ದಿಲ್ಲಿಯಲ್ಲಿ 600 ಕೋ.ರೂ.ಭೂ ಹಗರಣ ಬೆಳಕಿಗೆ: ಸಿಬಿಐ ತನಿಖೆಗೆ ಕೋರಿದ ಉಪ ರಾಜ್ಯಪಾಲ

ಹೊಸದಿಲ್ಲಿ,ನ.27: ಸರಕಾರಿ ಅಧಿಕಾರಿಗಳು ನಕಲಿ ನ್ಯಾಯಾಲಯ ಆದೇಶಗಳನ್ನು ಬಳಸಿ ಸುಳ್ಳು ಭೂ ದಾಖಲೆಗಳನ್ನು ಸೃಷ್ಟಿಸಿ ಆಯಕಟ್ಟಿನ ಪ್ರದೇಶಗಳಲ್ಲಿರುವ 600 ಕೋ.ರೂ.ಗೂ ಅಧಿಕ ವೌಲ್ಯದ ಕನಿಷ್ಠ 30 ಎಕರೆ ಸರಕಾರಿ ಭೂಮಿಯನ್ನು ಜುಜುಬಿ ಬೆಲೆಗಳಲ್ಲಿ ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡಿರುವ ಹಗರಣವು ಬೆಳಕಿಗೆ ಬಂದಿದ್ದು, ದಿಲ್ಲಿಯ ಉಪ ರಾಜ್ಯಪಾಲ ಅನಿಲ ಬೈಜಾಲ್ ಅವರು ಈ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಳ್ಳುವಂತೆ ಸಿಬಿಐ ಅನ್ನು ಕೇಳಿಕೊಂಡಿದ್ದಾರೆ.
ಬಹುಶಃ ರಾಜಧಾನಿಯಲ್ಲಿನ ಅತ್ಯಂತ ದೊಡ್ಡ ಭೂ ಹಗರಣವಾಗಿರುವ ಈ ಪ್ರಕರಣದಲ್ಲಿ ದಕ್ಷಿಣ ದಿಲ್ಲಿಯ ಅಸೋಲಾ ಗ್ರಾಮದಲ್ಲಿನ ಕನಿಷ್ಠ ಮೂರು ನಿವೇಶನಗಳನ್ನು ಅವುಗಳ ಮಾರುಕಟ್ಟೆ ಬೆಲೆಗಳ ಶೇ.5ಕ್ಕೂ ಕಡಿಮೆ ಬೆಲೆಗಳಿಗೆ ಮಾರಾಟ ಮಾಡಲಾಗಿದೆ ಎಂದು ಈ ಬಗ್ಗೆ ದಾಖಲೆಗಳನ್ನು ಸಂಗ್ರಹಿಸಿರುವ ಆಂಗ್ಲ ದೈನಿವೊಂದು ವರದಿ ಮಾಡಿದೆ. ಕಳೆದ ಒಂದು ವರ್ಷದಿಂದ ಈ ಭೂ ಹಗರಣ ಅನಾವರಣಗೊಳ್ಳುತ್ತ ಬಂದಿದೆ.
ದಾಖಲೆಗಳಲ್ಲಿ ಹಸ್ತಕ್ಷೇಪ ನಡೆಸಲಾಗಿರುವ 13 ನಿವೇಶನಗಳ ಪ್ರಕರಣ ವಿವರಗಳನ್ನು ಸಲ್ಲಿಸುವಂತೆಯೂ ಬೈಜಾಲ್ ಅವರು ಕಳೆದ ವಾರ ದಿಲ್ಲಿ ಸರಕಾರದ ಕಂದಾಯ ಇಲಾಖೆಗೆ ಸೂಚಿಸಿದ್ದರು. ಇಂತಹ ವಂಚನೆಗಳನ್ನು ಪತ್ತೆ ಹಚ್ಚಲು ಎಲ್ಲ ಸರಕಾರಿ ನಿವೇಶನಗಳ ದಾಖಲೆಗಳನ್ನು ಪರಿಶೀಲಿಸುವಂತೆ ದಿಲ್ಲಿ ವಿಭಾಗೀಯ ಆಯುಕ್ತ ಮನೀಷಾ ಸಕ್ಸೇನಾ ಅವರು ನಗರದಲ್ಲಿಯ ಎಲ್ಲ ದಂಡಾಧಿಕಾರಿಗಳಿಗೆ ಆದೇಶಿಸಿದ್ದಾರೆ.
ಬೆಳಕಿಗೆ ಬಂದಿರುವ ಎಲ್ಲ ಪ್ರಕರಣಗಳಲ್ಲಿ ಭೂಮಿಯು ಗ್ರಾಮಸಭಾಗಳಿಗೆ ಸೇರಿದ್ದು, ದಿಲ್ಲಿ ಸರಕಾರದ ಅಧೀನದ್ದಾಗಿದೆ. ಉಪ ವಿಭಾಗೀಯ ದಂಡಾಧಿಕಾರಿಗಳ ಕಚೇರಿಯಲ್ಲಿಯ ಭೂ ದಾಖಲೆಗಳನ್ನು ತಿರುಚಲು ನಕಲಿ ನ್ಯಾಯಾಲಯ ಆದೇಶಗಳನ್ನು ಬಳಸಿಕೊಂಡು ಈ ನಿವೇಶನಗಳನ್ನು ಪರಭಾರೆ ಮಾಡಲಾಗಿದೆ.
ಅಸೋಲಾದಲ್ಲಿ ಭೂಮಿಯನ್ನು ಹೇಗೆ ಹಂಚಲಾಗಿತ್ತು ಎನ್ನುವುದಕ್ಕೆ ಏಕೈಕ ಭೌತಿಕ ಸಾಕ್ಷವಾಗಿದ್ದ ಸಾಕೇತ್‌ನ ಉಪ ವಿಭಾಗೀಯ ದಂಡಾಧಿಕಾರಿಗಳ ಕಚೇರಿಯಲ್ಲಿನ 1908ರಷ್ಟು ಹಿಂದಿನ ಕ್ಯಾನ್ವಾಸ್ ನಕಾಶೆಯ ಭಾಗಗಳನ್ನು ಹರಿದು ಹಾಕಲಾಗಿದ್ದು, ಇದರಲ್ಲಿ ಹಗರಣದ ರೂವಾರಿಗಳ ಕೈವಾಡವನ್ನು ಶಂಕಿಸಲಾಗಿದೆ.
ಅಸೋಲಾದಲ್ಲಿ ಒಂದು ಎಕರೆ ಭೂಮಿಗೆ 20 ಕೋ.ರೂ.ಗಳಷ್ಟು ಮಾರುಕಟ್ಟೆ ಬೆಲೆಯಿದೆ. ಆಂಗ್ಲ ದೈನಿಕದ ಬಳಿಯಿರುವ ಮೂರು ನಿವೇಶನಗಳ ಕ್ರಯಪತ್ರದ ಪ್ರತಿಗಳಂತೆ ಇವುಗಳನ್ನು ಪ್ರತಿ ಎಕರೆಗೆ ಒಂದು ಕೋ.ರೂ.ಗೂ ಕಡಿಮೆ ಬೆಲೆಗೆ ಮಾರಾಟ ಮಾಡಲಾಗಿದೆ.
ಭೂ ದಾಖಲೆಗಳನ್ನು ತಿರುಚಿರುವುದನ್ನು ದಿಲ್ಲಿ ಕಂದಾಯ ಸಚಿವ ಕೈಲಾಷ್ ಗಹ್ಲೋಟ್ ಅವರು ದೃಢಪಡಿಸಿದ್ದಾರೆ. ಕಂದಾಯ ಇಲಾಖಾ ಸಿಬ್ಬಂದಿಗಳ ಕೈವಾಡವಿದೆಯೇ ಎನ್ನುವುದನ್ನು ಪತ್ತೆ ಹಚ್ಚಲು ನಿರ್ದಿಷ್ಟ ಪ್ರಕರಣಗಳನ್ನು ಪರಿಶೀಲನೆಗೊಳಪಡಿಸಲಾಗಿದೆ. ಎಲ್ಲ ಗ್ರಾಮಸಭಾಗಳ ಭೂಮಿಯ ನಕಾಶೆಗಳನ್ನು ಸಿದ್ಧಗೊಳಿಸಲಾಗುತ್ತಿದೆ ಎಂದರು.
ಸರಕಾರದ ವಾರ್ಷಿಕ ಆಸ್ತಿಗಳ ಸರ್ವೆ ಸಂದರ್ಭ ಈ ಹಗರಣ ಬೆಳಕಿಗೆ ಬಂದಿದೆ.







