ಮೆಸ್ಕಾಂ ವಿದ್ಯುತ್ ಬಿಲ್ ಬಾಕಿ ಕಟ್ಟಲು 5.67 ಕೋಟಿ ರೂ. ಅನುದಾನ ಬಿಡುಗಡೆ: ಎಂ. ಮಾದಪ್ಪ

ಕಡೂರು,ನ.26: ಕಡೂರು ಮತ್ತು ಬೀರೂರು ಪಟ್ಟಣಗಳಿಗೆ ಭದ್ರಾ ಯೋಜನೆಯಡಿ ಕುಡಿಯುವ ನೀರು ಸರಬರಾಜಾಗುತ್ತಿದ್ದು, ಭದ್ರಾ ಜಾಕ್‍ವೆಲ್ ಮತ್ತು ತರೀಕೆರೆ ಸಮೀಪದ ಜಾಕ್‍ವೆಲ್‍ಗಳ ವಿದ್ಯುತ್ ಬಿಲ್ ಬಾಕಿಯನ್ನು ಎರಡೂ ಪುರಸಭೆಗಳು ಕಟ್ಟಬೇಕಾಗಿತ್ತು. ಪುರಸಭೆಗಳು ವಿದ್ಯುತ್ ಬಿಲ್ ಕಟ್ಟಲು ಶಕ್ತವಾಗಿಲ್ಲವೆಂಬ ಮನವಿ ಮೇರೆಗೆ ಸರ್ಕಾರ ಪುರಸಭೆಗೆ 5.67 ಕೋಟಿ ರೂಗಳನ್ನು ನೀಡಿದ್ದು, ಈ ಹಣವನ್ನು ಮೆಸ್ಕಾಂಗೆ ಕಟ್ಟಲಾಗುವುದು ಎಂದು ಕಡೂರು ಪುರಸಭೆಯ ಅಧ್ಯಕ್ಷ ಎಂ. ಮಾದಪ್ಪ ತಿಳಿಸಿದರು.
ಅವರು ಪುರಸಭೆಯ ತಮ್ಮ ಕಛೇರಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ವಿದ್ಯುತ್ ಬಿಲ್ ಕಟ್ಟಲು ಹಲವಾರು ಬಾರಿ ಮೆಸ್ಕಾಂನಿಂದ ನೋಟಿಸ್ ನೀಡಿದ್ದು, ವಿದ್ಯುತ್ ಸರಬರಾಜನ್ನು ನಿಲ್ಲಿಸುವುದಾಗಿ ನೋಟಿಸ್ ನೀಡಿದೆ. ನಮ್ಮ ಮನವಿಯನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ, ಇಂಧನ ಸಚಿವರಾದ ಡಿ.ಕೆ. ಶಿವಕುಮಾರ್‍ರವರಿಗೆ ಕ್ಷೇತ್ರದ ಶಾಸಕರಾದ ವೈ.ಎಸ್.ವಿ. ದತ್ತಾರವರು ಮತ್ತು ಮತ್ತು ಕಾಂಗ್ರೆಸ್ ಮುಖಂಡರುಗಳು ಮನವಿ ಮಾಡಿದ್ದರ ಫಲವಾಗಿ ಈ ಹಣ ಬಂದಿದ್ದು, ಇವರುಗಳಿಗೆ ಕಡೂರು ಪುರಸಭೆ ಎಲ್ಲಾ ಸದಸ್ಯರುಗಳು ಹಾಗೂ ಜನತೆಯ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸಲಾಗುವುದು ಎಂದು ತಿಳಿಸಿದರು.
ಹರ್ಬನ್ ವಾಟರ್ ಸರಬರಾಜು ಮಂಡಳಿಯವರು ಎರಡು ಜಾಕ್‍ವಲ್‍ಗಳನ್ನು ಕಡೂರು ಮತ್ತು ಬೀರೂರು ಪುರಸಭೆಯವರು ವಹಿಸಿಕೊಳ್ಳಬೇಕಿದೆ ಎಂದು ಅಂತಿಮ ನೋಟಿಸ್ ನೀಡಿರುತ್ತಾರೆ. ಈ ಎರಡೂ ಜಾಕ್‍ವೆಲ್‍ಗಳನ್ನು ಪುರಸಭೆಯವರು ತಮ್ಮ ವಶಕ್ಕೆ ಪಡೆದುಕೊಳ್ಳಲು ಸುಮಾರು 50 ಲಕ್ಷ ರೂಗಳು ಬೇಕಾಗಿದೆ. ಪಟ್ಟಣದಲ್ಲಿ ವಿದ್ಯುತ್ ಲೈನ್ ಹೊಸದಾಗಿ ಅಳವಡಿಸಲು, ಎಲ್.ಇ.ಡಿ. ಬಲ್ಪ್‍ಗಳನ್ನು ಅಳವಡಿಸಲು, ಬೀದಿ ದೀಪಗಳನ್ನು ಅಳವಡಿಸಲು ಮೆಸ್ಕಾಂಗೆ ಪುರಸಭೆಯಿಂದ 85 ಲಕ್ಷ ರೂಗಳನ್ನು ನೀಡಲಾಗಿದೆ. ಈ ಕಾಮಗಾರಿ ಸಧ್ಯದಲ್ಲೇ ಪ್ರಾರಂಭವಾಗಲಿದೆ ಎಂದು ಹೇಳಿದರು.
ಪಟ್ಟಣದ ಎಲ್ಲಾ 23 ವಾರ್ಡುಗಳಲ್ಲಿ ಕಳೆದ 5 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಮೂಲಭೂತ ಸವಲತ್ತುಗಳಾದ ಕಾಂಕ್ರೀಟ್ ರಸ್ತೆ, ಕಾಂಕ್ರೀಟ್ ಚರಂಡಿ, ರಸ್ತೆ ಡಾಂಬರೀಕರಣ ಮಾಡಲು 4 ಕೋಟಿ ರೂಗಳನ್ನು ಲೋಕೋಪಯೋಗಿ ಇಲಾಖೆಗೆ ನೀಡಲಾಗಿದೆ. ಈ ಕಾಮಗಾರಿಗಳು ಪ್ರಾರಂಭವಾಗಿ ಈಗಾಗಲೇ ಮುಗಿಯುವ ಹಂತದಲ್ಲಿದೆ. ಎಲ್ಲಾ ವಾರ್ಡುಗಳಿಗೆ ಹೊಸದಾಗಿ ಪೈಪ್‍ಲೈನ್ ಅಳವಡಿಸಲು 85 ಲಕ್ಷ ರೂಗಳು ಮಂಜೂರಾಗಿದ್ದು, ಈಗಾಗಲೇ ಕಾಮಗಾರಿಗಳು ಪ್ರಾರಂಭವಾಗಿ ಫೆಬ್ರವರಿ ಹಂತಕ್ಕೆ ಎಲ್ಲಾ ಕಾಮಗಾರಿಗಳು ಮುಕ್ತಾಯಗೊಳ್ಳಲಿದೆ ಎಂದರು.
ಪಟ್ಟಣದಲ್ಲಿ ಹೊಸ ಬಡಾವಣೆಗಳನ್ನು ಅಭಿವೃದ್ಧಿಪಡಿಸಲು 10 ಕೋಟಿ ರೂಗಳ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಅನುದಾನ ಬಂದರೆ ಎಲ್ಲಾ ಹೊಸ ಬಡಾವಣೆಗಳಿಗೆ ಮೂಲಭೂತ ಸವಲತ್ತುಗಳನ್ನು ಒದಗಿಸುವುದರ ಮೂಲಕ ಅಭಿವೃದ್ಧಿಪಡಿಸಲಾವುದು. ಪಟ್ಟಣದ ಎಲ್ಲಾ ವಾರ್ಡುಗಳಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದು, ಇದಕ್ಕಾಗಿ ಸಹಕರಿಸಿದ ಕ್ಷೇತ್ರದ ಶಾಸಕರಾದ ವೈ.ಎಸ್.ವಿ. ದತ್ತಾರವರಿಗೆ, ಪುರಸಭೆಯ ಎಲ್ಲಾ ಸದಸ್ಯರುಗಳಿಗೆ, ಸಾರ್ವಜನಿಕರಿಗೆ ಪುರಸಭೆ ವತಿಯಿಂದ ಅಭಿನಂದಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪುರಸಭಾ ಮುಖ್ಯಾಧಿಕಾರಿ ಹರೀಶ್, ಸದಸ್ಯ ಮೈಲಾರಪ್ಪ ಉಪಸ್ಥಿತರಿದ್ದರು.







