ಪ್ರಧಾನಿಯ ಮೇಕ್ ಇನ್ ಇಂಡಿಯಾ ಸತ್ತಿದೆ : ರಾಹುಲ್ ಗಾಂಧಿ
“ಚರಂಡಿಗೆ ಹರಿದು ಹೋದ 33,000 ಕೋ.ರೂ.ಗೆ ಯಾರು ಹೊಣೆ”?

ಹೊಸದಿಲ್ಲಿ, ನ. 27: ಪ್ರಧಾನಿ ಮೋದಿ ಅವರ ಮೇಕ್ ಇನ್ ಇಂಡಿಯಾವನ್ನು ತರಾಟೆಗೆ ತೆಗೆದೆಕೊಳ್ಳಲು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಗುಜರಾತ್‌ನ ನ್ಯಾನೊ ಸಣ್ಣ ಕಾರು ಉತ್ಪಾದನಾ ಘಟಕವನ್ನು ಉಲ್ಲೇಖಿಸಿದ್ದಾರೆ ಹಾಗೂ ಚರಂಡಿಗೆ ಹರಿದು ಹೋದ ತೆರಿಗೆ ಪಾವತಿದಾರರ 33,000 ಕೋಟಿ ರೂಪಾಯಿಗೆ ಯಾರು ಹೊಣೆ ಎಂದು ಪ್ರಶ್ನಿಸಿದ್ದಾರೆ.
ಪ್ರಧಾನಿ ಅವರ ಅಚ್ಚುಮೆಚ್ಚಿನ ಮೇಕ್ ಇನ್ ಇಂಡಿಯಾ ಯೋಜನೆ ಈಗಷ್ಟೆ ಮೃತಪಟ್ಟಿದೆ. ಗುಜರಾತ್ ತೆರಿಗೆ ಪಾವತಿದಾರರ 33.000 ಕೋಟಿ ರೂಪಾಯಿ ಬೂದಿಯಾಗಿದೆ. ಇದಕ್ಕೆ ಯಾರು ಹೊಣೆ ? ಟಾಟಾ ನ್ಯಾನೋ ಕಾರುಗಳಿಗೆ ಆರ್ಡರ್ ನೀಡುವುದನ್ನು ಮಾರಾಟಗಾರರು ನಿಲ್ಲಿಸಿದ್ದಾರೆ ಎಂಬ ಮಾಧ್ಯಮ ವರದಿಯೊಂದಿಗೆ ರಾಹುಲ್ ಟ್ವೀಟ್ ಮಾಡಿದ್ದಾರೆ ಎಂದರು.
ಗುಜರಾತ್‌ನಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು, ಮೋದಿ ಅವರ ಅಭಿವೃದ್ಧಿ ಕಾರ್ಯಸೂಚಿ ದೊಡ್ಡ ಉದ್ಯಮಗಳಿಗೆ ಲಾಭ ಉಂಟು ಮಾಡುವ ಉದ್ದೇಶ ಹೊಂದಿದೆ ಎಂದರು.
ಯುಪಿಎ ಸರಕಾರ 30,000 ಕೋಟಿ ರೂ. ಎಂಜಿಎನ್‌ಆರ್‌ಇಜಿಎಗೆ ನೀಡಿತ್ತು. ಆದರೆ, ಮೋದಿ ಅವರು ಇದೇ ಮೊತ್ತವನ್ನು ಕಂಪೆನಿಗೆ ನೀಡಿದ್ದಾರೆ ಎಂದು ಹೇಳಿರುವ ರಾಹುಲ್ ಗಾಂಧಿ, ಭರವಸೆ ನೀಡಿದಂತೆ ಮೆಗಾ ಯೋಜನೆ ಸ್ಥಳೀಯರಿಗೆ ಉದ್ಯೋಗ ನೀಡದಿರುವ ಬಗ್ಗೆ ಅಚ್ಚರಿಯಾಗುತ್ತದೆ ಎಂದಿದ್ದಾರೆ.
ನಾನು ರಸ್ತೆಯಲ್ಲಿ ಒಂದೇ ಒಂದು ನ್ಯಾನೋ ಕಾರನ್ನು ನೋಡಿಲ್ಲ. ಈ ಕಾರ್ಖಾನೆಯಿಂದ ಏನಾದರೂ ಲಾಭ ಇದೆಯೇ ? ನಿಮ್ಮ ಮಕ್ಕಳು ಈ ಕಾರ್ಖಾನೆಯಲ್ಲಿ ಉದ್ಯೋಗ ಗಳಿಸಿದ್ದಾರೆಯೇ ? ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.







