ಎಸ್ಪಿ ಕಚೇರಿ ಎದುರೇ ಆತ್ಮಹತ್ಯೆಗೆ ಯತ್ನ
ಮಂಡ್ಯ, ನ.26: ತನ್ನ ಮನೆ ಗಲ್ಲಿಯಲ್ಲಿ ಶೌಚಾಗೃಹದ ಪಿಟ್ ನಿರ್ಮಾಣಕ್ಕೆ ಅಡ್ಡಿಪಡಿಸಿದ್ದರಿಂದ ಬೇಸರಗೊಂಡ ವ್ಯಕ್ತಿಯೊಬ್ಬ ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಎದುರೇ ರವಿವಾರ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ನಗರಕ್ಕೆ ಸಮೀಪದಲ್ಲಿರುವ ಕಿರಗಂದೂರು ಗ್ರಾಮದ ರಂಗಸ್ವಾಮಿ ಅವರ ಪುತ್ರ ಸತ್ಯನಾರಾಯಣ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಅಸ್ವಸ್ಥಗೊಂಡಿದ್ದು, ಕೂಡಲೇ ಪೊಲೀಸರು ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಮನೆಯ ಗಲ್ಲಿಯಲ್ಲಿ ಶೌಚಾಲಯದ ಪಿಟ್ ತೆಗೆಯಲು ಪಕ್ಕದ ಮನೆಯ ಸಿದ್ದೇಗೌಡರ ಮಗ ಸತೀಶ್ ಅಡ್ಡಿಪಡಿಸುತ್ತಿದ್ದು, ಈ ಸಂಬಂಧ ಹತ್ತು ದಿನದ ಹಿಂದೆಯೇ ಸತ್ಯನಾರಾಯಣ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು ಎನ್ನಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸತ್ಯನಾರಾಯಣ ಮತ್ತು ಸತೀಶ್ ಇಬ್ಬರೂ ದಾಖಲೆ ಹಾಜರುಪಡಿಸುವಂತೆ ಪೊಲೀಸರು ಸೂಚಿಸಿದ್ದರು ಎಂದು ತಿಳಿದು ಬಂದಿದೆ. ಆದರೆ, ಇಂದು ಏಕಾಏಕಿ ಎಸ್ಪಿ ಕಚೇರಿಗೆ ಆಗಮಿಸಿದ ಸತ್ಯನಾರಾಯಣ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
Next Story





