ಒತ್ತುವರಿ: ರಾಜೀವ್ ಚಂದ್ರಶೇಖರ್ ರೆಸಾರ್ಟ್ ಧ್ವಂಸಕ್ಕೆ ನೋಟಿಸ್

ತಿರುವನಂತಪುರ, ನ. 26: ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡು ನಿರ್ಮಿಸಿದ್ದ, ಕೇರಳ ಎನ್‌ಡಿಎ ಉಪಾಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಮಾಲೀಕತ್ವದ ರೆಸಾರ್ಟ್ ಧ್ವಂಸಗೊಳಿಸಲು ಅಲ್ಲಿನ ಗ್ರಾಮ ಪಂಚಾಯತ್ ನೋಟಿಸ್ ನೀಡಿದೆ.
ಕೊಟ್ಟಾಯಂ ಜಿಲ್ಲೆಯ ಕುಮಾರಕೋಮ್‌ನಲ್ಲಿ ನಿರ್ಮಿಸಿರುವ ಈ ರೆಸಾರ್ಟ್, ಕೇರಳ ಭತ್ತದ ಭೂಮಿ ಮತ್ತು ಜೌಗು ಪ್ರದೇಶದ ಸಂರಕ್ಷಣಾ ಕಾಯ್ದೆ- 2008ನ್ನು ಈ ಕಟ್ಟಡ ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ತಕ್ಷಣ ಇದನ್ನು ತೆರವು ಮಾಡುವಂತ ಗ್ರಾಮಪಂಚಾಯತ್ ಕಾರ್ಯದರ್ಶಿ ಇ. ವಿಷ್ಣು ನಂಬೂದಿರಿ ನೋಟಿಸ್ ನೀಡಿದ್ದಾರೆ.
ನಿರಾಮಯ ರೆಸಾರ್ಟ್ಸ್, ಬ್ಯಾಕ್‌ವಾಟರ್ಸ್ ಅಂಡ್ ಬಿಯಾಂಡ್ ಸಂಸ್ಥೆಯ ಕಟ್ಟಡ ಹಾಗೂ ಆವರಣ ಗೋಡೆಯನ್ನು ತೆರವುಗೊಳಿಸುವಂತೆ ಸೂಚಿಸಲಾಗಿದೆ. ಈ ರೆಸಾರ್ಟ್ ರಾಜೀವ್ ಚಂದ್ರಶೇಖರ್ ಅವರ ಹೂಡಿಕೆ ಘಟಕವಾದ ಜ್ಯುಪಿಟರ್ ಕ್ಯಾಪಿಟಲ್‌ನ ಮಾಲಕತ್ವದಲ್ಲಿದೆ. 15 ದಿನಗಳ ಒಳಗಾಗಿ ಕಟ್ಟಡ ತೆರವುಗೊಳಿಸಬೇಕು ಹಾಗೂ ಯಾವುದೇ ಸ್ಪಷ್ಟನೆಗಳನ್ನು ಬಯಸಿದಲ್ಲಿ ಆ ಅವಧಿಯೊಳಗೆ ಅದನ್ನು ಪೂರ್ಣಗೊಳಿಸಬೇಕು ಎಂದು ಸೂಚಿಸಲಾಗಿದೆ.
ಈ ಕಟ್ಟಡ ವೆಂಬನಾಡ್ ಸರೋವರದ ಏಳೂವರೆ ಸೆಂಟ್ಸ್ ಜಾಗವನ್ನು ಹಾಗೂ ಸನಿಹದಲ್ಲಿರುವ ಕಾಲುವೆಯನ್ನು ಒತ್ತುವರಿ ಮಾಡಿಕೊಂಡಿದೆ ಎಂದು ಆಪಾದಿಸಲಾಗಿತ್ತು. ಸಿಪಿಎಂನ ಯುವ ಘಟಕವಾದ ಡಿವೈಎಫ್‌ಐ ಕಾರ್ಯಕರ್ತರು ರೆಸಾರ್ಟ್‌ನಲ್ಲಿ ದಾಂಧಲೆ ನಡೆಸಿ, ಕಿಟಗಿ ಹಾಗೂ ಬಾಗಿಲುಗಳಿಗೆ ಹಾನಿ ಮಾಡಿದ ಮರುದಿನವೇ ಈ ಆದೇಶ ಹೊರಬಿದ್ದಿದೆ.
ಆದರೆ ಈ ಆರೋಪ ಆಧಾರರಹಿತ. ಇದರ ವಿರುದ್ಧ ಕಾನೂನಾತ್ಮಕ ಹೋರಾಟ ಮಾಡುವುದಾಗಿ ರೆಸಾರ್ಟ್ ಅಧಿಕಾರಿಗಗಳು ಹೇಳಿದ್ದಾರೆ. ಡಿವೈಎಫ್‌ಐ ಕಾರ್ಯಕರ್ತರು ನಡೆಸಿದ ದಾಂಧಲೆಯನ್ನು ರಾಜೀವ್ ಚಂದ್ರಶೇಖರ್ ಟ್ವೀಟ್ ಮೂಲಕ ಖಂಡಿಸಿದ್ದಾರೆ.
ಈ ತಿಂಗಳ ಆರಂಭದಲ್ಲಿ, ಎನ್‌ಸಿಪಿ ಮುಖಂಡ ಥೋಮಸ್ ಚಾಂಡಿ ಕೂಡಾ ಭೂ ಒತ್ತುವರಿ ಹಗರಣದಲ್ಲಿ ಸಿಕ್ಕಿಹಾಕಿಕೊಂಡು ರಾಜೀನಾಮೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

More #LeftViolence in #Kerala - stung by unrelenting media coverage n my #NGT petition on his complicity in #Munnar encroachmnt - @CMOKerala @vijayanpinarayi unleashes his goons on company linked to me ! pic.twitter.com/CPMy9NKM93
— Rajeev Chandrasekhar (@rajeev_mp) November 24, 2017







