ಮೊಗೇರ ಸಮುದಾಯಕ್ಕೆ ಅಕ್ರಮ ಪರಿಶಿಷ್ಟ ಜಾತಿ ಪ್ರಮಾಣಪತ್ರ: ಆರೋಪ
ಬೆಂಗಳೂರು, ನ.27: ಉತ್ತರ ಕನ್ನಡ ಜಿಲ್ಲೆಯಲ್ಲಿ ಮೀನುಗಾರಿಕೆ ಮಾಡುವ ‘ಮೊಗೇರ’ ಸಮುದಾಯ ಹಿಂದುಳಿದ ವರ್ಗಗಳ ಪ್ರವರ್ಗ 1ಕ್ಕೆ ಸೇರಿದೆ. ಆದರೆ, ಈ ಸಮುದಾಯದವರು ಅಕ್ರಮವಾಗಿ ಪರಿಶಿಷ್ಟ ಜಾತಿಯ ಜಾತಿ ಪ್ರಮಾಣ ಪತ್ರ ಪಡೆದು ಅರ್ಹ ಮೊಗೇರ್ ಸಮುದಾಯಕ್ಕೆ ಸಿಗಬೇಕಾದ ಸವಲತ್ತು ಪಡೆಯುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ಮೀಸಲಾತಿ ರಕ್ಷಣಾ ಒಕ್ಕೂಟ ಆರೋಪಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಶ್ರೀನಿವಾಸ, ಕರ್ನಾಟಕದಲ್ಲಿ ಮೊಗೇರ ಹೆಸರಿನಲ್ಲಿ ಎರಡು ಜಾತಿಗಳಿವೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಮೊಲ ಬೇಟೆಯಾಡುವ ವೃತ್ತಿಯ ಸಮುದಾಯಕ್ಕೆ ಮೊಗೇರ್ ಎಂಬ ಹೆಸರಿದೆ. ಅಂತೆಯೆ ಈ ಭಾಗದಲ್ಲಿ ಮೀನುಗಾರಿಕೆ ವೃತ್ತಿ ಮಾಡುವ ಸಮುದಾಯಕ್ಕೆ ಮೊಗೇರ ಎಂಬ ಹೆಸರಿದೆ. ಸಂವಿಧಾನದ ಅನ್ವಯ ಮೊಲ ಬೇಟೆ ವೃತ್ತಿಯ ಮೊಗೇರ್ ಸಮುದಾಯ ಪರಿಶಿಷ್ಟ ಜಾತಿಗೆ ಬರುತ್ತದೆ. ಮೀನುಗಾರಿಕೆ ವೃತ್ತಿಯ ಮೊಗೇರ ಸಮುದಾಯ ಹಿಂದುಳಿದ ವರ್ಗಗಳ ಪ್ರವರ್ಗ 1ಕ್ಕೆ ಬರುತ್ತದೆ. ಆದರೆ, ಈ ಸಮುದಾಯದವರು ಕಳೆದ ಎರಡು ದಶಕಗಳಿಂದ ತಾವು ಪರಿಶಿಷ್ಟ ಜಾತಿಗೆ ಸೇರಿದವರು ಎಂದು ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದು ಸವಲತ್ತುಗಳನ್ನು ಪಡೆಯುತ್ತಿದ್ದಾರೆ. ಈ ವಿಚಾರವಾಗಿ ಸಚಿವ ಆರ್.ವಿ.ದೇಶಪಾಂಡೆ ಕೂಡ ಮೀನುಗಾರ ಮೊಗೇರರ ಪರ ನಿಂತು ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡುವಂತೆ ಜಿಲ್ಲಾಡಳಿತದ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ದೂರಿದರು.
ಕಳೆದ 2011ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಕುಮಟಾ, ಹೊನ್ನಾವರ ಹಾಗೂ ಭಟ್ಕಳ ತಾಲೂಕು ತಹಶೀಲ್ದಾರರು ಹಾಗೂ ಜಿಲ್ಲಾಧಿಕಾರಿಗಳು ಈ ಸಮುದಾಯಕ್ಕೆ ಪರಿಶಿಷ್ಟ ಜಾತಿ ಪ್ರಮಾಣ ಹಾಗೂ ಸಿಂಧುತ್ವ ಪ್ರಮಾಣ ಪತ್ರ ನೀಡಲು ನಿರಾಕರಿಸಿದ್ದರು. ಇದರ ವಿರುದ್ಧ ದಿನಕರ ಬೈದ್ನಮನೆ ಮತ್ತು ವ್ನಿೇಶ್ವರ ಗುಂಡು ರಾಜ್ಯ ಸರಕಾರದ ವಿರುದ್ಧ ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್ ಮೀನುಗಾರ ಮೊಗೇರರು ಪರಿಶಿಷ್ಟ ಜಾತಿಗೆ ಬರುವುದಿಲ್ಲ ಎಂದು ಹೇಳಿತ್ತು. ಬಳಿಕ ಸುಪ್ರೀಂ ಕೋರ್ಟ್ ಕೂಡ ಸರಕಾರದ ಮಟ್ಟದಲ್ಲಿ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಸೂಚಿಸಿದೆ. ಆದರೂ ಮೀನುಗಾರ ಮೊಗೇರರು ಸುಪ್ರೀಂ ಕೋರ್ಟ್ ನಮ್ಮ ಪರ ತೀರ್ಪು ನೀಡಿದೆ ಎಂದು ಸುಳ್ಳು ಹೇಳಿಕೊಂಡು ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದರು.
ರಾಜ್ಯ ಸರಕಾರ ಯಾರ ಒತ್ತಡಕ್ಕೂ ಮಣಿಯಬಾರದು. ಮೀನುಗಾರ ಮೊಗೇರರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಹಾಗೂ ಸವಲತ್ತುಗಳನ್ನು ನೀಡಬಾರದು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಸಮಸ್ಯೆಯನ್ನು ಶೀಘ್ರ ಬಗೆಹರಿಸಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.







