ಪತಿಯಿಂದ ಪತ್ನಿಯ ಕೊಲೆ
ಬೆಂಗಳೂರು, ನ.27: ಪ್ರೀತಿಸಿ ಮದುವೆಯಾಗಿದ್ದ ಪತ್ನಿಯನ್ನೆ ಪತಿಯೊಬ್ಬ ಚಾಕುವಿನಿಂದ ಇರಿದು ಕೊಲೆಗೈದಿರುವ ಘಟನೆ ಬನಶಂಕರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಪದ್ಮನಾಭನಗರದ ಮೊದಲನೆ ಮುಖ್ಯರಸ್ತೆ ನಿವಾಸಿ ಇಂದಿರಾ(36) ಕೊಲೆಯಾದ ಪತ್ನಿ ಎಂದು ಪೊಲೀಸರು ಗುರುತಿಸಿದ್ದಾರೆ.
ಮಲ್ಲೇಶ್ ಎಂಬಾತ ಹನ್ನೆರಡು ವರ್ಷಗಳ ಹಿಂದೆ ಆಸ್ಪತ್ರೆ (ಔಷಧಿ) ಸೇಲ್ಸ್ ಎಕ್ಸಿಕ್ಯೂಟಿವ್ ಆಗಿದ್ದ ಇಂದಿರಾ ಅವರನ್ನು ಪ್ರೀತಿಸಿ ಮದುವೆಯಾಗಿದ್ದು, ಇವರಿಗೆ 9 ವರ್ಷದ ಪುತ್ರಿ ಇದ್ದಾಳೆ ಎಂದು ತಿಳಿದು ಬಂದಿದೆ.
ಕೆಲ ತಿಂಗಳಿನಿಂದ ಪತ್ನಿಯ ವರ್ತನೆಗೆ ಶಂಕೆ ವ್ಯಕ್ತಪಡಿಸಿ ಪತಿ ಜಗಳವಾಡುತ್ತಿದ್ದನು. ಸೋಮವಾರ ಮುಂಜಾನೆಯೂ ಇದೇ ವಿಷಯವಾಗಿ ಇಬ್ಬರ ನಡುವೆ ಜಗಳ ನಡೆದು ಇಂದಿರಾ ಕುತ್ತಿಗೆಗೆ ಚಾಕುವಿನಿಂದ ಇರಿದು ಕೊಲೆ ಮಾಡಿರುವುದಾಗಿ ಹೇಳಲಾಗುತ್ತಿದೆ.
ಈ ಸಂಬಂಧ ಬನಶಂಕರಿ ಠಾಣೆ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡು ಕ್ರಮ ಕೈಗೊಂಡಿದ್ದಾರೆ.
Next Story





