ಭಾರತಕ್ಕೆ ಬಂದರೆ ಮಲ್ಯ ನಿವಾಸವಾಗಲಿದೆ ಈ ಜೈಲು...

ಹೊಸದಿಲ್ಲಿ, ನ. 26: 9,000 ಕೋ.ರೂ.ಗಳ ಸಾಲವಂಚನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಚಾರಣೆಗಾಗಿ ಮದ್ಯದ ದೊರೆ ವಿಜಯ ಮಲ್ಯರನ್ನು ಭಾರತಕ್ಕೆ ಗಡಿಪಾರು ಮಾಡಿದರೆ ಅವರನ್ನು ಮುಂಬೈನ ಆರ್ಥರ್ ರೋಡ್ ಜೈಲಿನಲ್ಲಿ ಇರಿಸಲಾಗುವುದು.
ಭಾರತವು ಗಡಿಪಾರು ಪ್ರಕರಣದಲ್ಲಿ ತನ್ನ ಪರವಾಗಿ ಮಲ್ಯ ವಿರುದ್ಧ ವಾದಿಸುತ್ತಿರುವ ಕ್ರೌನ್ ಪ್ರಾಸಿಕ್ಯೂಷನ್ ಸರ್ವಿಸ್‌ನ ಮೂಲಕ ಲಂಡನ್‌ನ ವೆಸ್ಟ್ ಮಿನ್‌ಸ್ಟರ್ ನ್ಯಾಯಾಲಯಕ್ಕೆ ಈ ವಿಷಯವನ್ನು ನಿವೇದಿಸಲಿದೆ ಎಂಂದು ಗೃಹ ಸಚಿವಾಲಯದ ಅಧಿಕಾರಿಯೋರ್ವರು ತಿಳಿಸಿದರು. ಕೈದಿಗಳ ಸುರಕ್ಷತೆಯನ್ನು ಕಾಯ್ದುಕೊಳ್ಳುವುದು ಸರಕಾರದ ಕರ್ತವ್ಯವಾಗಿದೆ ಮತ್ತು ತನ್ನ ಜೀವಕ್ಕೆ ಬೆದರಿಕೆಯಿದೆ ಎಂಬ ಮಲ್ಯರ ಭೀತಿ ದಾರಿ ತಪ್ಪಿಸುವಂಥದ್ದಾಗಿದೆ ಎಂದು ಭಾರತವು ನ್ಯಾಯಾಲಯಕ್ಕೆ ತಿಳಿಸಲಿದೆ.
ಭಾರತದಲ್ಲಿಯ ಜೈಲುಗಳು ವಿಶ್ವದ ಯಾವುದೇ ರಾಷ್ಟ್ರಗಳಷ್ಟೇ ಉತ್ತಮವಾಗಿವೆ ಮತ್ತು ಭಾರತದ ಜೈಲುಗಳಲ್ಲಿ ಕೈದಿಗಳ ಹಕ್ಕುಗಳಿಗೆ ಸಂಪೂರ್ಣ ರಕ್ಷಣೆಯಿದೆ ಎಂದೂ ನ್ಯಾಯಾಲಯಕ್ಕೆ ತಿಳಿಸಲಾಗುವುದು ಎಂದು ಅಧಿಕಾರಿ ಹೇಳಿದರು.
ವೆಸ್ಟ್ ಮಿನ್‌ಸ್ಟರ್ ನ್ಯಾಯಾಲಯವು ಡಿ.4ರಿಂದ ಗಡಿಪಾರು ಪ್ರಕರಣದ ವಿಚಾರಣೆಯನ್ನು ಆರಂಭಿಸಲಿದೆ.
ತನ್ನನ್ನು ಗಡಿಪಾರುಗೊಳಿಸಿದರೆ ತನಗೆ ಭಾರತದ ಜೈಲುಗಳಲ್ಲಿ ಸುರಕ್ಷತೆಯಿಲ್ಲ ಎಂಬ ಮಲ್ಯ ವಾದವನ್ನು ತಿರಸ್ಕರಿಸಿರುವ ಭಾರತವು ಮಲ್ಯರನ್ನು ಅಂತರರಾಷ್ಟ್ರೀಯ ಮಾನದಂಡಕ್ಕನುಗುಣವಾಗಿ ಗರಿಷ್ಠ ಭದ್ರತೆಯನ್ನು ಮತ್ತು ಸಾಕಷ್ಟು ವೈದ್ಯಕೀಯ ಸೌಲಭ್ಯಗಳನ್ನು ಹೊಂದಿರುವ ಆರ್ಥರ್ ಜೈಲಿನಲ್ಲಿರಿಸಲಾಗುವುದು ಮತ್ತು ಅಲ್ಲಿ ಅವರಿಗೆ ಯಾವುದೇ ಬೆದರಿಕೆಯಿರುವುದಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಲಿದೆ.
ಕೇಂದ್ರ ಗೃಹ ಕಾರ್ಯದರ್ಶಿ ರಾಜೀವ ಗಾಬಾ ಅವರು ಕಳೆದ ವಾರ ವಿವಿಧ ಅಧಿಕಾರಿಗಳ ಸಭೆ ಕರೆದು ಲಂಡನ್‌ನ ನ್ಯಾಯಾಲಯಕ್ಕೆ ಸಲ್ಲಿಸಬೇಕಾದ ಉತ್ತರಗಳ ಬಗ್ಗೆ ಚರ್ಚಿಸಿದ್ದರು.
2016,ಮಾರ್ಚ್‌ನಲ್ಲಿ ಭಾರತದಿಂದ ಬ್ರಿಟನ್‌ಗೆ ಪರಾರಿಯಾಗಿರುವ ಮಲ್ಯರನ್ನು ಎ.18ರಂದು ಗಡಿಪಾರು ವಾರಂಟ್‌ನಡಿ ಸ್ಕಾಟ್ಲಂಡ್ ಪೊಲೀಸರು ಬಂಧಿಸಿದ್ದರಾದರೂ, ನ್ಯಾಯಾಲಯದಲ್ಲಿ ಅವರಿಗೆ ತಕ್ಷಣ ಜಾಮೀನು ಲಭಿಸಿತ್ತು.
ವಿಚಾರಣೆಯು ಪೂರ್ಣಗೊಂಡು ನ್ಯಾಯಾಧೀಶರು ಗಡಿಪಾರು ಪರವಾಗಿ ತೀರ್ಪು ನೀಡಿದರೆ ಬ್ರಿಟನ್ ಗೃಹ ಕಾರ್ಯದರ್ಶಿಯು ಎರಡು ತಿಂಗಳಲ್ಲಿ ಮಲ್ಯರನ್ನು ಭಾರತಕ್ಕೆ ಗಡಿಪಾರುಗೊಳಿಸುವಂತೆ ಆದೇಶಿಸಬೇಕಾಗುತ್ತದೆ.







