ಸಾಹಿತ್ಯ ಸೌರಭ- ಪುಸ್ತಕ ಹಬ್ಬದ ಉಪನ್ಯಾಸ
ಮಾಸ್ತಿ ಕೃತಿಯಲ್ಲಿ ಶರಣಾಗತಿಯ ಭಾವವಿದೆ- ರೇಶ್ಮಾ ಜಿ. ಭಟ್

ಪುತ್ತೂರು, ನ. 27: ಮಾಸ್ತಿಯವರ ಕೃತಿಗಳಲ್ಲಿ ಹಲವಾರು ಉತ್ತಮ ಅಂಶಗಳಿದ್ದು ಶರಣಾಗತಿಯ ಭಾವವಿದೆ. ಸ್ಪಂದಿಸುವ ವಿಭಿನ್ನ ಶೈಲಿಯಿದೆ. ಸಮಾಜವನ್ನು ಸೂಕ್ಷ್ಮವಾಗಿ ನೋಡುವ ರೀತಿಯಿದೆ. ಆಗಿನ ಸಮಾಜದ ಸ್ಥಿತಿಯನ್ನು ಅವರ ಕೃತಿಯಲ್ಲಿ ಕಾಣಬಹುದು. ಆವರ ಕೃತಿಯ ಓದುವಿಕೆಯಿಂದ ಓದುಗರ ಜೀವನ ಶೈಲಿಯೂ ಬದಲಾಗಬಹುದು ಎಂದು ಉಪನ್ಯಾಸಕಿ ರೇಶ್ಮಾ ಜಿ. ಭಟ್ ಹೇಳಿದರು.
ಅವರು ಕನ್ನಡ ಸಾಹಿತ್ಯ ಪರಿಷತ್‌ನ ಪುತ್ತೂರು ತಾಲೂಕು ಘಟಕ, ಜ್ಞಾನಗಂಗಾ ಪುಸ್ತಕ ಮಳಿಗೆ ಆಶ್ರಯದಲ್ಲಿ ಪುತ್ತೂರು ಟೌನ್ ಬ್ಯಾಂಕ್ ಸಭಾಂಗಣದಲ್ಲಿ ನಡೆಯುತ್ತಿರುವ ಸಾಹಿತ್ಯ ಸೌರಭ- ಪುಸ್ತಕ ಹಬ್ಬದ ಆರನೇ ದಿನವಾದ ರವಿವಾರ ಮಾಸ್ತಿ 125ರ ನೆನಪು ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಮಾಸ್ತಿ ಅವರ ಕೃತಿಯಲ್ಲಿರುವ ಸುಲಲಿತ ಭಾಷೆ, ಸರಳ ನಿರೂಪಣೆ ಓದುವ ಅಭಿರುಚಿ ಬೆಳವಣಿಗೆಗ ಕಾರಣವಾಗಿದೆ. ಮಾಸ್ತಿ ಅವರು ಇಂಗ್ಲೀಷ್ ಭಾಷೆಯಲ್ಲಿ ಉತ್ತಮ ಹಿಡಿತ ಹೊಂದಿದ್ದರೂ ಕೆಲ ಬರಹಗಳನ್ನು ಮಾತ್ರ ಬರೆದಿದ್ದಾರೆ. ಹೆಚ್ಚಿನ ಕೃತಿಯನ್ನು ಕನ್ನಡದಲ್ಲಿ ಬರೆದಿದ್ದಾರೆ ಎಂದ ಅವರು ಮಾಸ್ತಿಯವರಲ್ಲಿ ಕಿರಿಯರನ್ನು ಬೆಳೆಸುವ ಉದಾರ ಭಾವವಿತ್ತು. ಇದರಿಂದಾಗಿ ಸಾಹಿತ್ಯ ಕ್ಷೇತ್ರ ಸಮೃದ್ಧವಾಗಿ ಬೆಳೆಯಿತು. ಮಾಸ್ತಿಯವರ ಜೀವನ ಇನ್ನಷ್ಟು ಜನರಿಗೆ ದಾರಿ ಮಾಡಿಕೊಟ್ಟಿತು ಎಂದು ಹೇಳಿದರು.
ವಿವೇಕಾನಂದ ಕಾಲೇಜಿನ ಪ್ರಾಂಶುಪಾಲ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಅಧ್ಯಕ್ಷತೆ ವಹಿಸಿ ಮಾತನಾಡಿ ಸಾಧನೆಗೆ ಯಾವುದೇ ರಾಜಮಾರ್ಗವಿಲ್ಲ. ಪರಿಶ್ರಮ ಒಂದೇ ಇಲ್ಲಿರುವ ದಾರಿ. ಯಾವುದೇ ಹುದ್ದೆಯಲ್ಲಿದ್ದರೂ, ಯಾವುದೋ ಭಾಷೆಯಲ್ಲಿ ಹಿಡಿತ ಸಾಸಿದ್ದರೂ, ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಬಹುದು ಎನ್ನುವುದಕ್ಕೆ ಮಾಸ್ತಿಯವರು ಉತ್ತಮ ಉದಾಹರಣೆ. ಸಹಾಯಕ ಆಯುಕ್ತರಾಗಿ, ಜಿಲ್ಲಾಕಾರಿಯಾಗಿ ಕೆಲಸ ನಿರ್ವಹಿಸಿದರೂ ಸಾಹಿತ್ಯ ಕ್ಷೇತ್ರಕ್ಕೆ ಸಮಯ ನೀಡುತ್ತಿದ್ದರು ಎಂದರು.
ವಿವೇಕಾನಂದ ಪದವಿ ಕಾಲೇಜಿನ ಕನ್ನಡ ಉಪನ್ಯಾಸಕ ಡಾ. ಶ್ರೀಧರ ಎಚ್.ಜಿ., ಪುತ್ತೂರು ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ. ಐತ್ತಪ್ಪ ನಾಯ್ಕಾ ಉಪಸ್ಥಿತರಿದ್ದರು. ಅಂಕಣಕಾರ, ಲೇಖಕ ಪ್ರೊ. ವಿ.ಬಿ. ಅರ್ತಿಕಜೆ ಸ್ವಾಗತಿಸಿ, ವಂದಿಸಿದರು. ಡಾ. ಗೀತಾ ಕುಮಾರಿ ಕಾರ್ಯಕ್ರಮ ನಿರೂಪಿಸಿದರು.







