ಪಾಕ್‌ನಲ್ಲಿ ಪ್ರಜಾಪ್ರಭುತ್ವ ಅಂತ್ಯಗೊಳಿಸಲು ಸೇನೆ ಸಂಚು
ಎಂಕ್ಯೂಂಎಂ ನಾಯಕ ಅಲ್ತಾಫ್ ಹುಸೈನ್ ಆರೋಪ

ವಾಶಿಂಗ್ಟನ್,ನ.26: ಪಾಕಿಸ್ತಾನದ ಪ್ರಬಲ ಸೇನಾ ಲಾಬಿಯು, ದೇಶದಲ್ಲಿ ಪ್ರಜಾಪ್ರಭುತ್ವದ ಆಳ್ವಿಕೆಯನ್ನು ಕೊನೆಗೊಳಿಸಲು ಧಾರ್ಮಿಕ ಮೂಲಭೂತವಾದಿಗಳನ್ನು ಬಳಸಿಕೊಳ್ಳುತ್ತಿದೆಯೆಂದು ಮುತ್ತಹಿದಾ ಖ್ವಾಮಿ ಮೂವ್‌ಮೆಂಟ್ (ಎಂಕ್ಯೂಎಂ)ನ ನಾಯಕ ಅಲ್ತಾಫ್ ಹುಸೈನ್ ಆರೋಪಿಸಿದ್ದಾರೆ.
ಲಂಡನ್‌ನಲ್ಲಿ ನೆಲೆಸಿರುವ ಹುಸೈನ್ ಅವರು ಅಮೆರಿಕ ಸೇರಿದಂತೆ ಅಂತಾರಾಷ್ಟ್ರೀಯ ಸಮುದಾಯಕ್ಕೆ ಇಂದು ಈ ಬಗ್ಗೆ ಬರೆದಿರುವ ಪತ್ರವೊಂದರಲ್ಲಿ, ರಾಜಕೀಯದಲ್ಲಿ ಹಸ್ತಕ್ಷೇಪ ನಡೆಸುವುದರಿಂದ ದೂರವುಳಿಯುವಂತೆ ಪಾಕ್ ಸೇನೆಗೆ ಸ್ಪಷ್ಟವಾದ ಸಂದೇಶವನ್ನು ನೀಡಬೇಕು ಹಾಗೂ ಈ ನಿಟ್ಟಿನಲ್ಲಿ ತುರ್ತು ಕ್ರಮವನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
‘‘ಪಾಕಿಸ್ತಾನದ ರಾಜಧಾನಿಯಾದ ಇಸ್ಲಾಮಾಬಾದ್ ಅನ್ನು ಧಾರ್ಮಿಕ ಮೂಲಭೂತವಾದಿಗಳು ಒತ್ತೆಯಲ್ಲಿರಿಸಿಕೊಂಡಿದ್ದರು ಹಾಗೂ ಅವರಿಗೆ ಪಾಕ್ ಸೇನಾ ನಾಯಕತ್ವದ ಸಂಪೂರ್ಣ ಶ್ರೀರಕ್ಷೆಯಿದೆ’’ ಎಂದು ಹುಸೈನ್ ಆರೋಪಿಸಿದ್ದಾರೆ. ತಥಾಕಥಿತ ಪ್ರತಿಭಟನೆಗಳ ಕುರಿತ ಸುದ್ದಿಯನ್ನು ಪ್ರಸಾರ ಮಾಡದಂತೆ ಪಾಕ್ ಸರಕಾರವು ಇಲೆಕ್ಟ್ರಾನಿಕ್ ಮಾಧ್ಯಮಗಳನ್ನು ನಿಷೇಧಿಸಿದೆ. ಒಟ್ಟಾರೆ ಇಡೀ ದೇಶವು ಅರಾಜಕತೆಯೆಡೆಗೆ ಸಾಗುತ್ತಿರುವಂತೆ ಭಾಸವಾಗುತ್ತಿದೆ. ಸೇನೆಯು ಮತ್ತೊಮ್ಮೆ ಅಧಿಕಾರವನ್ನು ವಶಪಡಿಸಿಕೊಂಡು, ಪ್ರಜಾಪ್ರಭುತ್ವದ ಹಳಿತಪ್ಪಿಸಲು ಸೂಕ್ತವಾದ ವೇದಿಕೆ ಸಿದ್ಧಗೊಳ್ಳುತ್ತಿದೆಯೆಂದು ಅವರು ಪತ್ರದಲ್ಲಿ ಆಪಾದಿಸಿದ್ದಾರೆ.







