ಲಿಂಗಾಯತ ಗಾಣಿಗರು 2ಎ ಪ್ರಮಾಣಪತ್ರಕ್ಕೆ ಅನರ್ಹ
ಬೆಂಗಳೂರು, ನ.27: ಲಿಂಗಾಯತ ಗಾಣಿಗರು ಲಿಂಗಾಯತ ಧರ್ಮದ ಉಪ ಪಂಗಡವಾಗಿದ್ದು, ಅವರು 2ಎ ಮೀಸಲಾತಿ ಪ್ರಮಾಣಪತ್ರ ಪಡೆಯಲು ಅರ್ಹರಾಗುವುದಿಲ್ಲ. ಆದರೆ, ಮುಖ್ಯಮಂತ್ರಿ 2ಎ ಪ್ರಮಾಣಪತ್ರ ನೀಡಲು ವಿಳಂಬವಾಗದಂತೆ ಎಚ್ಚರ ವಹಿಸುವಂತೆ ಸೂಚನೆ ನೀಡಿರುವುದು ಆಕ್ಷೇಪಾರ್ಹ ಎಂದು ಅಖಿಲ ಕರ್ನಾಟಕ ಗಾಣಿಗರ ಸಂಘ ತಿಳಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಎಂ.ಎಸ್.ಶ್ರೀನಿವಾಸಮೂರ್ತಿ, ಇತ್ತೀಚಿಗೆ ಮುಖ್ಯಮಂತ್ರಿಗೆ ಲಿಂಗಾಯತ ಗಾಣಿಗ ಸಮುದಾಯದ ಮುಖಂಡರ ಮನವಿ ಮೇರೆಗೆ ಅಧಿಕಾರಿಗಳು ಪ್ರಮಾಣ ಪತ್ರ ವಿತರಣೆಗೆ ವಿಳಂಬ ಮಾಡಬಾರದು ಎಂದು ಹೇಳಿಕೆ ನೀಡಿರುವುದು ನ್ಯಾಯಾಲಯದ ತೀರ್ಪಿನ ವಿರುದ್ಧವಾಗಿದೆ ಎಂದು ಹೇಳಿದರು.
ಮುಂದುವರಿದ ಲಿಂಗಾಯತ ಗಾಣಿಗ ಸಮುದಾಯದವರು ತಪ್ಪು ಮಾಹಿತಿ ನೀಡಿ 2ಎ ಪ್ರಮಾಣಪತ್ರವನ್ನು ಪಡೆದುಕೊಳ್ಳುತ್ತಿದ್ದಾರೆ. ಈ ಕುರಿತು ಮುಖ್ಯ ಕಾರ್ಯದರ್ಶಿಗೆ, ಹಿಂದುಳಿದ ಆಯೋಗಕ್ಕೆ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಅಲ್ಲದೆ, ತಪ್ಪು ಮಾಹಿತಿ ನೀಡಿ ಪ್ರಮಾಣ ಪತ್ರ ಪಡೆದು ಸಂಗಪ್ಪ ಎನ್ನುವವರು ಕೆಪಿಎಸ್‌ಸಿಯಿಂದ ಕೆಎಎಸ್ ಹುದ್ದೆಗೆ ಭಡ್ತಿ ಪಡೆದಿದ್ದಾರೆ. ಮತ್ತೊಬ್ಬರು ಕುರುಬ ಜನಾಂಗದ ಅಭ್ಯರ್ಥಿ ಚಂದ್ರಕಾಂತ್ ಎಂಬವರು 2ಎ ಪ್ರಮಾಣ ಪತ್ರ ಪಡೆದಿದ್ದರು. ಇದನ್ನು ಪ್ರಶ್ನಿಸಿ ಹೈ ಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಲಾಗಿತ್ತು. ನ್ಯಾಯಾಲಯ ತನಿಖೆ ನಡೆಸಿ, ಸಂಗಪ್ಪ ಎಂಬವರು ಪಡೆದಿದ್ದ 2ಎ ಮೀಸಲಾತಿ ಪ್ರಮಾಣ ಪತ್ರವನ್ನು ಅನರ್ಹಗೊಳಿಸಿ, ಲಿಂಗಾಯತ ಗಾಣಿಗರು 2ಎ ಮೀಸಲಾತಿ ಪಡೆಯಲು ಅನರ್ಹರು ಎಂದು ತೀರ್ಪು ನೀಡಿದೆ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ 2ಎ ಮೀಸಲಾತಿ ಪ್ರಮಾಣ ಪತ್ರ ನೀಡುವ ಕುರಿತು ನೀಡಿರುವ ವಾಗ್ದಾನ ನ್ಯಾಯಾಂಗ ನಿಂದನೆಯಾಗುತ್ತದೆ. ಹೀಗಾಗಿ, ಕೂಡಲೇ ಅದನ್ನು ಹಿಂಪಡೆಯಬೇಕು ಎಂದು ಅವರು ಆಗ್ರಹಿಸಿದರು.







