ಸುಳ್ಳೇ ಮೋದಿಯ ರಾಜಕೀಯ ಬಂಡವಾಳ : ಮಾಯಾವತಿ
ಬೆಂಗಳೂರಿನಲ್ಲಿ ದಕ್ಷಿಣ ಭಾರತದ ರಾಜ್ಯಗಳ ಜಾಗೃತಿ ಬೃಹತ್ ಸಮಾವೇಶ

ಬೆಂಗಳೂರು, ನ.26: ಪ್ರಧಾನಿ ನರೇಂದ್ರ ಮೋದಿ ‘ಸುಳ್ಳು’ ಹೇಳುವುದನ್ನೆ ರಾಜಕೀಯ ಬಂಡವಾಳ ಮಾಡಿಕೊಂಡಿದ್ದು, ದೇಶದ ಪ್ರಗತಿಯನ್ನೆ ಮರೆತಿದ್ದಾರೆ ಎಂದು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ, ಬಿಎಸ್ಪಿ ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ ಹೇಳಿದ್ದಾರೆ.
ರವಿವಾರ ನಗರದ ಸೆಂಟ್ರಲ್ ಕಾಲೇಜು ಮೈದಾನದಲ್ಲಿ ಕೇಂದ್ರ ಸರಕಾರದ ಜನವಿರೋಧಿ ನೀತಿ ಹಾಗೂ ಅಲ್ಪಸಂಖ್ಯಾತ, ಹಿಂದುಳಿದ, ದಲಿತ(ಅಹಿಂದ) ಸಮುದಾಯವನ್ನೆ ಗುರಿಯಾಗಿಸಿಕೊಂಡು ದೇಶದೆಲ್ಲೆಡೆ ನಡೆಯುತ್ತೀರುವ ದೌರ್ಜನ್ಯಗಳ ವಿರುದ್ಧ ಬಿಎಸ್ಪಿ ಹಮ್ಮಿಕೊಂಡಿದ್ದ ದಕ್ಷಿಣ ಭಾರತದ ರಾಜ್ಯಗಳ ಜಾಗೃತಿ ಬೃಹತ್ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಹಸಿವು, ಬಡತನ, ನಿರುದ್ಯೋಗ, ಆರ್ಥಿಕ ಪರಿಸ್ಥಿತಿ ಸೇರಿದಂತೆ ನಾನಾ ಸಮಸ್ಯೆಗಳು ದೇಶದಲ್ಲಿ ಹೆಚ್ಚಾಗಿವೆ. ಆದರೆ, ಇದಕ್ಕೆಲ್ಲಾ ಪರಿಹಾರ ಒದಗಿಸುವ ಬದಲು ‘ನವ ಭಾರತ ನಿರ್ಮಾಣ’ ಎಂದು ಹೇಳಿಕೊಂಡು, ಜನರನ್ನು ಮೂರ್ಖರನ್ನಾಗಿ ಮಾಡಲು ನರೇಂದ್ರ ಮೋದಿ ಸರಕಾರ ಹೊರಟಿದೆ. ಅಲ್ಲದೆ, ಮೋದಿಯ ವಿದೇಶಿ ಪ್ರವಾಸದಿಂದಾಗಿ ದೇಶಕ್ಕೆ ಒಂದು ರೂಪಾಯಿಯೂ ಲಾಭ ಆಗಿಲ್ಲ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ಪಕ್ಷ ಆಡಳಿತದಲ್ಲಿರುವ ರಾಜ್ಯಗಳಲ್ಲಿ ಇಂದಿಗೂ ದಲಿತ, ಹಿಂದುಳಿದ, ಅಲ್ಪಸಂಖ್ಯಾತ, ಕೂಲಿ ಕಾರ್ಮಿಕರನ್ನು ಗುರಿಯಾಗಿಸಿಕೊಂಡು ಹಲ್ಲೆ, ದೌರ್ಜನ್ಯ ನಡೆಸಲಾಗುತ್ತಿದೆ. ಉತ್ತರಪ್ರದೇಶದಲ್ಲೂ ಕ್ಷುಲ್ಲಕ ಕಾರಣಕ್ಕೆ ದಲಿತರ ಕೊಲೆಗಳು ನಡೆಯುತ್ತಿವೆ. ಇಂತಹ ಆತಂಕದ ವಾತಾವರಣದಲ್ಲಿರುವ ಬಹುಜನರು, ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳಲು ಹೋರಾಟ ಮಾಡಬೇಕು ಎಂದು ಕರೆ ನೀಡಿದರು.
ಮೀಸಲಾತಿ ಕೇವಲ ದಲಿತ ಸಮುದಾಯಕ್ಕೆ ಮಾತ್ರವಲ್ಲದೆ, ಹಿಂದುಳಿದ, ಅಲ್ಪಸಂಖ್ಯಾತ, ಶೋಷಿತರಿಗೂ ದೊರೆತಿದೆ. ಆದರೆ, ಇಂದು ಮೀಸಲಾತಿ ಅಪಾಯದಲ್ಲಿದೆ. ಮೀಸಲಾತಿ ವಿರೋಧ ಮಾಡುವವರು ಎಲ್ಲ ಪಕ್ಷಗಳಲ್ಲಿದ್ದಾರೆ ಎಂದ ಅವರು, ಖಾಸಗಿ ವಲಯದಲ್ಲಿ ಮೀಸಲಾತಿಗಾಗಿ ಹಲವು ಬಾರಿ ಹೋರಾಟ ಮಾಡಿದರೂ ಇದುವರೆಗೂ ದೊರೆತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಇವಿಎಂ: ಎಲೆಕ್ಟ್ರಾನಿಕ್ ಮತಯಂತ್ರಗಳನ್ನು (ಇವಿಎಂ) ದುರ್ಬಳಕೆ ಮಾಡಿಕೊಂಡ ಬಿಜೆಪಿ ಪಕ್ಷ 2014ರ ಲೋಕಸಭೆ ಚುನಾವಣೆಯಲ್ಲಿ ಗೆಲವು ಸಾಧಿಸಿತು. ಅದೇ ರೀತಿ, ಉತ್ತರಪ್ರದೇಶದಲ್ಲೂ ಗೆಲವು ಸಾಧಿಸಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಾಶ ಮಾಡುವ ವ್ಯವಸ್ಥಿತ ಸಂಚು ಎಂದು ಮಾಯಾವತಿ ಆರೋಪಿಸಿದರು.
ಬಿಎಸ್ಪಿ ಹೋರಾಟ: ಮೀಸಲಾತಿ ಉಳಿಸಲು ಬಿಎಸ್ಪಿ ಹೋರಾಟ ಮಾಡುತ್ತಿದೆ. ಜೊತೆಗೆ ಸಮಾಜ ಕಲ್ಯಾಣ ಇಲಾಖೆ, ದಲಿತರಿಗೆ ಪೊಲೀಸ್ ರಕ್ಷಣೆ, ಉಚಿತ ಸೌಲಭ್ಯಗಳು ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಮೊದಲ ಬಾರಿಗೆ ಉತ್ತರಪ್ರದೇಶದಲ್ಲಿ ಬಿಎಸ್ಪಿ ಆಡಳಿತದಲ್ಲಿ ಜಾರಿ ಮಾಡಲಾಯಿತು. ಅಲ್ಲದೆ, ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ‘ಭಾರತ ರತ್ನ’ ನೀಡಬೇಕು ಎಂದು ಹೋರಾಟ ನಡೆಸಿದ್ದು, ಬಿಎಸ್ಪಿ ಎಂದರು.
ಪ್ರಧಾನಿ ನರೇಂದ್ರ ಮೋದಿಯ ಜನವಿರೋಧಿ ನೀತಿ, ಆಡಳಿತ ವಿಫಲದ ಬಗ್ಗೆ ಮಾತನಾಡುವ ವಿರೋಧ ಪಕ್ಷದ ನಾಯಕರನ್ನು ಗುರಿಯಾಗಿಸಿಕೊಂಡು ಐಟಿ, ಇಡಿ, ಸಿಬಿಐ ದಾಳಿಯಿಂದ ಬೆದರಿಸಲಾಗುತ್ತಿದೆ ಎಂದ ಅವರು, ನಗದು ಅಮಾನ್ಯೀಕರಣ, ಜಿಎಸ್‌ಟಿ ಸಂಪೂರ್ಣವಾಗಿ ವಿಫಲಗೊಂಡಿವೆ ಎಂದು ದೂರಿದರು.
ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಮಾತನಾಡಲು ತಮಗೆ ಸಾಕಷ್ಟು ಅವಕಾಶ ಕೊಡಲಿಲ್ಲ ಎಂದು ಪ್ರತಿಭಟಿಸಿ ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದೆ. ಅಲ್ಲದೆ, ನನ್ನ ರಾಜಕೀಯ ಜೀವನದಲ್ಲಿ ರಾಜ್ಯಸಭಾ ಟಿಕೆಟ್‌ಗಳನ್ನು ಎಂದಿಗೂ ಮಾರಾಟ ಮಾಡಿಕೊಂಡಿಲ್ಲ. ಇಂದು ಸಹ ಕೋಟ್ಯಂತರ ರೂಪಾಯಿಗೆ ಟಿಕೆಟ್ ಮಾರಾಟ ಮಾಡಿಕೊಳ್ಳುವ ಪಕ್ಷಗಳಿವೆ ಎಂದು ಮಾಯಾವತಿ ನುಡಿದರು.
ಕರ್ನಾಟಕ ಬಿಎಸ್ಪಿ ರಾಜ್ಯಾಧ್ಯಕ್ಷ ಎನ್.ಮಹೇಶ್ ಮಾತನಾಡಿ, ಕಾಂಗ್ರೆಸ್ ಪಕ್ಷ ಹಾಗೂ ಮಾಜಿ ಪ್ರಧಾನಿ ಇಂದಿರಾಗಾಂಧಿ ಕಾಲದಿಂದಲೂ ದಲಿತ ಮತ್ತು ಅಲ್ಪಸಂಖ್ಯಾತರಿಗೆ ‘ಮೀನು ತಿನ್ನಿಸುವ’ ಕೆಲಸ ಆಗಿದೆ ವಿನಃ, ಅವರನ್ನು ಮೀನು ಹಿಡಿಯುವ ರೀತಿಯಲ್ಲಿ ಬೆಳೆಸಲಿಲ್ಲ. ಹೀಗಾಗಿ, ಅವರು ಎಲ್ಲ ಕ್ಷೇತ್ರಗಳಲ್ಲಿ ಹಿಂದುಳಿದಿದ್ದಾರೆ ಎಂದು ಕಿಡಿಕಾರಿದರು.
ಕಾಂಗ್ರೆಸ್ ಪಕ್ಷಕ್ಕೆ ಬಡತನವೇ ರಾಜಕೀಯ ಬಂಡವಾಳವಾದರೆ, ಬಿಜೆಪಿ ಪಕ್ಷಕ್ಕೆ ಕೋಮುವಾದ ಬಂಡವಾಳವಾಗಿದೆ. ಅಲ್ಲದೆ, ಆರೆಸ್ಸೆಸ್ ಡಿಎನ್‌ಎನಲ್ಲಿಯೇ ಕೋಮುವಾದ ಬೆಳೆದು ಬಂದಿದೆ. ಗಲಭೆಗಳು ನಡೆಯದೆ ಇದ್ದರೆ, ಅವರಿಗೆ ನಿದ್ದೆಯೇ ಬರುವುದಿಲ್ಲ. ಒಟ್ಟಾರೆ, ಇವರೆಡೂ ಪಕ್ಷಗಳು ಬಂಡವಾಳಗಾರರ ಪರವಾಗಿವೆ ಎಂದು ತಿಳಿಸಿದರು.
ಕರ್ನಾಟಕ ಬಿಎಸ್ಪಿ ರಾಜ್ಯ ಸಂಯೋಜಕ ಮಾರಸಂದ್ರ ಮುನಿಯಪ್ಪ ಮಾತನಾಡಿ, ಮುಂದಿನ 2018ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಇಪ್ಪತ್ತೈದಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಬಿಎಸ್ಪಿ ಪಕ್ಷ ಗೆಲ್ಲಬೇಕು. ಜತೆಗೆ ಶೇಕಡ 18ರಷ್ಟು ಮತ ಗಳಿಸಬೇಕೆಂದು ಕರೆ ನೀಡಿದರು.
ದೇಶದಲ್ಲಿ ಗೋಹತ್ಯೆ ಸಂಬಂಧ ದಲಿತ ಮತ್ತು ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ತಡೆಗಟ್ಟುವಲ್ಲಿ ಕೇಂದ್ರ ಸರಕಾರ ವಿಫಲ, ನೋಟು ಅಮಾನ್ಯೀಕರಣ, ದಲಿತರ ಕೊಲೆ ಸೇರಿದಂತೆ ಜನವಿರೋಧಿ ನೀತಿಗಳ ವಿರುದ್ಧ ಹೋರಾಟ ಮುಂದುವರೆಸಲಾಗುವುದೆಂದು ಹೇಳಿದರು.
ಸಮಾವೇಶದಲ್ಲಿ ಬಿಎಸ್ಪಿ ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ ಅವರನ್ನು ಮೈಸೂರು ಹುಲಿ ಟಿಪ್ಪು ಸುಲ್ತಾನ್ ಖಡ್ಗ ನೀಡಿ ಗೌರವಿಸಲಾಯಿತು. ಈ ವೇಳೆ ಬಿಎಸ್ಪಿ ರಾಷ್ಟ್ರೀಯ ಉಪಾಧ್ಯಕ್ಷ ಆನಂದಕುಮಾರ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ.ಅಶೋಕ ಸಿದ್ದಾರ್ಥ, ಅಂಬೇತ್ ರಾಜನ್, ತಮಿಳುನಾಡು ಸಂಯೋಜಕ ಎಂ.ಗೋಪಿನಾಥ್, ಪುದಚೇರಿ ಸಂಯೋಜಕ ರಾಂಜೀ ಗೌತಮ್, ಜೆ.ಸುಧಾಕರನ್, ಮೂರ್ತಿ, ಆರ್ಮ್‌ಸ್ಟ್ರಾಂಗ್, ಉಪಾಧ್ಯಕ್ಷ ಆರ್.ಮುನಿಯಪ್ಪ, ಮಾಜಿ ಶಾಸಕ ಝುಲ್ಫಿಕರ್, ಬಿಎಸ್ಪಿ ಒಬಿಸಿ ವಿಭಾಗದ ಚಂಗಪ್ಪ ಪ್ರಮುಖರಿದ್ದರು.
ಶೀಘ್ರವೇ ಲೋಕಸಭೆ ಚುನಾವಣೆ
2019ರ ಲೋಕಸಭೆ ಚುನಾವಣೆ ಅವಧಿಗಿಂತ ಮೊದಲೇ ನಡೆಯಬಹುದಾಗಿದೆ. ಅಲ್ಲದೆ, ಕರ್ನಾಟಕ ವಿಧಾನಸಭೆಯ 2018ರ ಚುನಾವಣೆ ಫಲಿತಾಂಶ ಪರಿಣಾಮ ಬೀರಲಿದೆ. ಹೀಗಾಗಿ, ಪ್ರತಿಯೊಬ್ಬ ಮತದಾರ ಜಾಗೃತವಾಗಿರಬೇಕು. ಜೊತೆಗೆ ಕರ್ನಾಟಕದಲ್ಲಿ ಬಿಎಸ್ಪಿ ಪಕ್ಷದ ಶಾಸಕರು ಚುನಾಯಿತರಾಗಬೇಕು.
-ಮಾಯಾವತಿ, ಬಿಎಸ್ಪಿ ರಾಷ್ಟ್ರೀಯ ಅಧ್ಯಕ್ಷೆ
ಜನಸಾಗರ
ಸೆಂಟ್ರಲ್ ಕಾಲೇಜು ಮೈದಾನದಲ್ಲಿ ಕೇಂದ್ರ ಸರಕಾರದ ಜನವಿರೋಧಿ ನೀತಿ ಹಾಗೂ ಅಲ್ಪಸಂಖ್ಯಾತ, ಹಿಂದುಳಿದ, ದಲಿತ(ಅಹಿಂದ) ಸಮುದಾಯವನ್ನೆ ಗುರಿಯಾಗಿಸಿಕೊಂಡು ದೇಶದೆಲ್ಲೆಡೆ ನಡೆಯುತ್ತಿರುವ ದೌರ್ಜನ್ಯಗಳ ವಿರುದ್ಧ ಬಿಎಸ್ಪಿಹಮ್ಮಿಕೊಂಡಿದ್ದ ದಕ್ಷಿಣ ಭಾರತದ ರಾಜ್ಯಗಳ ಜಾಗೃತಿ ಬೃಹತ್ ಸಮಾವೇಶದಲ್ಲಿ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಅವರನ್ನು ನೋಡಲು ಜನಸಾಗರವೇ ಹರಿುಬಂದಿತ್ತು.
ಬಿಗಿಬಂದೋಬಸ್ತ್
ದಕ್ಷಿಣ ಭಾರತದ ರಾಜ್ಯಗಳ ಜಾಗೃತಿ ಬೃಹತ್ ಸಮಾವೇಶಕ್ಕೆ ಬಿಗಿಬಂದೋಬಸ್ತ್ ಏರ್ಪಡಿಸಿ, ಒಂದು ಸಾವಿರಕ್ಕೂ ಅಧಿಕ ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು. ಸಮಾವೇಶದಲ್ಲಿ ಪಾಲ್ಗೊಂಡು ಪ್ರತಿಯೊಬ್ಬರನ್ನು ಪೊಲೀಸರು ಪರಿಶೀಲಿಸಿದರು. ನಗರ ಹೆಚ್ಚುವರಿ ಪೊಲೀಸ್ ಆಯುಕ್ತೆ ಮಾಲಿನಿ ಕೃಷ್ಣಮೂರ್ತಿ ಸೇರಿ ಹಿರಿಯ ಅಧಿಕಾರಿಗಳು ಮೊಕ್ಕಂ ಹೂಡಿದ್ದರು.







