ದೇಶಕ್ಕೆ ಗಾಂಧಿ ಅಗತ್ಯತೆ ಹಿಂದೆಂದಿಗಿಂತ ಇಂದು ಹೆಚ್ಚು: ಡಾ.ಮಹಾಬಲೇಶ್ವರ ರಾವ್

ಉಡುಪಿ, ನ. 26: ಇಂದಿನ ಸಂದರ್ಭದಲ್ಲಿ ಈ ದೇಶಕ್ಕೆ ಮಹಾತ್ಮ ಗಾಂಧಿ ಅಗತ್ಯತೆ ಹಿಂದೆಂದಿಗಿಂತ ಇಂದು ಹೆಚ್ಚಿದೆ. ಸ್ವಾತಂತ್ರ ಬಂದು ಏಳು ದಶಕಗಳು ಕಳೆದರೂ ದೇಶದಲ್ಲಿ ಸಾಮರಸ್ಯ ಬೇಕಿದ್ದಷ್ಟು ಬೆಳೆದಿಲ್ಲ. ಕೋಮು ಧ್ವೇಷ, ಅಸಹಿಷ್ಣುತೆ ಪ್ರಮಾಣ ಹೆಚ್ಚಾಗಿದೆ ಎಂದು ಕನ್ನಡದ ಲೇಖಕ, ಡಾ.ಟಿಎಂಎ ಪೈ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಮಹಾಬಲೇಶ್ವರ ರಾವ್ ಹೇಳಿದ್ದಾರೆ.
ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್ ಹಾಗೂ ಎಂಜಿಎಂ ಕಾಲೇಜಿನ ಗಾಂಧಿ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಶನಿವಾರ ‘ಪಾಪು ಗಾಂಧಿ ಗಾಂಧಿ ಬಾಪು ಆದ ಕತೆ’ ಹಾಗೂ ‘ಬರಿಯ ಬಟ್ಟೆಯಲ್ಲ ಭಾರತದ ಬಾವುಟ’ ಕೃತಿಗಳ ಕುರಿತು ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ನಡೆಸಿದ ಪ್ರಬಂಧ ಸ್ಪರ್ಧೆಯಲ್ಲಿ ಉತ್ತಮ ನಿರ್ವಹಣೆ ತೋರಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತಿದ್ದರು.
ಇಂದು ಯಾವ ಮಾತನ್ನು ಎಲ್ಲಿ, ಹೇಗೆ ಮಾತನಾಡಬೇಕು ಎಂಬ ಬಗ್ಗೆ ಹತ್ತಾರು ಬಾರಿ ಯೋಚಿಸಬೇಕಾದ ಅಗತ್ಯವಿದೆ. ದೇಶಪ್ರೇಮ ಕೆಲವರ ಮೂಗಿನ ನೇರಕ್ಕೆ ವ್ಯಾಖ್ಯಾನಗೊಳ್ಳುತ್ತಿದೆ. ಇಂಥ ಸಂದರ್ಭದಲ್ಲಿ ಗಾಂಧಿ ನಮಗೆ ಮಾರ್ಗದರ್ಶಕರಾಗಬೇಕಿದೆ ಎಂದವರು ನುಡಿದರು.
ಗಾಂದೀಜಿ ಅವರನ್ನು ನಾವು ಪೂಜಿಸಬೇಕಿಲ್ಲ. ಅವರನ್ನು ಪಾಪು ಗಾಂಧಿ ಯಾಗಿ ನೋಡಬೇಕು. ಗಾಂಧಿ ನಮಗೆ ಈಗಲೂ ಯಾಕೆ ಪ್ರಸ್ತುತ ಎಂಬುದನ್ನು ಬೊಳುವಾರರ ಪುಸ್ತಕ ನಮಗೆ ಮನದಟ್ಟುಮಾಡುತ್ತದೆ. ಗಾಂಧಿಯವರ ಜೀವನ ಚರಿತ್ರೆಯನ್ನು ಕಾದಂಬರಿ ರೀತಿಯಲ್ಲಿ ಇದು ಕಟ್ಟಿಕೊಡುತ್ತದೆ. ನಿಮ್ಮ ಓದಿನ ಹಸಿವನ್ನು ನೀಗಿಸುವ ಪುಸ್ತಕ ‘ಪಾಪು ಗಾಂಧಿ...’ ಎಂದರು.
ಗಾಂಧಿಯನ್ನು ಕೊಂದ ಈ ದೇಶದಲ್ಲಿ, ಅವರ ಕೊಲೆಗಾರನಿಗೆ ದೇವಾಲಯವನ್ನು ನಿರ್ಮಿಸುವ ಸನ್ನಿವೇಶದಲ್ಲಿ ನಾವಿಂದಿದ್ದೇವೆ. ಬಾಪುಜಿ ಅವರ ಜೀವನ ಸಂಧ್ಯೆಯಲ್ಲಿ ಭ್ರಮನಿರಸನಗೊಳ್ಳುವ ಕಾಲವಾಗಿತ್ತು. ತಮ್ಮ ಆದರ್ಶ ವೌಲ್ಯಕ್ಕೆ ಕವಡೆಕಾಸಿನ ಬೆಲೆ ಇಲ್ಲದನ್ನು ಕಂಡು ಅವರು ಮರುಗುವಂತಾಯಿತು. ಐದಾರು ಬಾರಿ ಅವರನ್ನು ಕೊಲ್ಲುವ ಪ್ರಯತ್ನವೂ ನಡೆಯಿತು ಎಂದರು.
ಇಂಥ ಗಾಂಧಿಯನ್ನು ಅವಮಾನಿಸುವ ರೀತಿಯಲ್ಲಿ ಗೋಡ್ಸೆಗೆ ನಾವಿಂದು ದೇವಳ ಕಟ್ಟಲು ಮುಂದಾಗಿದ್ದೇವೆ. ಇಂಥ ದೇಶದಲ್ಲಿ ಬದುಕುವ ಪರಿಸ್ಥಿತಿ ನಮ್ಮದಾಗಿದೆ. ದೇಶದ ಉತ್ತಮ ಪುರುಷ ಮಹಾತ್ಮ ಗಾಂಧೀಜಿಯಾಗಿದ್ದಾರೆ ಎಂದು ಡಾ.ರಾವ್ ನುಡಿದರು.
ಸಿಂಡಿಕೇಟ್ ಬ್ಯಾಂಕಿನ ನಿವೃತ್ತ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಡಾ.ಎನ್. ಕೆ.ತಿಂಗಳಾಯ ಅಧ್ಯಕ್ಷತೆ ವಹಿಸಿದ್ದರು. ಎಂಜಿಎಂ ಕಾಲೇಜಿನ ಪ್ರಾಂಶುಪಾಲೆ ಡಾ.ಸಂಧ್ಯಾ ನಂಬಿಯಾರ್ ಉಪಸ್ಥಿತರಿದ್ದರು.
ಬಿವಿಟಿಯ ಆಡಳಿತ ಟ್ರಸ್ಟಿ ಕೆ.ಎಂ.ಉಡುಪ ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯಕ್ರಮ ನಿರೂಪಿಸಿದ ಲಕ್ಷ್ಮಿಬಾಯಿ ಕೊನೆಯಲ್ಲಿ ವಂದಿಸಿದರು.







