಮನ್ ಮತ್ತು ಚೈನಾದಲ್ಲಿರುವ ಸಮ್ಮೇಳನ ವಿಶ್ವದ ಪ್ರಥಮ ಮತ್ತು ಎರಡನೆ ವಸ್ತು ಪ್ರದರ್ಶನವಾಗಿದೆ. ಗುಜರಾತ್ ಸರಕಾರ ಹಾಗೂ ಕೇಂದ್ರ ಸರಕಾರದ ನೆರವಿನೊಂದಿಗೆ ಈ ಮೇಳವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹರಿರಾಮ್ ತಕ್ಕರ್ ತಿಳಿಸಿದ್ದಾರೆ.
ಪ್ಲಾಸ್ಟಿ ಇಂಡಿಯಾ ಫೌಂಡೇಶನ್ ಸರಕಾರಿ ಮತ್ತು ಸರಕಾರೇತರ ಸಂಸ್ಥೆಗಳನ್ನು ಒಳಗೊಂಡಂತೆ ಸಂಘಟನಾ ಸಂಸ್ಥೆ. ಭಾರತದಲ್ಲಿ ಪ್ಲಾಸ್ಟಿಕ್ ಆಧಾರಿತ ಕೈಗಾರಿಕೆಗಳ ಬೆಳವಣಿಗೆ, ವಿಶ್ವ ಮಾರುಕಟ್ಟೆಯಲ್ಲಿ ಭಾರತೀಯ ಪ್ಲಾಸ್ಟಿಕ್ ಕಯಗಾರಿಕೆಗೆ ಉತ್ತಮ ಸ್ಥಾನ ಮಾನ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಭಾರತದ ಉತ್ಪನ್ನಗಳನ್ನು ವಿಶ್ವ ಮಾರುಕಟ್ಟೆಯಲ್ಲಿ ವಿಸ್ತರಿಸುವ, ಸಾಮಗ್ರಿಗಳನ್ನು ರಫ್ತು ಮಾಡುವ ನಿಟ್ಟಿನಲ್ಲಿ, ಪ್ಲಾಸ್ಟಿಕ್ ಬಗ್ಗೆ ಇರುವ ತಪ್ಪು ಕಲ್ಪನೆ ಹೋಗಲಾಡಿಸಲು, ಬಹುಉಪಯೋಗಿ ಪ್ಲಾಸ್ಟಿಕ್ ಸಾಮಗ್ರಿಗಳ ಬಗ್ಗೆ,ಪರಿಸರ ಸ್ನೇಹಿ ಪ್ಲಾಸ್ಟಿಕ್ ಸಾಮಗ್ರಿಗಳ ಬಗ್ಗೆ ಹಾಗೂ ಪ್ಲಾಸ್ಟಿಕ್ ಮರು ಬಳಕೆ ಮತ್ತು ನೂತನ ತಂತ್ರಜ್ಞಾನದ ಬಗ್ಗೆ ಮಾಹಿತಿ ವಿನಿಮಯ ಮತ್ತು ಪ್ರಚಾರದ ದೃಷ್ಟಿಯಿಂದ ಈ ಸಮ್ಮೇಳನ ಮತ್ತು ವಸ್ತುಪ್ರದರ್ಶನ ವ್ಯಾಪಾರ ಮೇಳ ಮಹತ್ವದ ಸ್ಥಾನ ಪಡೆದಿದೆ ಎಂದು ಸಮ್ಮೇಳನ ಪ್ರಚಾರ ಸಮಿತಿಯ ದಕ್ಷಿಣ ವಿಭಾಗದ ಪ್ರತಿನಿಧಿ ಹಾಗೂ ಕರ್ನಾಟಕ ರಾಜ್ಯ ಪ್ಲಾಸ್ಟಿಕ್ ಎಸೋಸಿಯೇಶನ್ (ಕೆಎಸ್‌ಪಿಎ)ನ ಅಧ್ಯಕ್ಷ ವಿಜಯ ಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಪ್ಲಾಸ್ಟಿಕ್ ತ್ಯಾಜ್ಯವನ್ನು ರಸ್ತೆ ನಿರ್ಮಾಣಕ್ಕೆ ಬಳಸಿದರೆ ಪ್ಲಾಸ್ಟಿಕ್ ತ್ಯಾಜ್ಯಕ್ಕೂ ಬೇಡಿಕೆ ಹೆಚ್ಚಲಿದೆ:- ಪ್ಲಾಸ್ಟಿಕ್ ತ್ಯಾಜ್ಯವನ್ನು ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಬಳಸಿದರೆ 10ರಿಂದ 15 ವರ್ಷ ಹೆಚ್ಚು ಬಾಳಿಕೆ ಬರುತ್ತದೆ. ಇಂಡಿಯನ್ ರೋಡ್ ಕಾಂಗ್ರೆಸ್ ಸಮಿತಿಯ ಶಿಫಾರಸಿನ ಪ್ರಕಾರ ಸರಕಾರ ಈ ಸಲಹೆಯನ್ನು ಪರಿಗಣಿಸಿ ಕಾರ್ಯರೂಪಕ್ಕೆ ತಂದಿದ್ದರೆ ಪ್ಲಾಸ್ಟಿಕ್ ತ್ಯಾಜ್ಯ ಕ್ಕೂ ಹೆಚ್ಚಿನ ಬೇಡಿಕೆ ಬರುತ್ತಿತ್ತು. ರಸ್ತೆ ನಿರ್ಮಾಣದಲ್ಲಿ ಬಳಸುವ ಬಿಟಾಮಿನ್ ಜೊತೆ ಪ್ಲಾಸ್ಟಿಕ್ ಮರುಬಳಕೆಯ ಎಲ್ಲಾ ಸಾಮಗ್ರಿಗಳನ್ನು 7ರಿಂದ 8 ಶೇ ಪ್ರಮಾಣದಲ್ಲಿ ಬಳಸಿದರೆ ರಸ್ತೆ ನಿರ್ಮಾಣದ ವೆಚ್ಚವೂ ಇಳಿಕೆಯಾಗಲಿದೆ. ರಸ್ತೆಯ ಬಾಳಿಕೆಯೂ ಹೆಚ್ಚಾಗಲಿದೆ ಎಂದು ವಿಜಯ ಕುಮಾರ್ ತಿಳಿಸಿದ್ದಾರೆ.
ಪ್ಲಾಸ್ಟಿಕ್ ತಂತ್ರಜ್ಞಾನ ವಿಶ್ವವಿದ್ಯಾನಿಲಯ :- ಪ್ಲಾಸ್ಟಿ ಇಂಡಿಯಾ ಫೌಂಡೇಶನ್ ವತಿಯಿಂದ ದಮನ್‌ನಲ್ಲಿ ವಿಶ್ವವಿದ್ಯಾನಿಲಯ ಮುಂದಿನ ಶೈಕ್ಷಣಿಕ ವರ್ಷದಿಂದ ಆರಂಭವಾಗಲಿದೆ. ದಮನ್‌ನ 200 ಎಕ್ರೆ ಪ್ರದೇಶದಲ್ಲಿ ವಿಶ್ವ ವಿದ್ಯಾನಿಲಯದ ಆರಂಭಕ್ಕೆ ಪೂರಕವಾದ ಕೆಲಸ ಆರಂಭಗೊಂಡಿದೆ. ಪ್ಲಾಸ್ಟಿಕ್ ತಂತ್ರಜ್ಞಾನಕ್ಕೆ ಸಂಬಂಧಿಸಿದ ಬಿಟೆಕ್, ಎಂಟೆಕ್ ಕೋರ್ಸ್‌ಗಳನ್ನು ಇಲ್ಲಿ ಆರಂಭಿಸಲಾಗುವುದು. ಪ್ರಸಕ್ತ ಪ್ಲಾಸ್ಟಿಕ್ ಉದ್ಯಮದ ಮೂಲಕ ದೇಶದ ಜಿಡಿಪಿಗೆ ಶೇ 15ರಿಂದ 16 ಕೊಡುಗೆ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಪ್ರಮಾಣವನ್ನು ಶೇ 30ಕ್ಕೆ ಏರಿಸುವ ಗುರಿ ಹೊಂದಲಾಗಿದೆ. ಅಮೇರಿಕಾ ದಂತಹ ದೇಶದಲ್ಲಿ ಪ್ಲಾಸ್ಟಿಕ್ ಬಳಕೆಯ ಪ್ರಮಾಣ ತಲಾ 244 ಕಿಲೋಗ್ರಾಂ ಇದ್ದರೆ ಭಾರತದಲ್ಲಿ ಈ ಪ್ರಮಾಣ ತಲಾ 15 ಕಿ.ಗ್ರಾಂ ಮಾತ್ರ ಇದೆ. ಆದರೂ ಇಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಮರ್ಪಕವಾಗಿ ಮರು ಬಳಕೆ ಮಾಡುವ ವ್ಯವಸ್ಥೆ ನಡೆಯದೆ ಇರುವುದರಿಂದ ಸಮಸ್ಯೆ ಸೃಷ್ಟಿಯಾಗಿದೆ. ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸಿ ಮರು ಬಳಕೆ ಮಾಡಿದರೆ ಭಾರತದ ಬೆಳವಣಿಗೆ ಇದೊಂದು ಮಹತ್ವದ ಕೊಡುಗೆ ನೀಡುವ ಕ್ಷೇತ್ರವಾಗಿದೆ ಎಂದು ವಿಜಯ ಕುಮಾರ್ ತಿಳಿಸಿದ್ದಾರೆ.
ಸುದ್ದಿ ಗೋಷ್ಠಿಯಲ್ಲಿ ಸಿಪಿಎಂಟಿಎ ಅಧ್ಯಕ್ಷ ಬಿ.ಎ.ನಝೀರ್ ಪ್ರಧಾನ ಕಾರ್ಯದರ್ಶಿ ಬಿ.ಎ.ಇಕ್ಭಾಲ್, ಕಾಯದರ್ಶಿ ಸುರೇಶ್ ಕರ್ಕೇರಾ ಮೊದಲಾದವರು ಉಪಸ್ಥಿತರಿದ್ದರು.







