ಮಂಗಳೂರು: ಎಸ್ಸಿ-ಎಸ್ಟಿ ಅಹವಾಲು ಸಭೆ

ಮಂಗಳೂರು, ನ. 26: ಪರಿಶಿಷ್ಟ ಜಾತಿ ಮತ್ತು ಪಂಗಡದ ಅಹವಾಲು ಸಭೆಯು ರವಿವಾರ ಮಂಗಳೂರು ಪೊಲೀಸ್ ಆಯುಕ್ತರ ಕಚೇರಿ ಸಭಾಂಗಣದಲ್ಲಿ ಡಿಸಿಪಿ (ಅಪರಾಧ ಮತ್ತು ಸಂಚಾರ) ಉಮಾ ಪ್ರಶಾಂತ್‌ರ ಅಧ್ಯಕ್ಷತೆಯಲ್ಲಿ ಜರಗಿತು.
ಜ್ಯೋತಿ ಎಂಬವರು ಮಾತನಾಡಿ ತನ್ನ ಪುತ್ರ, ಅಂತಿಮ ವರ್ಷದ ಪದವಿ ವಿದ್ಯಾರ್ಥಿ ಪ್ರಕಾಶ್ ಅ.19ರಂದು ಕುಂಜತ್‌ಬೈಲ್‌ನಲ್ಲಿ ಬೈಕ್‌ನಲ್ಲಿ ಹೋಗುತ್ತಿದ್ದಾಗ ಚರಂಡಿ ಅಗೆದು ರಾಶಿಹಾಕಿದ ಮಣ್ಣನ್ನು ಗಮನಿಸದೆ ಸ್ಕಿಡ್ ಆಗಿ ರಸ್ತೆ ಮೇಲೆ ಬಿದ್ದಿದ್ದು, ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಮನೆಯ ಆಧಾರ ಸ್ತಂಭವಾಗಿದ್ದ ಆತನ ನಿಧನದಿಂದ ಬದುಕು ಕಷ್ಟವಾಗಿದೆ ಎಂದು ಅಳಲು ತೋಡಿಕೊಂಡರು.
ಇದಕ್ಕೆ ಪ್ರತಿಕ್ರಿಯಿಸಿದ ಉಮಾ ಪ್ರಶಾಂತ್ ರಸ್ತೆ ಬದಿಯಲ್ಲಿ ಚರಂಡಿಯನ್ನು ಸ್ವಚ್ಛ ಮಾಡುವಾಗ ಅಥವಾ ಕಾಮಗಾರಿಗಳನ್ನು ಮಾಡುವಾಗ ಅಗೆಯುವ ಮಣ್ಣನ್ನು ಅಲ್ಲಿಯೇ ರಾಶಿ ಹಾಕಿದಲ್ಲಿ ಎಚ್ಚರಿಕೆ ಫಲಕಗಳನ್ನು ಅಳವಡಿಸುವಂತೆ ಮಹಾನಗರ ಪಾಲಿಕೆಗೆ ಸೂಚಿಸಲಾಗಿದೆ ಎಂದರು.
ದಲಿತ ಮುಖಂಡರಾದ ಎಸ್.ಪಿ. ಆನಂದ್ ಮಾತನಾಡಿ, ಕಾಮಗಾರಿ ಮಾಡುತ್ತಿರುವ ಗುತ್ತಿಗೆದಾರರ ನಿರ್ಲಕ್ಷ್ಯವೇ ಇದಕ್ಕೆ ಕಾರಣ. ಹಾಗಾಗಿ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಮತ್ತು ಗುತ್ತಿಗೆದಾರರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು.
ಯುವಕರು ಲೈಸನ್ಸ್ ಇಲ್ಲದೆ ವಾಹನ ಚಲಾಯಿಸುವುದು, ಮಸಾಜ್ ಸೆಂಟರ್‌ಗಳಲ್ಲಿ ಅವ್ಯವಹಾರ, ಮೀನಿನ ಲಾರಿಗಳು ರಸ್ತೆಯಲ್ಲಿ ನೀರು ಚೆಲ್ಲುತ್ತಾ ಸಂಚರಿಸುತ್ತಿರುವುದು, ಖಾಸಗಿ ಬಸ್ಸುಗಳ ಬೇಕಾ ಬಿಟ್ಟಿ ಸಂಚಾರ ನಡೆಸುತ್ತಿರುವ ಬಗ್ಗೆ ದೂರು ನೀಡಿ ಕ್ರಮಕ್ಕೆ ಆಗ್ರಹಿಸಿದರು.
ಸ್ಕಿಲ್ ಗೇಮ್‌ಗಳು ದಿನದ 24 ಗಂಟೆಯೂ ನಡೆಯುತ್ತಿದ್ದು, ಕೂಲಿ ಕಾರ್ಮಿಕರು ದುಡಿಮೆಯ ಹಣವನ್ನು ಈ ಕೇಂದ್ರಗಳಿಗೆ ತಂದು ಹಾಕುವುದರಿಂದ ಅವರ ಹೆಂಡತಿ ಮಕ್ಕಳು ಉಪವಾಸ ಬೀಳುವಂತಾಗಿದೆ ಎಂದ ದಲಿತ ನಾಯಕರೊಬ್ಬರು ತಿಳಿಸಿದರು. 2014ರಲ್ಲಿ ಮಹಿಳೆಯೊಬ್ಬರಿಗೆ ನೆರವು ಒದಗಿಸಿದ ಕಾರಣ ಅದನ್ನು ಸಹಿಸಲಾಗದವರು ತನ್ನ ಮೇಲೆ 7 ಪ್ರಕರಣಗಳನ್ನು ದಾಖಲಿಸಿದ್ದಾರೆ ಎಂದು ತೊಕ್ಕೊಟ್ಟು ಸಮೀಪದ ಚೆಂಬುಗುಡ್ಡೆಯ ಪಾರ್ವತಿ ತಮ್ಮ ಅಹವಾಲು ತೋಡಿಕೊಂಡರು.
ಪೊಲೀಸರು ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸುತ್ತಾರೆ. ಒಂದೊಮ್ಮೆ ಪೊಲೀಸ್ ಠಾಣೆಗಳಲ್ಲಿ ದೂರುಗಳನ್ನು ಸ್ವೀಕರಿಸಲು ಹಿಂದೇಟು ಹಾಕಿದರೆ ಮೇಲಧಿಕಾರಿಗಳಿಗೆ ದೂರು ಕೊಡ ಬಹುದು. ಯಾವುದೇ ಪ್ರಕರಣದಲ್ಲಿ ಬಿ ರಿಪೋರ್ಟ್ ಹಾಕಲು ಠಾಣಾ ಮಟ್ಟದಲ್ಲಿ ಸಾಧ್ಯವಿಲ್ಲ. ಮೇಲಧಿಕಾರಿಗಳಿಂದಲೇ ತೀರ್ಮಾನ ಆಗಬೇಕಾಗಿದೆ ಎಂದು ಡಿಸಿಪಿ ಉಮಾ ಪ್ರಶಾಂತ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸಭೆಯಲ್ಲಿ ಎಸಿಪಿಗಳಾದ ಉದಯನಾಯಕ್ ಮತ್ತು ಮಂಜುನಾಥ ಶೆಟ್ಟಿ , ರಾಜೇಂದ್ರ ಡಿ.ಎಸ್.ಉಪಸ್ಥಿತರಿದ್ದರು.







