ಹಾಫಿಝ್ ಬಿಡುಗಡೆಯಿಂದ ಪಾಕ್ ಬಾಂಧವ್ಯದ ಮೇಲೆ ಪರಿಣಾಮ: ಅಮೆರಿಕ ಎಚ್ಚರಿಕೆ

ವಾಶಿಂಗ್ಟನ್,ನ.26: ಮುಂಬೈ ಭಯೋತ್ಪಾದಕ ದಾಳಿ ಪ್ರಕರಣದ ಆರೋಪಿ , ಪಾಕ್ ಮೂಲದ ತೀವ್ರವಾದಿ ಸಂಘಟನೆ ಜಮಾತುದ್ದಾವಾದ ವರಿಷ್ಠ ಹಾಫಿಝ್ ಸಯೀದ್‌ನನ್ನು ಪಾಕ್ ಬಿಡುಗಡೆಗೊಳಿಸಿರುವುದನ್ನು ಅಮೆರಿಕ ತೀವ್ರವಾಗಿ ಖಂಡಿಸಿದೆ. ಭಯೋತ್ಪಾದಕ ಹಾಫೀಝ್ ಸಯೀದ್‌ನನ್ನು ಮತ್ತೆ ಬಂಧಿಸಿ, ಆತನ ವಿರುದ್ಧ ದೋಷಾರೋಪ ಹೊರಿಸಲು ಇಸ್ಲಾಮಾಬಾದ್ ಸೂಕ್ತತೆ ಕ್ರಮ ಕೈಗೊಳ್ಳದೆ ಇದ್ದಲ್ಲಿ ಅಮೆರಿಕ-ಪಾಕ್ ಬಾಂಧವ್ಯದ ಮೇಲೆ ಗಂಭೀರ ಪರಿಣಾಮವುಂಟಾಗಲಿದೆಯೆಂದು ಶ್ವೇತಭವನವು ಶನಿವಾರ ಎಚ್ಚರಿಕೆ ನೀಡಿದೆ.
ಸಯೀದ್ ವಿರುದ್ಧ ದೋಷಾರೋಪ ಹೊರಿಸಲು ಹಾಗೂ ವಿಚಾರಣೆಗೊಳಪಡಿಸಲು ಪಾಕ್ ವಿಫಲವಾದ ಬಳಿಕ ಆತ ಬಿಡುಗಡೆಗೊಂಡಿರುವುದು, ಅಂತಾರಾಷ್ಟ್ರೀಯ ಭಯೋತ್ಪಾದನೆ ವಿರುದ್ಧ ಹೋರಾಡುವ ಪಾಕಿಸ್ತಾನದ ಬದ್ಧತೆಯ ಬಗ್ಗೆ ತೀವ್ರ ಕಳವಳಕಾರಿಯಾದ ಸಂದೇಶವನ್ನು ರವಾನಿಸಿದೆಯೆಂದು ಶ್ವೇತಭವನವು ಹೇಳಿಕೆಯಲ್ಲಿ ತಿಳಿಸಿದೆ.
26/11 ಮುಂಬೈ ಭಯೋತ್ಪಾದಕ ದಾಳಿಯ ಸೂತ್ರಧಾರಿಯೆನ್ನಲಾದ ಹಾಫೀಝ್ ಸಯೀದ್‌ನನ್ನು ಈ ವರ್ಷದ ಜನವರಿಯಲ್ಲಿ ಗೃಹಬಂಧನದಲ್ಲಿರಿಸಲಾಗಿತ್ತು. ಆದರೆ ಈ ವಾರ ಪಾಕ್ ನ್ಯಾಯಾಲಯವು ಆತನನ್ನು ಬಿಡುಗಡೆಗೊಳಿಸಿತ್ತು. ಬಿಡುಗಡೆಗೊಂಡ ಬೆನ್ನಲ್ಲೇ ಹಾಫೀಝ್ ಶುಕ್ರವಾರ ಲಾಹೋರ್‌ನಲ್ಲಿ ಭಾರತದ ವಿರುದ್ಧ ಪ್ರಚೋನಕಾರಿ ಭಾಷಣ ಮಾಡಿದ್ದನೆನ್ನಲಾಗಿದೆ.





