ಚುನಾವಣಾ ರಾಜಕೀಯಕ್ಕೆ ಶಾಸಕ ರವೀಂದ್ರ ನಿವೃತ್ತಿ : ಕಾರ್ಯಕರ್ತರಿಂದ ಆತ್ಮಹತ್ಯೆಗೆ ಯತ್ನ

ದಾವಣಗೆರೆ, ನ. 26: ಹಿರಿಯ ರಾಜಕಾರಣಿ ದಿ. ಎಂ.ಪಿ.ಪ್ರಕಾಶ್ ಅವರ ಪುತ್ರ ಹರಪನಹಳ್ಳಿ ಕಾಂಗ್ರೆಸ್ ಶಾಸಕ ಎಂ.ಪಿ. ರವೀಂದ್ರ ಅವರು ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ.
ರವಿವಾರ ಹರಪ್ಪನಹಳ್ಳಿಯ ಪ್ರವಾಸಿ ಮಂದಿರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲುಷಿತ ರಾಜಕೀಯ, ದುಬಾರಿ ಚುನಾವಣೆ, ನನ್ನ ವೈಯಕ್ತಿಕ ಸಮಸ್ಯೆಯ ಕಾರಣದಿಂದ ಮನನೊಂದು ಸಕ್ರೀಯ ಚುನಾವಣಾ ರಾಜಕೀಯದಿಂದ ದೂರ ಸರಿಯುವ ನಿರ್ಧಾರ ಮಾಡಿದ್ದೇನೆ. ನಾನು ಯಾವ ಪಕ್ಷಕ್ಕೂ ಹೋಗಲ್ಲ, ನಾನು ಬಹಳ ದಿನಗಳಿಂದ ಆಲೋಚನೆ ಮಾಡಿ ಈ ತೀರ್ಮಾನ ಮಾಡಿದ್ದೇನೆ ಎಂದು ಹೇಳುವ ಸಮಯದಲ್ಲಿ ಅವರು ಭಾವುಕರಾದರು.
ಶಾಸಕ ಎಂ.ಪಿ. ರವೀಂದ್ರ ಅವರ ನಿಲುವಿಗೆ ತೀವ್ರ ಮನನೊಂದ ಕಾರ್ಯಕರ್ತರು ಪೆಟ್ರೋಲ್ ಸುರಿದು ಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆಯಿತು. ಶಾಸಕರು ತಮ್ಮ ನಿರ್ಧಾರ ಪ್ರಕಟಿಸಿ ಪ್ರವಾಸಿ ಮಂದಿರದಿಂದ ಹೊರಬರುತ್ತಲೇ ಹೊರಗಡೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ಪ್ರಾರಂಭಿಸಿದರು. ನಿರ್ಧಾರ ಹಿಂಪಡೆಯುವಂತೆ ಎಂ.ಪಿ.ರವೀಂದ್ರ ಅವರ ಕಾರಿಗೆ ಮುತ್ತಿಗೆ ಹಾಕಿದರು.
ಈ ಸಂದರ್ಭ ಕೆಲ ಕಾರ್ಯಕರ್ತರು ಪೆಟ್ರೋಲ್ ಮೈ ಮೇಲೆ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳಲು ಪ್ರಯತ್ನಿಸಿದರು. ಆಗ ಪೊಲೀಸರು ಇವರನ್ನು ತಡೆದರು.
ಶಾಸಕ ರವೀಂದ್ರ ಅಂತಿಮವಾಗಿ ಹೊರಗಡೆ ಬಂದು ಕಾರು ಏರಲು ಹೋದಾಗ ಕಾರ್ಯಕರ್ತರು ಬಿಡದೆ ಹೇಳಿಕೆ ವಾಪಾಸು ಪಡೆಯಿರಿ ಎಂದು ಮನವಿ ಮಾಡಿ, ನೀವು ಚುನಾವಣೆಗೆ ನಿಲ್ಲಲೇ ಬೇಕು ಎಂದು ಪಟ್ಟು ಹಿಡಿದರು.
ಈ ಸಂದರ್ಭ ಪೊಲೀಸರು ಹಾಗೂ ಕಾರ್ಯಕರ್ತರ ಮಧ್ಯೆ ವಾಗ್ವಾದ, ತಳ್ಳಾಟ ನಡೆಯಿತು. ಅಂತಿಮವಾಗಿ ಶಾಸಕರು ಈಗ ನನ್ನ ಮನಸ್ಥಿತಿ ಸರಿಯಿಲ್ಲ, ದಾರಿ ಬಿಡಿ, ಶೀಘ್ರ ಕಾರ್ಯಕರ್ತರ ಸಭೆ ಕರೆದು ಈ ಬಗ್ಗೆ ಚರ್ಚಿಸೋಣ ಎಂದು ಸಮಾಧಾನಪಡಿಸಿದರು.
ಪ್ರತಿಭಟನೆಯಲ್ಲಿ ಯುವ ಮುಖಂಡ ಎಲ್. ಮಂಜನಾಯ್ಕ, ಪುರಸಭಾ ಸದಸ್ಯ ಅರುಣಪೂಜಾರ, ಅರೆಮಜ್ಜಿಗೇರಿ ಬಸವರಾಜ, ಗುತ್ತಿಗೆದಾರ ರಾಜ, ತಾ.ಪಂ ಸದಸ್ಯರಾದ ಓ. ರಾಮಪ್ಪ, ತಲಿಗಿ ಉಮಾಕಾಂತ, ನೀಲಗುಂದ ಮಂಜುನಾಥ, ಹುಲ್ಸಿಕಟ್ಟಿ ಚಂದ್ರಪ್ಪ, ಜಾಕೀರ, ಪುಣಭಗಟ್ಟಿ ನಿಂಗಪ್ಪ ಮತ್ತಿತರರಿದ್ದರು.







