ಯುದ್ಧವಿಮಾನ ತೇಜಸ್‌ಗೆ ಬ್ರಹ್ಮೋಸ್ ಲೈಟ್ ಬಲ

ಹೊಸದಿಲ್ಲಿ, ನ.26: ದೇಶೀಯ ನಿರ್ಮಿತ ಸೂಪರ್‌ಸೋನಿಕ್ ಬ್ರಹ್ಮೋಸ್ ಕ್ಷಿಪಣಿಯನ್ನು ಸುಕೋಯ್ 30ರ ಜೊತೆ ಯಶಸ್ವಿಯಾಗಿ ಉಡಾವಣೆ ನಡೆಸಿ ಸಶಸ್ತ್ರ ಪಡೆಗಳಿಗೆ ತಾಂತ್ರಿಕ ಮೇಲುಗೈ ಒದಗಿಸಿರುವ ಬೆನ್ನಲ್ಲೇ ಇದೀಗ ವಾಯುಪಡೆಯಲ್ಲಿರುವ ಅತ್ಯಂತ ಹಗುರವಾದ ಯುದ್ಧ ವಿಮಾನ ತೇಜಸ್‌ನಿಂದ ಉಡಾಯಿಸಬಲ್ಲಂಥಾ ಬ್ರಹ್ಮೋಸ್‌ನ ಹಗುರವಾದ ಮಾದರಿ ಬ್ರಹ್ಮೋಸ್ ಲೈಟನ್ನು ಅಭಿವೃದ್ಧಿಪಡಿಸಲು ಸಿದ್ಧತೆಗಳು ನಡೆಯುತ್ತಿವೆ.
ಬ್ರಹ್ಮೋಸ್‌ನ ಹೊಸ ಮಾದರಿಯ ಇಂಜಿನ್ ಸಣ್ಣದಾಗಿರುತ್ತದೆ. ಅದರ ಸಿಡಿತಲೆಯು ಬಹುತೇಕ ಒಂದೇ ಆಗಿದ್ದರೂ ಕ್ಷಿಪಣಿಯ ತೂಕ ಮಾತ್ರ ಗಣನೀಯವಾಗಿ ಕಡಿಮೆಯಾಗಲಿದೆ. ಹಗುರವಾದ ಕ್ಷಿಪಣಿ ಕ್ರಮಿಸುವ ದೂರ ಕೂಡಾ 300 ಕಿ.ಮೀ ಆಗಿರಲಿದೆ ಎಂದು ಹಿರಿಯ ಭದ್ರತಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸದ್ಯ ಈ ಕ್ಷಿಪಣಿಯ ವಿನ್ಯಾಸವನ್ನು ಸಿದ್ಧಪಡಿಸಲಾಗಿದ್ದು ಆರಂಭಿಕ ಸಮಾಲೋಚನೆಯಷ್ಟೇ ನಡೆದಿದೆ. ಈ ಕ್ಷಿಪಣಿಯು 2019ರ ಹೊತ್ತಿಗೆ ಸಿದ್ಧವಾಗಲಿದೆ ಎಂದವರು ತಿಳಿಸಿದ್ದಾರೆ. ಬ್ರಹ್ಮೋಸ್ (ಬ್ರ ಅಂದರೆ ಬ್ರಹ್ಮಪುತ್ರ, ಮೋಸ್ ಅಂದರೆ ಮೋಸ್ಕೊ) ಕ್ಷಿಪಣಿಯನ್ನು 90ರ ದಶಕದಲ್ಲಿ ಜಂಟಿಯಾಗಿ ಅಭಿವೃದ್ಧಿಪಡಿಸಲಾಯಿತು. ಅದರ ವೇಗವೇ ಅದನ್ನು ತಡೆಯಲು ಅಸಾಧ್ಯವಾಗಿಸುತ್ತದೆ. ಸುಕೋಯ್ 30 ವಿಮಾನಕ್ಕೆ ಹೋಲಿಸಿದರೆ ತೇಜಸ್ ಬಹಳ ಹಗುರವಾದ ಯುದ್ಧ ವಿಮಾನವಾಗಿರುವುದರಿಂದ ಹಗುರವಾದ ಕ್ಷಿಪಣಿಯ ಅಗತ್ಯವಿದೆ. ಭವಿಷ್ಯದಲ್ಲಿ 120 ತೇಜಸ್ ಯುದ್ಧ ವಿಮಾನಗಳನ್ನು ಹೊಂದುವ ಗುರಿಯನ್ನು ಭಾರತೀಯ ಪಡೆ ಹೊಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.







