ದಾವಣಗೆರೆ : ಶಾಸಕ ಎಂ.ಪಿ.ರವೀಂದ್ರ ಚುನಾವಣಾ ರಾಜಕೀಯಕ್ಕೆ ನಿವೃತ್ತಿ

ದಾವಣಗೆರೆ, ನ. 26: ಹಿರಿಯ ರಾಜಕಾರಣಿ ದಿ. ಎಂ.ಪಿ.ಪ್ರಕಾಶ್ ಅವರ ಪುತ್ರ ಹರಪನಹಳ್ಳಿ ಕಾಂಗ್ರೆಸ್ ಶಾಸಕ ಎಂ.ಪಿ. ರವೀಂದ್ರ ಅವರು ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ.
ರವಿವಾರ ಹರಪ್ಪನಹಳ್ಳಿಯ ಪ್ರವಾಸಿ ಮಂದಿರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲುಷಿತ ರಾಜಕೀಯ, ದುಬಾರಿ ಚುನಾವಣೆ, ನನ್ನ ವೈಯಕ್ತಿಕ ಸಮಸ್ಯೆಯ ಕಾರಣದಿಂದ ಮನನೊಂದು ಸಕ್ರೀಯ ಚುನಾವಣಾ ರಾಜಕೀಯದಿಂದ ದೂರ ಸರಿಯುವ ನಿರ್ಧಾರ ಮಾಡಿದ್ದೇನೆ. ನಾನು ಯಾವ ಪಕ್ಷಕ್ಕೂ ಹೋಗಲ್ಲ, ನಾನು ಬಹಳ ದಿನಗಳಿಂದ ಆಲೋಚನೆ ಮಾಡಿ ಈ ತೀರ್ಮಾನ ಮಾಡಿದ್ದೇನೆ ಎಂದು ಹೇಳುವ ಸಮಯದಲ್ಲಿ ಅವರು ಭಾವುಕರಾದರು.
ನಾನು ಪಕ್ಷ ಸೂಚಿಸುವ ಆಭ್ಯರ್ಥಿಗೆ ಬೆಂಬಲಿಸುತ್ತೇನೆ. ನಾನು ಕಿಂಗ್ ಮೇಕರ್ ಆಗಬೇಕೆಂದು ಬಯಸಿದ್ದೇನೆ. ಕಾಂಗ್ರೆಸ್ ಪಕ್ಷದಲ್ಲಿಯೇ ಇರುತ್ತೇನೆ. ಅದರೆ, ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸುತ್ತೇನೆ. ನಾನು ಯಾವ ಪಕ್ಷಕ್ಕೂ ಹೋಗುವುದಿಲ್ಲ. ಯಾವುದೇ ಪಕ್ಷದಿಂದ ನನಗೆ ಆಹ್ವಾನವೂ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.
ಪಕ್ಷ ಎಂದೂ ನನ್ನನ್ನು ಕಡೆಗಣಿಸಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಮ್ಮ ತಾಲ್ಲೂಕಿನಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ. 60 ಕೆರೆ ತುಂಬಿಸುವ ಕೆಲಸವನ್ನು ಮಾಡಿದ್ದಾರೆ. ಅದ್ದರಿಂದ ನಾನು ಕಾಂಗ್ರೆಸ್ ಪಕ್ಷದಲ್ಲಿ ಕೊನೆಯವರೆಗೂ ಇರುತ್ತೇನೆ ಎಂದರು.







