ಪೇಜಾವರ ಶ್ರೀ ಕ್ಷಮೆಯಾಚನೆಗೆ, ಗೋಪಾಲ್ ವಿರುದ್ಧ ಮೊಕದ್ದಮೆಗೆ ಪಟ್ಟು
ಬೆಂಗಳೂರು, ನ.27: ಸಂವಿಧಾನ ತಿದ್ದುಪಡಿ ಮಾಡಬೇಕು ಎಂದು ವಿವಾದಿತ ಹೇಳಿಕೆ ನೀಡಿರುವ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಬಹಿರಂಗ ಕ್ಷಮೆಯಾಚಿಸಬೇಕು. ಜತೆಗೆ ಸಮಾಜದ ಸೌಹಾರ್ದತೆ ಹಾಳು ಮಾಡುತ್ತಿರುವ ವಿಎಚ್‌ಪಿ ಸಂಘಟನಾ ಕಾರ್ಯದರ್ಶಿ ಗೋಪಾಲ್ ವಿರುದ್ಧ ಮೊಕದ್ದಮೆ ದಾಖಲಿಸುವಂತೆ ಬೆಂ.ಮಹಾನಗರ ಜಿಲ್ಲಾ ಕಾಂಗ್ರೆಸ್ ಸಮಿತಿ(ಮಾಹಿತಿ ತಂತ್ರಜ್ಞಾನ ವಿಭಾಗ) ಆಗ್ರಹಿಸಿದೆ.
ಉಡುಪಿಯಲ್ಲಿ ನಡೆದ ಹಿಂದು ಧರ್ಮ ಸಂಸದ್ ವೇದಿಕೆಯಲ್ಲಿ ಕೋಮುವಾದವನ್ನು ಸೃಷ್ಟಿಸುವ ಹಾಗೂ ಸಂವಿಧಾನವನ್ನು ಬದಲಾಯಿಸುವ ಹೇಳಿಕೆಗಳನ್ನು ನೀಡಿರುವುದನ್ನು ಖಂಡಿಸಿ ಸೋಮವಾರ ನಗರದ ಮೌರ್ಯ ವೃತ್ತದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಮುಖಂಡ ವಿ.ಶೇಖರ್, ಅಲ್ಪಸಂಖ್ಯಾತರನ್ನು ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಟೀಕಿಸಲು ಧರ್ಮ ಸಂಸತ್ ವೇದಿಕೆಯನ್ನು ಬಳಸಿಕೊಳ್ಳಲಾಗಿದೆ. ಸಂವಿಧಾನವನ್ನು ಪ್ರಶ್ನಿಸುವ ಮೂಲಕ ಪರ್ಯಾಯ ಪೇಜಾವರ ಮಠಾಧೀಶ ವಿಶ್ವೇಶ ತೀರ್ಥ ಸ್ವಾಮೀಜಿ ಹಾಗೂ ಬಿಜೆಪಿ ಮುಖಂಡ ಗೋ.ಮಧುಸೂದನ್ ಅಪಚಾರ ಎಸಗಿದ್ದಾರೆ. ಅವರು ಕೂಡಲೇ ಕ್ಷಮೆಕೋರಬೇಕು ಎಂದು ಒತ್ತಾಯಿಸಿದರು.
ಮೊಕದ್ದಮೆ: ಗೋಹತ್ಯೆ ಮಾಡುವ ವ್ಯಕ್ತಿಗಳ ಕೈಗಳನ್ನು ಕತ್ತರಿಸಬೇಕು ಎಂದು ವಿಶ್ವ ಹಿಂದೂ ಪರಿಷತ್ ಮುಖಂಡ ಗೋಪಾಲ್ ಹೇಳಿಕೆ ನೀಡಿರುವುದು ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗಿದೆ. ಹೀಗಾಗಿ, ಅವರ ವಿರುದ್ಧ ಮೊಕದ್ದಮೆ ದಾಖಲಿಸಿ ಪೊಲೀಸರು ಕಠಿಣ ಕಾನೂನು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡ ಗೋ.ಮಧುಸೂದನ್ ಅವರ ಪ್ರತಿಕೃತಿ ದಹಿಸಿ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.







