ಟೆಸ್ಟ್ ನಲ್ಲಿ ದ್ರಾವಿಡ್-ಲಾರಾ ದ್ವಿಶತಕಗಳ ದಾಖಲೆಯನ್ನು ಸರಿಗಟ್ಟಿದ ಕೊಹ್ಲಿ

ನಾಗ್ಪುರ, ನ.26: ಭಾರತದ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಶ್ರೀಲಂಕಾ ವಿರುದ್ಧದ ಎರಡನೇ ಕ್ರಿಕೆಟ್ ಟೆಸ್ಟ್‌ನಲ್ಲಿ ಮೊದಲ ಇನಿಂಗ್ಸ್‌ನಲ್ಲಿ ದ್ವಿಶತಕ ದಾಖಲಿಸಿದ್ದಾರೆ.
ಟೆಸ್ಟ್‌ನ ಮೂರನೆ ದಿನವಾಗಿರುವ ಇಂದು ಕೊಹ್ಲಿ ಅವರು 259 ಎಸೆತಗಳನ್ನು ಎದುರಿಸಿ 15 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಲ್ಲಿ ದ್ವಿಶತಕ ದಾಖಲಿಸಿದರು. ಕೊಹ್ಲಿ 213 ರನ್ (267ಎ, 17ಬೌ,2ಸಿ) ಗಳಿಸಿ ಔಟಾದರು.
29ರ ಹರೆಯದ ಕೊಹ್ಲಿ 168ನೇ ಓವರ್‌ನಲ್ಲಿ ದಿಲ್ರುವಾನ್ ಪೆರೆರಾ ಎಸೆತದಲ್ಲಿ 1 ರನ್ ಗಳಿಸಿ ದ್ವಿಶತಕ ತಲುಪಿದರು.
ಕೊಹ್ಲಿ ಇದರೊಂದಿಗೆ 5 ಶತಕಗಳನ್ನು ದಾಖಲಿಸಿದ ಭಾರತದ ಗೋಡೆ ಖ್ಯಾತಿಯ ಮಾಜಿ ಕಲಾತ್ಮಕ ದಾಂಡಿಗ ರಾಹುಲ್ ದ್ರಾವಿಡ್ ದಾಖಲೆಯನ್ನು ಸರಿಗಟ್ಟಿದರು. ನಾಯಕನಾಗಿ ಇದೇ ವೇಳೆ ವೆಸ್ಟ್‌ಇಂಡೀಸ್‌ನ ಮಾಜಿ ನಾಯಕ ಬ್ರಿಯಾನ್ ಲಾರಾ ದಾಖಲೆಯನ್ನು ಸರಿಗಟ್ಟಿದರು. ನಾಯಕನಾದ ಬಳಿಕ ಕೊಹ್ಲಿ ಅವರ ಬ್ಯಾಟ್‌ನಿಂದ ದ್ವಿಶತಕಗಳ ದಾಖಲೆ ನಿರ್ಮಾಣವಾಗಿದೆ. ಲಾರಾ ನಾಯಕನಾಗಿ ಐದು ದ್ವಿಶತಕ ದಾಖಲಿಸಿದ್ದರು.
ಕೊಹ್ಲಿ ಅವರ ದ್ವಿಶತಕಗಳು ಬೇರೆ ಬೇರೆ ತಂಡಗಳ ವಿರುದ್ಧ ದಾಖಲಾಗಿವೆ. ಎಲ್ಲಾ ದ್ವಿಶತಕಗಳನ್ನು ಕೊಹ್ಲಿ 2016-17ಅವಧಿಯಲ್ಲಿ ಗಳಿಸಿದ್ದಾರೆ. ಜುಲೈ 2016ರಲ್ಲಿ ನಾರ್ಥ್ ಸೌಂಡ್‌ನಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ ಚೊಚ್ಚಲ ದ್ವಿಶತಕ(200) ದಾಖಲಿಸಿದ್ದರು. ಅಕ್ಟೋಬರ್ 2016ರಲ್ಲಿ ಇಂದೋರ್‌ನಲ್ಲಿ ನ್ಯೂಝಿಲೆಂಡ್ ವಿರುದ್ಧ 211, ಡಿಸೆಂಬರ್ 2016ರಲ್ಲಿ ಮುಂಬೈನಲ್ಲಿ ಇಂಗ್ಲೆಂಡ್ ವಿರುದ್ಧ 235ರನ್ ಮತ್ತು ಫೆಬ್ರವರಿ 2017ರಲ್ಲಿ ಹೈದರಾಬಾದ್‌ನಲ್ಲಿ ಬಾಂಗ್ಲಾದೇಶ ವಿರುದ್ಧ 204 ರನ್ ಗಳಿಸಿದ್ದರು.
ಲಾರಾ ವೆಸ್ಟ್‌ಇಂಡೀಸ್ ಪರ 131 ಟೆಸ್ಟ್ ಪಂದ್ಯಗಳನ್ನು ಆಡಿದವರು. ಅವರ ಮೊದಲ ದ್ವಿಶತಕ 1993ರಲ್ಲಿ ಸಿಡ್ನಿಯಲ್ಲಿ ಆಸ್ಟ್ರೇಲಿಯ ವಿರುದ್ಧದ ಟೆಸ್ಟ್‌ನಲ್ಲಿ ದಾಖಲಾಗಿತ್ತು. ಐದನೇ ಟೆಸ್ಟ್ ಶತಕ 2006ರಲ್ಲಿ ಮುಲ್ತಾನ್‌ನಲ್ಲಿ ಪಾಕಿಸ್ತಾನ ವಿರುದ್ಧ ದಾಖಲಾಗಿತ್ತು. ಹನ್ನೊಂದು ವರ್ಷಗಳ ಬಳಿ ಕೊಹ್ಲಿ ಅವರು ಲಾರಾ ದಾಖಲೆಯನ್ನು ಸರಿಗಟ್ಟಿದ್ದಾರೆ.
ಭಾರತದ ಪರ ವೀರೇಂದ್ರ ಸೆಹ್ವಾಗ್ ಮತ್ತು ಸಚಿನ್ ತೆಂಡುಲ್ಕರ್ 6 ದ್ವಿಶತಕಗಳನ್ನು ದಾಖಲಿಸಿದ್ದರು. ಅವರ ದಾಖಲೆಯನ್ನು ಸರಿಗಟ್ಟಲು ಕೊಹ್ಲಿ ಇನ್ನೊಂದು ದ್ವಿಶತಕ ದಾಖಲಿಸಬೇಕಾಗಿದೆ.
ಭಾರತದ ಮಾಜಿ ನಾಯಕರಾದ ಎಂ.ಎ.ಕೆ ಪಟೌಡಿ , ಎಂ.ಎಸ್.ಧೋನಿ, ಸಚಿನ್ ತೆಂಡುಲ್ಕರ್ ಮತ್ತು ಸುನೀಲ್ ಗವಾಸ್ಕರ್ ನಾಯಕರಾಗಿ ತಲಾ 1 ದ್ವಿಶತಕ ಸಿಡಿಸಿದ್ದರು.
ಇದಕ್ಕೂ ಮೊದಲು ಅವರು 130ಎಸೆತಗಳಲ್ಲಿ 10 ಬೌಂಡರಿಗಳ ಸಹಾಯದಿಂದ ಶತಕ ತಲುಪಿದರು. ಇದು ಅವರ 19ನೇ ಟೆಸ್ಟ್ ಶತಕವಾಗಿತ್ತು. 62ನೇ ಟೆಸ್ಟ್‌ನಲ್ಲಿ ಶತಕ ದಾಖಲಿಸಿದ್ದ ಕೊಹ್ಲಿ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲೂ ಶತಕ ಬಾರಿಸಿದ್ದರು.







