‘ಪತ್ನಿಯನ್ನು ಇರಿಸಿಕೊಳ್ಳುವಂತೆ’ ನ್ಯಾಯಾಲಯಗಳು ಪತಿಯನ್ನು ಬಲವಂತಗೊಳಿಸುವಂತಿಲ್ಲ: ಸುಪ್ರೀಂ ಕೋರ್ಟ್

ಹೊಸದಿಲ್ಲಿ,ನ.26: ತನ್ನ ‘ಪತ್ನಿಯನ್ನು ಇರಿಸಿಕೊಳ್ಳುವಂತೆ’ ನ್ಯಾಯಾಲಯಗಳು ಪತಿಯನ್ನು ಬಲವಂತಗೊಳಿಸುವಂತಿಲ್ಲ ಎಂದು ಹೇಳಿರುವ ಸರ್ವೋಚ್ಚ ನ್ಯಾಯಾಲಯವು, ತನ್ನ ಪರಿತ್ಯಕ್ತ ಪತ್ನಿ ಮತ್ತು ಮಗನಿಗಾಗಿ 10 ಲ.ರೂ.ಗಳ ಮಧ್ಯಂತರ ಜೀವನಾಂಶವನ್ನು ಠೇವಣಿಯಿರಿಸುವಂತೆ ವೃತ್ತಿಯಲ್ಲಿ ಪೈಲಟ್ ಆಗಿರುವ ವ್ಯಕ್ತಿಗೆ ಆದೇಶಿಸಿದೆ.
ಪತಿಯು ರಾಜಿ ಒಪ್ಪಂದವನ್ನು ಪಾಲಿಸಲು ನಿರಾಕರಿಸಿದ ಬಳಿಕ ಮದ್ರಾಸ್ ಉಚ್ಚ ನ್ಯಾಯಾಲಯದ ಮದುರೈ ಪೀಠವು ರದ್ದುಗೊಳಿಸಿದ್ದ ಆತನ ಜಾಮೀನನ್ನು ಸರ್ವೋಚ್ಚ ನ್ಯಾಯಾಲಯವು ಮರುಸ್ಥಾಪಿಸಿತು.
ಠೇವಣಿಯಿರಿಸಿದ ಹಣವನ್ನು ಬೇಷರತ್ ಆಗಿ ತನ್ನ ತಕ್ಷಣದ ಅಗತ್ಯಕ್ಕಾಗಿ ಬಳಸಿಕೊಳ್ಳಲು ಪತ್ನಿಯು ಸ್ವತಂತ್ರಳಿದ್ದಾಳೆ ಎಂದು ನ್ಯಾಯಮೂರ್ತಿಗಳಾದ ಆದರ್ಶ ಗೋಯೆಲ್ ಮತ್ತು ಯು.ಯು.ಲಲಿತ್ ಅವರ ಪೀಠವು ಸ್ಪಷ್ಟಪಡಿಸಿತು.
ಠೇವಣಿ ಮೊತ್ತವನ್ನು ಕಡಿಮೆ ಮಾಡುವಂತೆ ಪತಿಯ ಪರ ವಕೀಲರು ಕೋರಿಕೊಂಡಾಗ, ಇದು ಕುಟುಂಬ ನ್ಯಾಯಾಲಯವಲ್ಲ ಮತ್ತು ಇಲ್ಲಿ ಯಾವುದೇ ಚೌಕಾಶಿ ನಡೆಯುವುದಿಲ್ಲ ಎಂದು ಕಟುವಾಗಿ ನುಡಿದ ಪೀಠವು, 10 ಲ.ರೂ.ಗಳನ್ನು ತಕ್ಷಣವೇ ವಿಚಾರಣಾ ನ್ಯಾಯಾಲಯದಲ್ಲಿ ಠೇವಣಿಯಿರಿಸಲು ಒಪ್ಪಿಕೊಂಡರೆ ಜಾಮೀನನ್ನು ಮರು ಮಂಜೂರು ಮಾಡಲಾಗುವುದು ಎಂದು ತಿಳಿಸಿತು.
10 ಲ.ರೂ.ಗಳನ್ನು ಠೇವಣಿಯಿರಿಸಲು ಒಪ್ಪಿಕೊಂಡ ವಕೀಲರು ಕೊಂಚ ಕಾಲಾವಕಾಶ ಕೋರಿದಾಗ ನ್ಯಾಯಾಲಯವು ನಾಲ್ಕು ವಾರಗಳ ಗಡುವು ನೀಡಿತು. ಉಚ್ಚ ನ್ಯಾಯಾಲಯವು ಈಗಾಗಲೇ ನಿರ್ದೇಶಿಸಿರುವಂತೆ ಮೂರು ತಿಂಗಳಲ್ಲಿ ವಿಚಾರಣೆಯನ್ನು ಪೂರ್ಣಗೊಳಿಸುವಂತೆ ಸರ್ವೋಚ್ಚ ನ್ಯಾಯಾಲಯವು ವಿಚಾರಣಾ ನ್ಯಾಯಾಲಯಕ್ಕೆ ಆದೇಶಿಸಿತು.
ರಾಜಿ ಒಪ್ಪಂದವನ್ನು ಪಾಲಿಸದ್ದಕ್ಕಾಗಿ ಮದ್ರಾಸ ಉಚ್ಚ ನ್ಯಾಯಾಲಯದ ಮಥುರೈ ಪೀಠವು ಅ.11ರಂದು ಪತಿಯ ಜಾಮೀನನ್ನು ರದ್ದುಗೊಳಿಸಿತ್ತು.
ಪತಿಯು ತನ್ನ ಪತ್ನಿ ಮತ್ತು ಮಗುವನ್ನು ಕೆಲಸದ ಸ್ಥಳಕ್ಕೆ ಕರೆದೊಯ್ಯುಬೇಕೆಂಬ ರಾಜಿ ಒಪ್ಪಂದದ ಮೊಟ್ಟಮೊದಲನೇ ಷರತ್ತನ್ನು ಈಡೇರಿಸಲಾಗಿಲ್ಲ ಮತ್ತು ಪುನರ್‌ಮಿಲನದ ನೆಪದಲ್ಲಿ ಆತನ ವಿರುದ್ಧ ಆರಂಭಗೊಂಡಿದ್ದ ಇಲಾಖಾ ವಿಚಾರಣೆಯನ್ನು ಪತ್ನಿಯು ಕೈಬಿಡುವಂತಾಗಿತ್ತು. ಇದರಿಂದ ಮಗುವಿನ ಭವಿಷ್ಯವು ಅತಂತ್ರಗೊಂಡಿದೆ ಎಂದು ಮದುರೈ ಪೀಠವು ಝಾಡಿಸಿತ್ತು.
ವರದಕ್ಷಿಣೆ ಕಿರುಕುಳ ಸೇರಿದಂತೆ ಐಪಿಸಿಯ ವಿವಿಧ ಕಲಮ್‌ಗಳಡಿ ಪತಿಯ ವಿರುದ್ಧ ಪ್ರಕರಣ ದಾಖಲಾಗಿತ್ತು.







