ಕೇಂದ್ರ ಸರಕಾರ 2.50 ರೂ.ಗೆ ವಿದ್ಯುತ್ ನೀಡಿದರೆ ಖರೀದಿ ಪ್ರಕ್ರಿಯೆ ಸ್ಥಗಿತ: ಸಚಿವ ಶಿವಕುಮಾರ್

ಹುಬ್ಬಳ್ಳಿ, ನ.27: ಕೇಂದ್ರ ಸರಕಾರವು 2.50 ರೂ.ಗಳಿಗೆ ವಿದ್ಯುತ್ ನೀಡಲು ಸಿದ್ಧವಿರುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹೇಳಿದ್ದಾರೆ. ಒಂದು ವೇಳೆ ಕೇಂದ್ರ ಸರಕಾರ ಅದೇ ದರದಲ್ಲಿ ವಿದ್ಯುತ್ ಪೂರೈಸಿದರೆ ಎಲ್ಲ ಖರೀದಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸುವುದಾಗಿ ಇಂಧನ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಸೋಮವಾರ ನಗರದ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಜನತೆಯನ್ನು ತಪ್ಪು ದಾರಿಗೆ ಎಳೆಯುವುದನ್ನು ಬಿಟ್ಟು, ಅವರು ಹೇಳಿದ ದರಕ್ಕೆ ಕೇಂದ್ರದಿಂದ ವಿದ್ಯುತ್ ಕೊಡಿಸಲಿ. ನನ್ನ ಎಲ್ಲ ವೈಯಕ್ತಿಕ ಕೆಲಸಗಳನ್ನು ಬಿಟ್ಟು ಅವರ ಹಿಂದೆ ಅಲೆಯುತ್ತೇನೆ ಎಂದು ಸವಾಲು ಹಾಕಿದರು.
ಕೇಂದ್ರ ಸರಕಾರವು 2.50 ರೂ.ಗಳಿಗೆ ವಿದ್ಯುತ್ ನೀಡಲಿದೆ ಎಂಬುದೇ ಪ್ರಶ್ನಾರ್ಹ. ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಲೋಡ್‌ಶೆಡ್ಡಿಂಗ್ ಮಾಡುವುದಿಲ್ಲ. ರೈತರಿಗೆ ಬೇಸಿಗೆಯಲ್ಲೂ ನಿಗದಿತ ವಿದ್ಯುತ್ ಪೂರೈಕೆ ಮಾಡಲಾಗುವುದು ಎಂದರು.
ಧಾರವಾಡ ಜಿಲ್ಲೆಯ ಹೆಬ್ಬಳ್ಳಿ ಜಿ.ಪಂ.ಸದಸ್ಯ ಯೋಗೇಶ್‌ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ವಿನಯ್‌ಕುಲಕರ್ಣಿ ವಿರುದ್ಧ ಬಿಜೆಪಿ ಮುಖಂಡರು ರಾಜಕೀಯ ಮಾಡುತ್ತಿದ್ದಾರೆ. ಅದೇ ರೀತಿ ಸಚಿವ ಕೆ.ಜೆ.ಜಾರ್ಜ್ ವಿರುದ್ಧವು ಆಧಾರರಹಿತವಾದ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ನಮ್ಮ ಸರಕಾರದಲ್ಲಿರುವ ಯಾವ ಸಚಿವರು ಅಕ್ರಮಗಳನ್ನು ಮಾಡಿಲ್ಲ. ನಮ್ಮ ಸರಕಾರ ಹಾಗೂ ಪಕ್ಷದ ಬೆಳವಣಿಗೆಯನ್ನು ಸಹಿಸಲಾಗದೆ ಹತಾಶರಾಗಿ ಬಿಜೆಪಿ ಮುಖಂಡರು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ನನ್ನ ಮೇಲೆ ಆದಾಯ ತೆರಿಗೆ ಇಲಾಖೆಯವರ ದಾಳಿ ನಡೆದಾಗ ಅದನ್ನು ಈ ದೇಶದ ದೊಡ್ಡ ಹಗರಣದಂತೆ ಬಿಂಬಿಸಲಾಯಿತು. ಆದರೆ, ವಿಧಾನಸಭೆಯ ಅಧಿವೇಶನದಲ್ಲಿ ಯಾಕೆ ಈ ವಿಚಾರವನ್ನು ಬಿಜೆಪಿ ನಾಯಕರು ಚರ್ಚೆ ಮಾಡಿಲ್ಲ ಎಂದು ಅವರು ಪ್ರಶ್ನಿಸಿದರು.
ಬಿಜೆಪಿಯವರದ್ದು ಹಿಟ್ ಆ್ಯಂಡ್ ರನ್ ಪ್ರವೃತ್ತಿ. ಚುನಾವಣೆ ಸಮೀಪಿಸುತ್ತಿರುವುದರಿಂದ ಇಂತಹ ಆರೋಪಗಳನ್ನು ಮಾಡಿ ರಾಜಕೀಯ ಲಾಭ ಪಡೆದುಕೊಳ್ಳಲು ಯತ್ನಿಸುತ್ತಿದ್ದಾರೆ. ಆದರೆ, ಅವರ ಶ್ರಮ ಫಲಿಸುವುದಿಲ್ಲ ಎಂದು ಶಿವಕುಮಾರ್ ಹೇಳಿದರು.







