ಧರ್ಮಸಂಸದ್: ಕಾಶಿ ಸ್ವಾಮೀಜಿಯ ಮೀಸಲಾತಿ ವಿರೋಧಿ ಭಾಷಣ ತಡೆದ ಸಂಘಟಕರು
ಮನೆಯಲ್ಲಿ ಆಯುಧಗಳನ್ನು ಇಟ್ಟುಕೊಳ್ಳಬೇಕು ಎಂದ ಸ್ವಾಮೀಜಿ!

ಉಡುಪಿ, ನ.26: ಇಂದಿನ ಧರ್ಮಸಂಸದ್ ಗೋಷ್ಠಿಯಲ್ಲಿ ಮೀಸಲಾತಿ ವಿರುದ್ಧವಾಗಿ ಮಾತನಾಡುತ್ತಿದ್ದ ಕಾಶಿ ಬನಾರಸ್‌ನ ಶಂಕರಾಚಾರ್ಯ ಸ್ವಾಮಿ ನರೇಂದ್ರನ್ ಸರಸ್ವತಿ ಭಾಷಣವನ್ನು ತಡೆದ ಸಂಘಟಕರು ಮೀಸಲಾತಿ ಬಗ್ಗೆ ಪ್ರಸ್ತಾಪಿಸದಂತೆ ಸೂಚಿಸಿದ ಪ್ರಸಂಗ ನಡೆಯಿತು.
ತನ್ನ ಭಾಷಣದ ಆರಂಭದಲ್ಲಿ ಸ್ವಾಮಿ ನರೇಂದ್ರನ್ ಸರಸ್ವತಿ, ಭಾರತದಲ್ಲಿ ಪ್ರತಿಭೆ ಆಧಾರದ ಮೇಲೆ ಮೀಸಲಾತಿ ನೀಡಬೇಕೆ ಹೊರತು ಧರ್ಮ, ಜಾತಿ ಆಧಾರದಲ್ಲಿ ನೀಡಬಾರದು. ದೇಶದಲ್ಲಿ ಜಾತಿ ಆಧಾರಿತ ಮೀಸಲಾತಿಯನ್ನು ನಿರ್ನಾಮ ಮಾಡಬೇಕು ಎಂದು ಹೇಳಿದರು.
ಈ ಸಂದರ್ಭ ಮಧ್ಯ ಪ್ರವೇಶಿಸಿದ ಸಂಘಟಕರು ಇಲ್ಲಿ ಮೀಸಲಾತಿ ಬಗ್ಗೆ ಪ್ರಸ್ತಾಪ ಮಾಡಬಾರದು ಎಂದು ಸ್ವಾಮೀಜಿಗೆ ಸೂಚಿಸಿದರು. ನಂತರ ಅವರು ಆ ವಿಚಾರವನ್ನು ಬಿಟ್ಟು ತನ್ನ ಭಾಷಣ ಮುಂದುವರಿಸಿದರು. ದೇಶದ ಮೇಲೆ ಚೀನಾ ಹಾಗೂ ಭಯೋತ್ಪಾದನೆ ದಾಳಿಗಳನ್ನು ಎದುರಿಸಲು ನಾವು ಸಜ್ಜಾಗ ಬೇಕು. ಮನೆಯಲ್ಲಿ ಒಂದು ಲಕ್ಷ ರೂ. ಮೌಲ್ಯದ ಮೊಬೈಲ್ ಇಟ್ಟುಕೊಳ್ಳುವ ನಾವು ನಮ್ಮ ರಕ್ಷಣೆಗೆ ಆಯುಧಗಳನ್ನು ಇಟ್ಟುಕೊಳ್ಳಬೇಕು. ಇದು ಬೇರೆಯವ ರನ್ನು ದಂಡಿಸಲು ಅಲ್ಲ. ರಾಷ್ಟ್ರದ್ರೋಹಿಗಳಿಂದ ಹಿಂದೂ ಹಾಗೂ ದೇಶದ ರಕ್ಷಣೆಗಾಗಿ ಎಂದು ಅವರು ತಿಳಿಸಿದರು.
ಗೋ ಮಾಂಸ ವಿದೇಶಗಳಿಗೆ ರಫ್ತು ಆಗುವುದನ್ನು ಸಂಪೂರ್ಣ ನಿಲ್ಲಿಸಬೇಕು. ಗೋ ಮಾಂಸಕ್ಕೆ ನೀಡುವ ಪರವಾನಿಗೆಯನ್ನು ರದ್ದುಗೊಳಿಸಬೇಕು. ಅತಿಕ್ರಮಣ ಆಗಿರುವ ಗೋಚರ ಭೂಮಿಗಳನ್ನು ಮರು ವಶಪಡಿಸಿಕೊಂಡು ಗೋವುಗಳಿಗೆ ಮೀಸಲಿಡಬೇಕು. ರಾಮ ಮಂದಿರ ನಿರ್ಮಾಣ ವಿಚಾರದಲ್ಲಿ ಈಗಾಗಲೇ ಧೃಢ ನಿಶ್ಚಯ ಮಾಡಿದ್ದು, ಇದರಲ್ಲಿ ಯಾವುದೇ ಬದಲಾವಣೆ ಇಲ್ಲ. ರಾಮ ಮಂದಿರ ದೇಶದ ಮಂದಿರ ಎಂದರು.
ಈ ದೇಶದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿ ಬರಬೇಕು. ಚೀನಾ ದೇಶದಂತೆ ಕಠಿಣ ಜನಸಂಖ್ಯೆ ನಿಯಂತ್ರಣ ಕಾಯಿದೆಯನ್ನು ಭಾರತದಲ್ಲೂ ಜಾರಿಗೆ ತರಬೇಕು. ಚೀನಾ, ಪಾಕಿಸ್ತಾನದ ಬೆದರಿಕೆ ಹಿನ್ನೆಲೆಯಲ್ಲಿ ನಮ್ಮ ದೇಶದ ಸೈನ್ಯ ವನ್ನು ಬಲಪಡಿಸಿ ವಿಶೇಷ ಅಧಿಕಾರವನ್ನು ನೀಡಬೇಕು ಎಂದು ಅವರು ಹೇಳಿದರು.







