ಭಾಷೆಗಳು ಬಾಂಧವ್ಯ ಬೆಸೆಯಬೇಕು: ಆಶಾ ಐಹೊಳೆ
ಬೆಳಗಾವಿ, ನ.27: ಮಹಾರಾಷ್ಟ್ರದಲ್ಲಿ ಜನಿಸಿದ್ದರೂ ಕನ್ನಡ ನಾಡಿನ ಜನತೆಯ ಸೇವೆ ಮಾಡುವ ಸದಾವಕಾಶ ಲಭಿಸಿರುವುದು ನನ್ನ ಪುಣ್ಯ. ಭಾಷೆಗಳು ನಮ್ಮ ಬಾಂಧವ್ಯ ಬೆಸೆಯಬೇಕು. ಈ ದಿಸೆಯಲ್ಲಿ ಕಷ್ಟ ಪಟ್ಟು ಕನ್ನಡ ಕಲಿತಿದ್ದೇನೆ ಎಂದು ಬೆಳಗಾವಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಆಶಾ ಐಹೊಳೆ ಹೇಳಿದ್ದಾರೆ.
ನಗರದ ಕುಮಾರಗಂಧರ್ವ್ ರಂಗಮಂದಿರದಲ್ಲಿ ಸಿರಿಗನ್ನಡ ರಾಷ್ಟ್ರೀಯ ಪ್ರತಿಷ್ಠಾನ ಏರ್ಪಡಿಸಿದ್ದ ಸಿರಿಗನ್ನಡ ರಾಜ್ಯೋತ್ಸವ ಸಮಾರಂಭ 2017 ಹಾಗೂ ಧ್ವನಿ ಸುರಳಿ ಬಿಡುಗಡೆ, ಸಾಂಸ್ಕೃತಿಕ ಸಡಗರ ಮತ್ತು ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಿರಿಗನ್ನಡ ರಾಷ್ಟ್ರೀಯ ಪ್ರತಿಷ್ಠಾನ ಕನ್ನಡ ಮತ್ತು ಮರಾಠಿ ಬಾಂಧವ್ಯ ಬೆಸೆಯುವ ಕೆಲಸ ಮಾಡುತ್ತಿರುವುದು ನಮ್ಮೆಲ್ಲರಿಗೆ ಹೆಮ್ಮೆಯಾಗಿದೆ. ಜಿಲ್ಲಾ ಪಂಚಾಯತ್ ಅಧ್ಯಕ್ಷೆಯಾಗಿ ‘ಕಾಯಕವೇ ಕೈಲಾಸ’ ಎಂಬ ಬಸವ ತತ್ವದ ಅಡಿಯಲ್ಲಿ ಸೇವೆ ಮಾಡುತ್ತಿದ್ದೇನೆ. ಎಲ್ಲರೂ ನಮ್ಮವರೆ ಎಂಬ ತತ್ವದ ಅಡಿಯಲ್ಲಿ ಸರಕಾರದ ಯೋಜನೆಗಳನ್ನು ಗ್ರಾಮೀಣ ಜನತೆಯ ಮನೆಯ ಬಾಗಿಲಿಗೆ ಮುಟ್ಟಿಸುತ್ತಿದ್ದೇನೆ ಎಂದು ವಿವರಿಸಿದರು.
ಬುದ್ಧ, ಬಸವ, ಅಂಬೇಡ್ಕರ್ ತತ್ವ ಸಿದ್ಧಾಂತದ ಅಡಿಯಲ್ಲಿ ನಾವೆಲ್ಲ ಮುನ್ನಡೆಯಬೇಕು. ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು ಎಂದ ಅವರು, ಜನರ ಆಶೀರ್ವಾದದಿಂದ 18 ತಿಂಗಳ ಅವಧಿಯಲ್ಲಿ ಜಿಲ್ಲಾ ಪಂಚಾಯತ್ ಗೆ ಮೂರು ಪ್ರಶಸ್ತಿಗಳು ಬಂದಿವೆ. ಇಂದು ನನಗೆ ವೈಯಕ್ತಿಕ ಸನ್ಮಾನ ದೊರೆತಿರುವುದು ಮರೆಯಲಾಗದ ಕ್ಷಣ ಎಂದು ಸ್ಮರಿಸಿಕೊಂಡರು.
ಮಾರಿಹಾಳ ಠಾಣೆಯ ಪೊಲೀಸ್ ಇನ್ ಸ್ಪೆಕ್ಟರ್ ಜ್ಯೋತಿರ್ಲಿಂಗ ಹೊನ್ನಕಟ್ಟಿ ಮತ್ತು ಅವರ ಪತ್ನಿ ಅಶ್ವಿನಿ ಅವರ, ‘ದಾರಿ ಮ್ಯಾಲಿನ ಹೊಲ’ ಎಂಬ ಜಾನಪದ ಧ್ವನಿ ಸುರಳಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಪೊಲೀಸ್ ಆಯುಕ್ತ ಟಿ.ಜಿ.ಕೃಷ್ಣಭಟ್, ನಶಿಸಿ ಹೋಗುತ್ತಿರುವ ಜಾನಪದ ಕಲೆಯನ್ನು ಪ್ರೋತ್ಸಾಹಿಸುವ ಕಾರ್ಯ ನಡೆಯಬೇಕು ಎಂದರು.
ಪೊಲೀಸ್ ಅಧಿಕಾರಿಯಾಗಿ ನಮ್ಮ ಜಾನಪದ ಕಲೆ, ಸಂಸ್ಕೃತಿ, ಸಾವಯವ ಸಿರಿಧಾನ್ಯಗಳ ಮೂಲಕ ಮಡಿಕೆ, ಕುಡಿಕೆಗಳ ಬಳಕೆ ಮಾಡುತ್ತಿರುವ ಹೊನ್ನಕಟ್ಟಿಯನ್ನು ಪ್ರೋತ್ಸಾಹಿಸುವ ಕೆಲಸವನ್ನು ನಮ್ಮ ಇಲಾಖೆ ಮಾಡುತ್ತಿದೆ ಎಂದು ಹೇಳಿದರು.
‘ಗಡಿನಾಡಿನಲ್ಲಿ ಭಾಷಾ ಸಾಮರಸ್ಯ’ ವಿಷಯದ ಕುರಿತು ಬಿಎಂಟಿಸಿ ಅಧ್ಯಕ್ಷ ನಾಗರಾಜ ಯಾದವ್ ವಿಶೇಷ ಉಪನ್ಯಾಸ ನೀಡಿದರು.
ಈ ವೇಳೆ ನಾಗನೂರು ಮಠದ ಶ್ರೀ ಸಿದ್ದರಾಮ ಸ್ವಾಮಿ ಹಾಗೂ ಜಮಖಂಡಿಯ ಒಲೆಮಠದ ಡಾ.ಅಭಿನವ ಚನ್ನಬಸವ ಸ್ವಾಮಿಗಳು ಸಾನಿಧ್ಯದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಮಹನೀಯರಿಗೆ ಸಿರಿಗನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಹೈಕೋರ್ಟ್‌ನ ನಿವೃತ್ತ ನ್ಯಾ.ಅರಳಿ ನಾಗರಾಜ, ಡಿಸಿಪಿ ಸೀಮಾ ಲಾಟ್ಕರ್, ಡಾ. ಬಸವರಾಜ ಜಗಜಂಪಿ, ಪ್ರತಿಷ್ಠಾನದ ಅಧ್ಯಕ್ಷ ಶಶಿಧರ ಘಿವಾರಿ, ಬಾಳು ಉದಗಟ್ಟಿ, ಟಿ.ಎನ್.ಸಾನಿಕೊಪ್ಪ, ಸುನೀತಾ ನಿಂಬರಗಿ, ಡಾ.ಸೋನಾಲಿ ಸರ್ನೊಬತ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.







