ಕಲಿಕೆ ಎಂಬುದು ನಿರಂತರ, ನಿತ್ಯನೂತನ: ಡಾ.ಜುಂಜನ್‌ವಾಲಾ

ಮಣಿಪಾಲ, ನ.26: ಜೀವನದಲ್ಲಿ ಯಶಸ್ಸು ಸಾಧಿಸಲು ಜೀವನದುದ್ದಕ್ಕೂ ಕಲಿಕೆಯನ್ನು ನಿರಂತರವಾಗಿಸಿಕೊಳ್ಳಿ. ನಿಮ್ಮ ಸಹೋದ್ಯೋಗಿಗಳಿಂದ, ಸ್ನೇಹಿತ ರಿಂದ, ಹಿರಿಯರಿಂದ, ಕಿರಿಯರಿಂದ, ನಾಳೆ ನಿಮ್ಮ ಮಕ್ಕಳಿಂದಲೂ ಕಲಿಯುತ್ತಾ ಮುಂದುವರಿಯಿರಿ ಎಂದು ಕೇಂದ್ರ ಸರಕಾರದ ವಿದ್ಯುತ್ ಮತ್ತು ನವೀಕರಿಸ ಬಹುದಾದ ಇಂಧನ ಸಚಿವಾಲಯದ ಪ್ರಧಾನ ಸಲಹೆಗಾರ ಡಾ.ಅಶೋಕ್ ಜುಂಜನ್‌ವಾಲಾ ಹೇಳಿದ್ದಾರೆ.
ಮಣಿಪಾಲದ ಕೆಎಂಸಿ ಗ್ರೀನ್ಸ್‌ನಲ್ಲಿ ಶನಿವಾರ ನಡೆದ ಮಣಿಪಾಲ ವಿವಿಯ 25ನೆ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಘಟಿಕೋತ್ಸವ ಭಾಷಣದಲ್ಲಿ ಮಾತನಾಡುತಿದ್ದರು.
ಜ್ಞಾನ ಎಂಬುದು ಅರ್ಧ ಬದುಕು. ಆದುದರಿಂದ ಬದುಕಿನುದ್ದಕ್ಕೂ ಕಲಿಯುತ್ತಾ ಸಾಗಿ. ಈ ಮೂಲಕ ಜ್ಞಾನ ಎಂಬುದು ಹಳತಾಗದಿರುವುದನ್ನು ಖಚಿತ ಪಡಿಸಿಕೊಳ್ಳಿ ಎಂದು ಅವರು ಪದವಿ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಬಹುದೊಡ್ಡ ಸವಾಲು ಹಾಗೂ ಸಮಸ್ಯೆಗಳು ನಿಮ್ಮ ಮುಂದೆ ಇದೆ. ಅವುಗಳಲ್ಲಿ ಶೀಘ್ರ ಭವಿಷ್ಯದಲ್ಲಿ ಇಡೀ ವಿಶ್ವವನ್ನೇ ಕಾಡಲಿರುವ ಅತೀ ದೊಡ್ಡ ಸಮಸ್ಯೆ ಎಂದರೆ ‘ನೀರಿನ ಸಮಸ್ಯೆ’. ಕುಡಿಯುವ ನೀರಿನ ಲಭ್ಯತೆ ವಿಶ್ವದ ಅತ್ಯಂತ ಕಠಿಣ ಸವಾಲು ಎನಿಸಿಕೊಳ್ಳುವ ದಿನ ದೂರವಿಲ್ಲ. ಅದರಲ್ಲೂ ಭಾರತದಲ್ಲಿ ಈ ಸಮಸ್ಯೆ ಉಳಿದೆಲ್ಲಾ ದೇಶಗಳಿಗಿಂತ ಅತೀ ಬೇಗದಲ್ಲಿ ಕಾಣಿಸಿಕೊಳ್ಳಲಿದೆ. ಇದಕ್ಕಿರುವ ಏಕೈಕ ಪರಿಹಾರವೆಂದರೆ ನಾವು ಬಳಸುವ ಪ್ರತಿ ಹನಿ ನೀರನ್ನು ಮರು ಬಳಕೆಗೆ ಸಜ್ಜುಗೊಳಿಸುವುದು. ಈ ಸಮಸ್ಯೆಗೆ ನಾವು ಕೂಡಲೇ ಸೂಕ್ತ ಪರಿಹಾರವನ್ನು ಕಂಡುಕೊಳ್ಳದೇ ಹೋದರೆ, ನಿಮ್ಮ ಜೀವಿತಾವಧಿಯಲ್ಲೇ ‘ನೀರಿನ ಯುದ್ಧ’ವನ್ನು ಕಾಣಬೇಕಾಗಬಹುದು ಎಂದು ಡಾ.ಜುಂಜನ್‌ವಾಲಾ ನುಡಿದರು.
ವಿಶ್ವವನ್ನು ಅದರಲ್ಲೂ ಮುಖ್ಯವಾಗಿ ಭಾರತವನ್ನು ಕಾಡುವ ಮತ್ತೊಂದು ಗಂಭೀರ ಸಮಸ್ಯೆ ಎಂದರೆ ತ್ಯಾಜ್ಯ ನಿರ್ವಹಣೆ. ತಂತ್ರಜ್ಞಾನ ಹಾಗೂ ಪ್ರಕ್ರಿಯೆ ಯನ್ನು ಅಭಿವೃದ್ಧಿ ಪಡಿಸದೇ ಹಾಗೂ ಬಳಸದೇ ಹೋದರೆ ‘ಸ್ವಚ್ಛ ಭಾರತ’ ಕೇವಲ ಸ್ಲೋಗನ್ ಆಗಿ ಮಾತ್ರ ಉಳಿದುಕೊಳ್ಳಲಿದೆ. ಇದಕ್ಕೆ ತಕ್ಷಣದ ಕ್ರಮ ಕೆಲಸ ಮಾಡುವುದಿಲ್ಲ. ಸುಸ್ಥಿರ ಅಭಿವೃದ್ಧಿಯೇ ನಮ್ಮ ಮುಂದಿರುವ ದೊಡ್ಡ ಸವಾಲು ಎಂದು ಐಐಟಿ ಮದ್ರಾಸ್‌ನ ಪ್ರೊಪೆಸರ್ ಆಗಿರುವ ಡಾ.ಜುಂಜನ್‌ವಾಲ ಹೇಳಿದರು.
ನವೀಕರಿಸಬಹುದಾದ ಇಂಧನ -ಸೌರಶಕ್ತಿ, ಗಾಳಿ ಮತ್ತು ನೀರಿನಿಂದ ವಿದ್ಯುತ್- ಶಕ್ತಿಯ ಪ್ರಬಲ ಆಕರಗಳಾಗಿದ್ದು, ಇವುಗಳ ಕುರಿತು ಹೆಚ್ಚಿನ ಸಂಶೋಧನೆಗೆ ವಿದ್ಯಾರ್ಥಿಗಳು ಮುಂದಾಗಬೇಕು. ಪೆಟ್ರೋಲ್, ಕಲ್ಲಿದ್ದಲು ಮುಂತಾದವುಗಳ ಬಳಕೆಯಿಂದ ಇಂದು ಪರಿಸರಕ್ಕೆ ಸಾಕಷ್ಟು ಹಾನಿ ಯುಂಟಾಗಿದೆ. ಹೀಗಾಗಿ ಪರಿಸರಕ್ಕೆ ಹಾನಿಯಾಗದಂಥ ನವೀಕರಿಸಬಹುದಾದ ಇಂಧನ ನಮ್ಮ ಇಂದಿನ ತುರ್ತು ಅಗತ್ಯವಾಗಿದೆ. ಇದರತ್ತ ಗಮನ ಹರಿಸದೇ ಹೋದರೆ ಭೂಮಿಯ ತಾಪಮಾನ ಏರಿಕೆಯಾಗಿ ಭೂಮಿ ಅಪಾಯ ಎದುರಿಸುವುದು ಖಂಡಿತ ಎಂದರು.
ಮಣಿಪಾಲ ವಿವಿ ಚಾನ್ಸಲರ್ ಡಾ.ರಾಮದಾಸ ಪೈ ಪತ್ನಿ ವಸಂತಿ ಪೈ, ವಿವಿ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್, ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದರು. ಕುಲಪತಿ ಡಾ.ವಿನೋದ್ ಭಟ್, ಪ್ರೊ ವೈಸ್ ಚಾನ್ಸಲರ್ ಡಾ.ಸುರೇಂದ್ರ ಶೆಟ್ಟಿ, ಡಾ.ಪೂರ್ಣಿಮಾ ಬಾಳಿಗಾ, ರಿಜಿಸ್ಟ್ರಾರ್ ಡಾ.ನಾರಾಯಣ ಸಭಾಹಿತ್, ಡಾ.ವಿನೋದ್ ವಿ.ಥಾಮಸ್, ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶಕಿ ಡಾ.ಸುಮಾ ನಾಯರ್ ಉಪಸ್ಥಿತರಿದ್ದರು.
ಕೆಎಂಸಿ ಮಣಿಪಾಲದ ಡೀನ್ ಡಾ.ಪ್ರಜ್ಞಾ ರಾವ್ ಸ್ವಾಗತಿಸಿದರೆ, ಪ್ರೊ ವೈಸ್ ಚಾನ್ಸಲರ್ ಡಾ.ಜಿ.ಕೆ.ಪ್ರಭು ಪ್ರಸ್ತಾವನೆ ಮಾತನಾಡಿದರು.ಡಾ.ಯಶವಂತ್ ರಾವ್ ಪದವೀಧರರಿಗೆ ಪ್ರತಿಜ್ಞಾವಿಧಿ ಬೋಧಿಸಿದರೆ, ಡಾ.ಅರುಣ್ ಶಾನುಭಾಗ್ ಅತಿಥಿಗಳನ್ನು ಪರಿಚಯಿಸಿದರು. ಪ್ರೊ. ಗಾಯತ್ರಿ ಪ್ರಭು ಕಾರ್ಯಕ್ರಮ ನಿರೂಪಿಸಿದರು.
1269 ಮಂದಿಗೆ ಪದವಿ
ಸಮಾರಂಭದಲ್ಲಿ ಒಟ್ಟು 1269 ಪದವೀಧರರಿಗೆ ಪದವಿ ಸರ್ಟಿಫಿಕೇಟ್ ಗಳನ್ನು ವಿತರಿಸಲಾಯಿತು. ಡೆಂಟಲ್ ಕಾಲೇಜಿನ ಸುನೈನಾ ಪುರಿ ಹಾಗೂ ಹೊಟೇಲ್ ಅಡ್ಮಿನಿಸ್ಟ್ರೇಶನ್‌ನ ಎಂ.ರೋಹಿತ್ ಸಂಜಯ್ ಅವರು ಡಾ.ಟಿ.ಎಂ. ಎ.ಪೈ ಚಿನ್ನದ ಪದಕಗಳನ್ನು ಗೆದ್ದುಕೊಂಡರು. 36 ಮಂದಿಗೆ ಡಾಕ್ಟರೇಟ್ ಪದವಿಗಳನ್ನು ವಿತರಿಸಲಾಯಿತು.







