ಆ್ಯಶಸ್ ಟೆಸ್ಟ್: ಆಸ್ಟ್ರೇಲಿಯಕ್ಕೆ ನಾಯಕ ಸ್ಮಿತ್ ಆಸರೆ

ಬ್ರಿಸ್ಬೇನ್, ನ.25: ಆ್ಯಶಸ್ ಸರಣಿಯ ಎರಡನೇ ಕ್ರಿಕೆಟ್ ಟೆಸ್ಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯ ತಂಡ ಮೇಲುಗೈ ಸಾಧಿಸಿದೆ.
ಬ್ರಿಸ್ಬೇನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟೆಸ್ಟ್‌ನ ಮೂರನೇ ದಿನವಾಗಿರುವ ಶನಿವಾರ ದಿನದಾಟ ಅಂತ್ಯಕ್ಕೆ ಇಂಗ್ಲೆಂಡ್ ದ್ವಿತೀಯ ಇನಿಂಗ್ಸ್‌ನಲ್ಲಿ 16 ಓವರ್‌ಗಳಲ್ಲಿ 2 ವಿಕೆಟ್ ನಷ್ಟದಲ್ಲಿ 33 ರನ್ ಗಳಿಸಿತ್ತು.
ಸ್ಟೋನ್‌ಮ್ಯಾನ್ ಔಟಾಗದೆ 19ರನ್ ಮತ್ತು ನಾಯಕ ಜೋ ರೂಟ್ ಔಟಾಗದೆ 5 ರನ್ ಗಳಿಸಿ ಬ್ಯಾಟಿಂಗ್‌ನ್ನು ನಾಲ್ಕನೆ ದಿನಕ್ಕೆ ಕಾಯ್ದಿರಿಸಿದ್ದಾರೆ.
ಆರಂಭಿಕ ದಾಂಡಿಗ ಅಲೆಸ್ಟೈರ್ ಕುಕ್ (7) ಮತ್ತು ಜೇಮ್ಸ್ ವಿನ್ಸ್ (2) ಔಟಾಗಿದ್ದಾರೆ. ಹೇಝಲ್‌ವುಡ್ ಎರಡು ವಿಕೆಟ್‌ಗಳನ್ನು ತನ್ನ ಖಾತೆಗೆ ಸೇರಿಸಿಕೊಂಡಿದ್ದಾರೆ.
ಎರಡನೆ ದಿನದ ಆಟ ನಿಂತಾಗ 62 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 165 ರನ್ ಗಳಿಸಿದ್ದ ಆಸ್ಟ್ರೇಲಿಯ ಮೊದಲ ಇನಿಂಗ್ಸ್‌ನಲ್ಲಿ 130.3 ಓವರ್‌ಗಳಲ್ಲಿ 328 ರನ್‌ಗಳಿಗೆ ಆಲೌಟಾಗಿತ್ತು.
ಶುಕ್ರವಾರ ಆಟ ನಿಂತಾಗ ಸ್ಮಿತ್ 65 ರನ್ ಮತ್ತು ಎಸ್.ಮಾರ್ಷ್ ಔಟಾಗದೆ 44 ರನ್ ಗಳಿಸಿದ್ದರು.
ಸ್ಮಿತ್ ಶತಕ ದಾಖಲಿಸಿ ತಂಡದ ಪರ ಕೊನೆಯ ತನಕ ಹೋರಾಟ ನಡೆಸಿ ಅಜೇಯರಾಗಿ ಉಳಿದರು. ಆದರೆ ಮಾರ್ಷ್ ಅರ್ಧಶತಕ (51) ಗಳಿಸಿ ಪೆವಿಲಿಯನ್ ಸೇರಿದರು. ಇವರು ಐದನೇ ವಿಕೆಟ್‌ಗೆ 99 ರನ್‌ಗಳ ಜೊತೆಯಾಟ ನೀಡಿದರು.
ಭೋಜನಾ ವಿರಾಮಕ್ಕೆ ಮೊದಲು ಆಸ್ಟ್ರೇಲಿಯದ ಮಾರ್ಷ್, ಟಿಮ್ ಪೈನೆ (13) ಮತ್ತು ಮಿಚೆಲ್ ಸ್ಟಾರ್ಕ್(6) ವಿಕೆಟ್ ಕಳೆದುಕೊಂಡಿತ್ತು. ಎಂಟನೇ ವಿಕೆಟ್‌ಗೆ ಸ್ಮಿತ್ ಮತ್ತು ಕಮಿನ್ಸ್ ಅವರು ಜೊತೆಯಾಟದಲ್ಲಿ 66 ರನ್‌ಗಳ ಜಮೆ ಮಾಡಿದರು. ಕಮಿನ್ಸ್ 42 ರನ್ ಗಳಿಸಿ ವೋಕ್ಸ್ ಗೆ ವಿಕೆಟ್ ಒಪ್ಪಿಸಿದರು. ಹೇಝಲ್‌ವುಡ್ 6ರನ್ ಮತ್ತು ನಥಾನ್ ಲಿನ್ 9 ರನ್ ಗಳಿಸಿ ಔಟಾದರು.
ಇಂಗ್ಲೆಂಡ್ ತಂಡದ ಸ್ಟುವರ್ಟ್ ಬ್ರಾಡ್ 49ಕ್ಕೆ 3 ವಿಕೆಟ್, ಜೇಮ್ಸ್ ಆ್ಯಂಡರ್ಸನ್ ಮತ್ತು ಮೊಯಿನ್ ಅಲಿ ತಲಾ 2 ವಿಕೆಟ್, ವೋಕ್ಸ್, ಬಾಲ್ ಮತ್ತು ರೂಟ್ ತಲಾ 1 ವಿಕೆಟ್ ಹಂಚಿಕೊಂಡರು.
ಸಂಕ್ಷಿಪ್ತ ಸ್ಕೋರ್ ವಿವರ
►ಇಂಗ್ಲೆಂಡ್ ಮೊದಲ ಇನಿಂಗ್ಸ್ 302
ಆಸ್ಟ್ರೇಲಿಯ ಮೊದಲ ಇನಿಂಗ್ಸ್ 130.3 ಓವರ್‌ಗಳಲ್ಲಿ ಆಲೌಟ್ 328 ( ಸ್ಮಿತ್ ಔಟಾಗದೆ 141, ಮಾರ್ಷ್ 51, ಕಮಿನ್ಸ್ 42; ಬ್ರಾಡ್ 49ಕ್ಕೆ 3, ಆ್ಯಂಡರ್ಸನ್ 50ಕ್ಕೆ 2, ಅಲಿ 74ಕ್ಕೆ 2 )
►ಇಂಗ್ಲೆಂಡ್ ದ್ವಿತೀಯ ಇನಿಂಗ್ಸ್ 16 ಓವರ್‌ಗಳಲ್ಲಿ 33/2
(ಸ್ಟೋನ್‌ಮ್ಯಾನ್ ಔಟಾಗದೆ 19; ಹೇಝಲ್‌ವುಡ್ 11ಕ್ಕೆ 2).
ಆ್ಯಶಸ್‌ನಲ್ಲಿ ಸಿಡಿಸಿದ ಕಠಿಣ ಶತಕಗಳಲ್ಲಿ ಒಂದು: ಸ್ಮಿತ್
ಆ್ಯಶಸ್ ಸರಣಿಯ ಎರಡನೆ ಟೆಸ್ಟ್‌ನಲ್ಲಿ ಶತಕ ಸಿಡಿಸಿರುವುದು ತಾನು ಈ ವರೆಗೆ ಆ್ಯಶಸ್ ಟೆಸ್ಟ್ ಸರಣಿಯಲ್ಲಿ ಸಿಡಿಸಿದ ಕಠಿಣ ಶತಕಗಳಲ್ಲಿ ಒಂದಾಗಿದೆ ಎಂದು ಆಸ್ಟ್ರೇಲಿಯ ಕ್ರಿಕೆಟ್ ತಂಡದ ನಾಯಕ ಸ್ಟೀವ್ ಸ್ಮಿತ್ ಹೇಳಿದ್ದಾರೆ.
4 ವಿಕೆಟ್ ನಷ್ಟದಲ್ಲಿ 76 ರನ್ ಗಳಿಸಿ ಸಂಕಷ್ಟಕ್ಕೆ ಸಿಲುಕಿದ್ದ ಆಸ್ಟ್ರೇಲಿಯದ ಬ್ಯಾಟಿಂಗ್‌ನ್ನು ಹೋರಾಟದ ಮೂಲಕ ಮುನ್ನಡೆಸಿದ ಸ್ಮಿತ್ ಶತಕದ ಕೊಡುಗೆ ನೀಡಿದರು. ಇದು ತಾನು ದಾಖಲಿಸಿರುವ ನಿಧಾನಗತಿಯ ಶತಕವಾಗಿದೆ ಎಂದು ಸ್ಮಿತ್ ಅಭಿಪ್ರಾಯಪಟ್ಟಿದ್ದಾರೆ.







