ವನಿತೆಯರ ಹಾಕಿ ರಾಷ್ಟ್ರೀಯ ಶಿಬಿರಕ್ಕೆ 33 ಆಟಗಾರ್ತಿಯರ ಆಯ್ಕೆ
ಬೆಂಗಳೂರು, ನ.25: ಭಾರತದ ಕ್ರೀಡಾ ಪ್ರಾಧಿಕಾರದಲ್ಲಿ ನ.26ರಿಂದ ಆರಂಭವಾಗಲಿರುವ ವನಿತೆಯರ ಹಾಕಿ ರಾಷ್ಟ್ರೀಯ ಶಿಬಿರಕ್ಕೆ 33 ಆಟಗಾರ್ತಿಯರು ಆಯ್ಕೆಯಾಗಿದ್ದಾರೆ.
ಡಿ.23ರ ತನಕ ರಾಷ್ಟ್ರ ಮಟ್ಟದ ಹಾಕಿ ಶಿಬಿರ ಬೆಂಗಳೂರಿನ ಕ್ರೀಡಾ ಪ್ರಾಧಿಕಾರದಲ್ಲಿ ನಡೆಯಲಿದೆ.
ಭಾರತದ ವನಿತಾ ತಂಡ ಇತ್ತೀಚೆಗೆ ಏಷ್ಯಾ ಕಪ್‌ನ ಫೈನಲ್‌ನಲ್ಲಿ ಚೀನಾವನ್ನು ಮಣಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತ್ತು. ಮುಂದಿನ ವರ್ಷ ಲಂಡನ್‌ನಲ್ಲಿ ನಡೆಯಲಿರುವ ವಿಶ್ವಕಪ್‌ಗೆ ತೇರ್ಗಡೆಯಾಗಿತ್ತು.ಇದರ ಜೊತೆಗೆ ಭಾರತದ ಮಹಿಳಾ ಹಾಕಿ ತಂಡ ಎಫ್‌ಐಎಚ್ ವಿಶ್ವ ರ್ಯಾಂಕಿಂಗ್‌ನಲ್ಲಿ 10ನೆ ಸ್ಥಾನ ಗಿಟ್ಟಿಸಿಕೊಂಡಿತ್ತು.
ಭಾರತದ ಹಾಕಿ ತಂಡಕ್ಕೆ 2018 ನಿರ್ಣಾಯಕ ವರ್ಷವಾಗಲಿದೆ. ಕಾಮನ್‌ವೆಲ್ತ್ ಗೇಮ್ಸ್, ಏಷ್ಯನ್ ಗೇಮ್ಸ್ ಮತ್ತು ವಿಶ್ವಕಪ್‌ನಲ್ಲಿ ಭಾರತದ ಮಹಿಳಾ ಹಾಕಿ ತಂಡಕ್ಕೆ ಸವಾಲು ಎದುರಾಗಲಿದೆ ಎಂದು ತಂಡದ ಪ್ರಧಾನ ಕೋಚ್ ಹರೇಂದರ್ ತಿಳಿಸಿದ್ದಾರೆ.
ಈ ಟೂರ್ನಮೆಂಟ್‌ಗಳಿಗೆ ಬಲಿಷ್ಠ ತಂಡವನ್ನು ಕಟ್ಟುವ ಉದ್ದೇಶಕ್ಕಾಗಿ ಆಟಗಾರ್ತಿಯರಿಗೆ ರಾಷ್ಟ್ರೀಯ ಶಿಬಿರದಲ್ಲಿ ತರಬೇತಿ ನೀಡಲಾಗುತ್ತಿದೆ. ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಫೈನಲ್ ತಲುಪುವುದು ಮತ್ತು ಏಷ್ಯನ್ ಗೇಮ್ಸ್ ನಲ್ಲಿ ಜಯಿಸುವ ಮೂಲಕ 2020ರ ಒಲಿಂಪಿಕ್ಸ್‌ಗೆ ತೆರ್ಗಡೆಯಾಗುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ ಎಂದು ಕೋಚ್ ಹರೇಂದರ್ ಹೇಳಿದ್ದಾರೆ.







