ಯಾವುದೇ ಸರಕಾರ ಕೋಮು ಸಂಘರ್ಷಕ್ಕೆ ಅವಕಾಶ ಕೊಡಬಾರದು: ಸಿದ್ದರಾಮಯ್ಯ
ಮುಖ್ಯಮಂತ್ರಿಗಳಿಂದ ಸಂವಿಧಾನ ಪೀಠಿಕೆ ಅನಾವರಣ

ಬೆಂಗಳೂರು, ನ.26: ದೇಶವನ್ನಾಳುವ ಯಾವುದೇ ಪಕ್ಷದ ಸರಕಾರ ಜಾತಿ ಹಾಗೂ ಕೋಮು ಸಂಘರ್ಷಕ್ಕೆ ಅವಕಾಶ ಮಾಡಿಕೊಡದಂತೆ ಆಡಳಿತ ನಡೆಸುವುದೇ ಸಂವಿಧಾನಕ್ಕೆ ನಾವು ಕೊಡುವ ಗೌರವವೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ರವಿವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಹಮ್ಮಿಕೊಳ್ಳಲಾದ ಸಮಾರಂಭದಲ್ಲಿ ಸಂವಿಧಾನದ ಪೀಠಿಕೆಯನ್ನು ಒಳಗೊಂಡ ಫಲಕವನ್ನು ಅನಾವರಣಗೊಳಿಸಿ ಮಾತನಾಡಿದ ಅವರು, ನಮ್ಮ ಸಂವಿಧಾನದ ಪೀಠಿಕೆಯಲ್ಲಿ ತಿಳಿಸಿರುವಂತೆ ಭಾರತವನ್ನು ಸಾರ್ವಭೌಮ, ಸಮಾಜವಾದಿ, ಜಾತ್ಯತೀತ ಪ್ರಜಾಸತ್ತಾತ್ಮಕ ಗಣರಾಜ್ಯವನ್ನಾಗಿ ರೂಪಿಸುವುದಕ್ಕಾಗಿ ದೇಶದ ಎಲ್ಲ ಪ್ರಜೆಗಳಿಗೆ ಶ್ರಮಿಸಬೇಕಿದೆ ಎಂದು ತಿಳಿಸಿದರು.
ವ್ಯಕ್ತಿಗೌರವ, ದೇಶದ ಏಕತೆ ಮತ್ತು ಸಮಗ್ರತೆಗಾಗಿ ಎಲ್ಲರಲ್ಲಿ ಭ್ರಾತೃತ್ವ ಭಾವನೆಯನ್ನು ಮೂಡಿಸುವುದಕ್ಕೆ ಎಲ್ಲರೂ ದೃಢಸಂಕಲ್ಪಮಾಡಬೇಕಿದೆ. ಸಂವಿಧಾನದಲ್ಲಿ ಉಲ್ಲೇಖಿಸಲಾದ ನ್ಯಾಯ, ಸಹಬಾಳ್ವೆ ತತ್ವಗಳನ್ನು ಅಳವಡಿಸಿಕೊಳ್ಳಬೇಕು. ಪ್ರತಿಯೊಬ್ಬರೂ ಅವರವರ ಧರ್ಮಪಾಲನೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಆ ರೀತಿಯಲ್ಲಿ ಧಾರ್ಮಿಕ ಸೌಹಾರ್ದತೆಯಿಂದ ಬದುಕನ್ನು ನಡೆಸಬೇಕಿದೆ ಎಂದು ಅವರು ಆಶಿಸಿದರು.
ದೇಶದ ಪ್ರತಿಯೊಬ್ಬ ಪ್ರಜೆಯೂ ಸಂವಿಧಾನದ ಚೌಕಟ್ಟಿನಲ್ಲಿ ಕೆಲಸ ಮಾಡಬೇಕು. ಸಂವಿಧಾನದ ಸಮರ್ಪಣಾ ದಿನವಾದ ಜ.26ರ ದಿನವನ್ನು ಗೌರವದಿಂದ ಸ್ಮರಿಸೋಣ. ನಮ್ಮ ಸಂಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ರವರ ಪರಿಶ್ರಮದ ಫಲವಾಗಿ ಸಂವಿಧಾನ ರೂಪುಗೊಂಡಿದೆ. ಅದರ ಪಾಲನೆಯಿಂದ ನಮ್ಮ ದೇಶಕ್ಕೆ, ಸರಕಾರಕ್ಕೆ ಗೌರವ ತರೋಣ ಎಂದು ಅವರು ತಿಳಿಸಿದರು.
ಸಭೆಯಲ್ಲಿ ಸಾರಿಗೆ ಸಚಿ ಎಚ್.ಎಂ.ರೇವಣ್ಣ, ಶಾಸಕ ಜಮೀರ್ ಅಹ್ಮದ್, ಭೈರತಿ ಬಸವರಾಜ್, ಸರಕಾರದ ಮುಖ್ಯ ಕಾರ್ಯದರ್ಶಿ ಸುಭಾಷ್‌ಚಂದ್ರ ಕುಂಟಿಯಾ, ಅಪರ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್, ಮೇಯರ್ ಸಂಪತ್‌ರಾಜ್ ಮತ್ತಿತರರಿದ್ದರು.
ಅದು ನಂಬಿಕೆ ಇಲ್ಲದವರ ಮಾತು
ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿಗೆ ಡಾ.ಬಿ.ಆರ್.ಅಂಬೇಡ್ಕರ್ ರಚಿಸಿರುವ ಸಂವಿಧಾನದ ಕುರಿತು ನಂಬಿಕೆಯಿಲ್ಲ. ನಂಬಿಕೆ ಇಲ್ಲದವರು ಈ ರೀತಿ ಮಾತನಾಡುತ್ತಾರೆ. ಎಲ್ಲಾ ಧರ್ಮಗಳನ್ನು ಸಮಾನವಾಗಿ ಗೌರವಿಸಬೇಕು ಎಂದು ಸಂವಿಧಾನದಲ್ಲಿ ಹೇಳಲಾಗಿದೆ. ಆ ಪ್ರಕಾರ ಎಲ್ಲಾ ಧರ್ಮಗಳನ್ನು ಗೌರವಿಸುವುದು ನಮ್ಮ ಕೆಲಸ. ಆದರೆ ಸಂವಿಧಾನವನ್ನೇ ಪುನಾರಚನೆ ಮಾಡಬೇಕು ಎನ್ನುವ ಕ್ರಮ ಸರಿಯಲ್ಲ. ಈ ರೀತಿ ಮಾತನಾಡುತ್ತಿರುವುದು ಅವಾಸ್ತವಿಕ.







