ಸಿಪಿಐ(ಎಂ)-ಬಿಜೆಪಿ ಘರ್ಷಣೆಯ ಗಾಯಾಳು ಆಸ್ಪತ್ರೆಯಲ್ಲಿ ಮೃತ್ಯು

ತ್ರಿಶೂರ್, ನ.26: ಶನಿವಾರಂದು ತ್ರಿಶೂರ್ ಜಿಲ್ಲೆಯ ಕೈಪಮಂಗಲಂ ಎಂಬಲ್ಲಿ ನಡೆದಿದ್ದ ಸಿಪಿ (ಎಂ) ಮತ್ತು ಬಿಜೆಪಿ ಕಾರ್ಯಕರ್ತರ ಮಧ್ಯದ ಘರ್ಷಣೆಯಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿದ್ದ ವ್ಯಕ್ತಿಯೊಬ್ಬ ರವಿವಾರದಂದು ಸಾವನ್ನಪ್ಪಿದ್ದಾನೆ.
ಮೃತ ವ್ಯಕ್ತಿಯನ್ನು ಕೈಪಮಂಗಲಂ ನಿವಾಸಿ ಸತೀಶನ್ ಎಂದು ಗುರುತಿಸಲಾಗಿದ್ದು ಘರ್ಷಣೆಯ ವೇಳೆ ಈತನ ಎದೆಗೆ ಏಟು ತಗುಲಿತ್ತು. ಕೂಡಲೇ ಈತನನ್ನು ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸತೀಶನ್ ಮೃತಪಟ್ಟಿದ್ದಾನೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಸ್ಥಳೀಯರ ಪ್ರಕಾರ, ಇತ್ತೀಚೆಗೆ ಕೈಪಮಂಗಲಂನಲ್ಲಿ ಹಲವು ಸಿಪಿಐ(ಎಂ) ಕಾರ್ಯಕರ್ತರು ಬಿಜೆಪಿ ಸೇರಿದ್ದರು. ಇದೇ ಕಾರಣದಿಂದ ಘರ್ಷಣೆ ನಡೆದಿದ್ದು ಎರಡೂ ಕಡೆಯ ಕಾರ್ಯಕರ್ತರು ಗಾಯಗೊಂಡಿದ್ದರು.
ಇದೇ ವೇಳೆ ಎರಡೂ ಪಕ್ಷಗಳು ಸತೀಶನ್ ಶವಕ್ಕಾಗಿ ಬೇಡಿಕೆಯಿಟ್ಟಾಗ ವಾತಾವರಣ ಮತ್ತಷ್ಟು ಉದ್ವಿಗ್ನಗೊಂಡಿತು. ಸತೀಶನ್ ನಮ್ಮ ಪಕ್ಷದ ಕಾರ್ಯಕರ್ತ ಎಂದು ಹೇಳಿ ಬಿಜೆಪಿ ಆತನ ಶವವನ್ನು ಪಡೆಯಲು ಆಸ್ಪತ್ರೆಗೆ ತೆರಳಿದರೆ ಆತ ಸಿಪಿಐ(ಎಂ) ಬೆಂಬಲಿಗನಾಗಿದ್ದ ಎಂದು ಮೃತನ ಪತ್ನಿ ಹೇಳಿರುವುದಾಗಿ ಸಿಪಿಐ(ಎಂ) ತಿಳಿಸಿದೆ.
ಸಾವಿನ ಹಿನ್ನೆಲೆಯಲ್ಲಿ ಬಿಜೆಪಿ ಕೈಪಮಂಗಲಂ ಮತ್ತು ಕೊಡುಂಗಲ್ಲೂರ್ ಜಿಲ್ಲೆಗಳಲ್ಲಿ ಬಂದ್‌ಗೆ ಕರೆ ನೀಡಿದೆ.







