ಸಾಹಿತಿಗಳಿಂದ ‘ಮೊಸರಲ್ಲಿ ಕಲ್ಲು ಹುಡುಕುವ ಕೆಲಸ’: ಪೇಜಾವರ ಶ್ರೀ

ಉಡುಪಿ, ನ. 27: ಉಡುಪಿಯಲ್ಲಿ ನಡೆದ ಧರ್ಮಸಂಸದ್‌ನಲ್ಲಿ ನಾನು ನೀಡಿದ ಹೇಳಿಕೆ, ಸಾಹಿತಿಗಳಿಗೆ ಹಾಗೂ ಬುದ್ಧಿಜೀವಿಗಳಿಗೆ ಅರ್ಥವಾಗಿಲ್ಲವೊ ಅಥವಾ ಅವರು ‘ಮೊಸರಲ್ಲಿ ಕಲ್ಲು ಹುಡುಕುವ ಕೆಲಸ’ ಮಾಡುತಿದ್ದಾರೊ ಗೊತ್ತಿಲ್ಲ. ಪಾಪದ ದಲಿತರನ್ನು ಇವರು ಇದರಲ್ಲಿ ಎಳೆದು ತಂದಿದ್ದಾರೆ ಎಂದು ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಶ್ರೀ ಕೃಷ್ಣ ಮಠದಲ್ಲಿ ಸೋಮವಾರ ಸಂಜೆ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಧರ್ಮಸಂಸದ್‌ನಲ್ಲಿ ನಾನು ಮಾತನಾಡುವಾಗ ಸಂವಿಧಾನ ಬದಲಿಸಿ ಎಂದು ಹೇಳಿಲ್ಲ. ಅಂಬೇಡ್ಕರ್‌ಗೆ ಅಪಮಾನ ಮಾಡಿಲ್ಲ. ದಲಿತರ ಮೀಸಲಾತಿ ವಿರುದ್ಧವೂ ನಾನು ಮಾತನಾಡಿಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದರು.
ದೇಶದ ಸಂವಿಧಾನಕ್ಕೆ ಅವಮಾನ ಮಾಡವುದು ಕೇವಲ ಅಂಬೇಡ್ಕರ್‌ಗೆ ಮಾತ್ರ ಅವಮಾನ ಮಾಡಿದಂತಲ್ಲ. ಇಡೀ ರಾಷ್ಟ್ರಕ್ಕೆ ಅವಮಾನ ಮಾಡಿದಂತೆ ಎಂದು ನಾನು ತಿಳಿಸಿದ್ದೇನೆ. ಇಂಥ ಕೆಲಸವನ್ನು ನಾನು ಮಾಡಿಲ್ಲ ಎಂದರು.
ಭಾಷಣದ ವೇಳೆ ನಾನು ದೇಶದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರಿಗೆ ಸಿಗುವ ಎಲ್ಲಾ ಸೌಲಭ್ಯಗಳನ್ನು ಧಾರ್ಮಿಕ ಬಹುಸಂಖ್ಯಾತರಿಗೂ ನೀಡುವಂತೆ ಆಗ್ರಹ ಪಡಿಸಿದ್ದೆ. ಇಬ್ಬರಿಗೂ ಸಮಾನ ಸೌಲಭ್ಯ ನೀಡಿ, ಇದಕ್ಕಾಗಿ ಸಂವಿಧಾನದಲ್ಲಿ ತಿದ್ದುಪಡಿ ಮಾಡಿ ಎಂದು ಒತ್ತಾಯಿಸಿದ್ದೆ. ಇದರಲ್ಲಿ ದಲಿತರ ವಿರೋಧ ಎಲ್ಲಿ ಬಂತು ಎಂದು ಪ್ರಶ್ನಿಸಿದರು.
ದಲಿತರ ಮೀಸಲಾತಿಯನ್ನು ನಾನೆಲ್ಲೂ ವಿರೋಧಿಸಿಲ್ಲ. ಧಾರ್ಮಿಕ ಅಲ್ಪಸಂಖ್ಯಾತರಲ್ಲಿ ದಲಿತರು ಸೇರುವುದಿಲ್ಲ. ಮುಸ್ಲಿಮರು ಮತ್ತು ಕ್ರೈಸ್ತರು ಸೇರುತ್ತಾರೆ. ಅವರಿಗೆ ಸಹ ನೀಡುವ ಸವಲತ್ತು ನಿಲ್ಲಿಸಿ ಎಂದು ಹೇಳಿಲ್ಲ. ಅದನ್ನು ಉಳಿದ ಧಾರ್ಮಿಕ ಬಹುಸಂಖ್ಯಾತ ಹಿಂದೂಗಳಿಗೂ ವಿಸ್ತರಿಸಿ ಎಂದು ಮಾತ್ರ ಹೇಳಿದ್ದೆ ಎಂದರು.
ಇದರಿಂದ ಧಾರ್ಮಿಕ ಬಹುಸಂಖ್ಯಾತರಲ್ಲಿ ಸೇರುವ ದಲಿತರಿಗೂ, ಹಿಂದುಳಿದವರು ನಡೆಸುವ ಶಿಕ್ಷಣ ಸಂಸ್ಥೆಗಳಿಗೂ ಹೆಚ್ಚಿನ ಸವಲತ್ತುಗಳು ದೊರೆಯಲು ಸಾಧ್ಯವಾಗುತ್ತದೆ. ಅದರಂತೆ ಚರ್ಚು, ಮಸೀದಿಗಳಿಗೆ ಇರುವ ಸ್ವಾಯತ್ತತೆ ಮಠ, ಮಂದಿರಗಳಿಗೂ ದೊರೆಯುತ್ತದೆ. ಧರ್ಮದ ಹೆಸರಿನಲ್ಲಿ ಸಮಾಜವನ್ನು ಒಡೆಯುವುದು ಬೇಡ, ಎಲ್ಲರನ್ನು ಸಮಾನವಾಗಿ ನೋಡಿ ಎಂಬುದೇ ಇದರ ಸಂದೇಶ. ಇದರಿಂದ ಯಾರಿಗೂ ಅನ್ಯಾಯವಾಗುವುದಿಲ್ಲ. ಇದರಲ್ಲಿ ಆಕ್ಷೇಪಾರ್ಹ ಅಂಶಗಳೇನಿವೆ. ಇದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೇ ಕೆಲವರು ಪ್ರತಿಭಟನೆ ನಡೆಸುತ್ತಿರುವುದು ವಿಷಾಧಕರ ಎಂದು ಪೇಜಾವರ ಶ್ರೀ ಹೇಳಿದರು.
ದ್ವಾರಕನಾಥ್‌ಗೂ ಅರ್ಥವಾಗಿಲ್ಲ: ಸಂವಿಧಾನವನ್ನು ಅಂಬೇಡ್ಕರ್ ಒಬ್ಬರೇ ಮಾಡಿದ್ದಲ್ಲ. ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್, ಕೆ.ಎಂ.ಮುನ್ಶಿ, ಬೆನಗಲ್ ಮುಂತಾದ ಅನೇಕರು ಸದಸ್ಯರಾಗಿ ಅಂಬೇಡ್ಕರ್ ಅಧ್ಯಕ್ಷರಾಗಿದ್ದ ಸಮಿತಿ ಕರಡು ಪ್ರತಿ ಸಿದ್ಧಪಡಿಸಿದೆ. ಬಾಬು ರಾಜೇಂದ್ರ ಪ್ರಸಾದ್ ಅಧ್ಯಕ್ಷತೆಯ ರಾಷ್ಟ್ರದ 500ಕ್ಕಿಂತ ಹೆಚ್ಚು ಪ್ರತಿನಿಧಿಗಳಿದ್ದ ಸಂಘಟನಾ ಸಮಿತಿ ಸಂವಿಧಾನವನ್ನು ಅಂಗೀಕರಿಸಿದೆ. ಇದನ್ನು ಅಪಮಾನಿಸಿದರೆ ಅಂಬೇಡ್ಕರ್‌ರನ್ನು ಮಾತ್ರವಲ್ಲ, ರಾಷ್ಟ್ರವನ್ನು ಅವಮಾನಿಸಿದಂತೆ. ಇಂತಹ ಕಾರ್ಯಕ್ಕೆ ನಾನು ಇಳಿಯಲಾರೆ. ಆದರೆ ದ್ವಾರಕನಾಥ್‌ರಂಥ ದೊಡ್ಡ ವಕೀಲರಿಗೂ ಇದು ಅರ್ಥವಾಗಿಲ್ಲ ಎಂಬುದೇ ವಿಪರ್ಯಾಸ ಎಂದರು.
ಮೈಸೂರು ಸಾಹಿತ್ಯ ಸಮ್ಮೇಳನದಲ್ಲೂ ನಿಮ್ಮ ವಿರುದ್ಧ ಪ್ರತಿಭಟನೆ ನಡೆಯಿತಲ್ಲಾ ಎಂದು ಪ್ರಶ್ನಿಸಿದಾಗ, ಒಂದೂ ಅವರಿಗೆ ಅದು ಅರ್ಥವಾಗಿಲ್ಲ. ಇಲ್ಲಾ ಉಡುಪಿಯ ಧರ್ಮಸಂಸದ್ ಯಶಸ್ವಿಯಾಗಿದ್ದನ್ನು ಸಹಿಸಲಾಗದೇ ಸಾಹಿತಿಗಳು ಹಾಗೂ ಬುದ್ಧಿಜೀವಿಗಳು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡಿದ್ದಾರೆ. ಇದಕ್ಕಾಗಿ ದಲಿತರನ್ನು ಎಳೆದುತಂದಿದ್ದಾರೆ ಎಂದರು.
ಪೀಠಾರೋಹಣದ 80ನೇ ವರ್ಷ: ತಾನು ಸನ್ಯಾಸ ಸ್ವೀಕಾರ ಮಾಡಿ ನಾಳೆಗೆ 80ನೆ ವರ್ಷ ಪೂರ್ಣಗೊಳ್ಳಲಿದ್ದು, ಈ ಸಂಬಂಧ 28 ಮತ್ತು 29ರಂದು ವಿಶೇಷ ಕಾರ್ಯಕ್ರಮಗಳು ನಡೆಯಲಿವೆ.
ನ. 28ರಂದು ರಾಜಾಂಗಣದಲ್ಲಿ ಸಾಮೂಹಿಕ ವಿಷ್ಣು ಸಹಸ್ರನಾಮ ಪಾರಾಯಣ, ಶ್ರೀವಿಷ್ಣು ಯಾಗ ನಡೆಯಲಿದೆ. 29ರಂದು ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ಇದ್ದು, ಸಂಜೆ ಸಭಾ ಕಾರ್ಯಕ್ರಮದಲ್ಲಿ ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥ ಶೆಟ್ಟಿ, ಸಚಿವ ಪ್ರಮೋದ್ ಮಧ್ವರಾಜ್ ಹಾಗೂ ಜಿ.ಶಂಕರ ಭಾಗವಹಿಸುವರು ಎಂದರು.
ಬಸವಣ್ಣ ಗೋಹತ್ಯೆ ವಿರೋಧಿ !
ತಾನು ಬಸವಣ್ಣನ ಅನುಯಾಯಿ ಎಂದು ಕರೆದುಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೋಹತ್ಯೆಯನ್ನು ನಿಷೇಧಿಸಲಿ. ಏಕೆಂದರೆ ಬಸವಣ್ಣ ಗೋಹತ್ಯೆಯ ವಿರೋಧಿಯಾಗಿದ್ದು, ಅವರ ಹಲವು ವಚನಗಳಲ್ಲಿ ಇದನ್ನು ಸ್ಪಷ್ಟವಾಗಿ ಗುರುತಿಸಬಹುದು ಎಂದರು. ರಾಜ್ಯದಲ್ಲಿ ಮುಸ್ಲಿಂರಿಗೆ ನೀಡುವ ಶಾದಿ ಭಾಗ್ಯವನ್ನು ದಲಿತರಿಗೆ ಯಾಕೆ ನೀಡುತ್ತಿಲ್ಲ. ದಲಿತರಲ್ಲೂ ಬಡವರು ಇಲ್ವಾ ಎಂದು ಪೇಜಾವರ ಶ್ರೀ ಪ್ರಶ್ನಿಸಿದರು.
ಚಂಪಾ ಜೊತೆ ಒಳ್ಳೆಯ ಬಾಂಧವ್ಯನಿಮ್ಮ ಬಗ್ಗೆ ಉತ್ತಮ ಅಭಿಪ್ರಾಯವಿದೆ ಎಂದು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ, ಸಾಹಿತಿ ಚಂಪಾ ಹೇಳಿರುವ ಬಗ್ಗೆ ಅವರ ಗಮನ ಸೆಳೆದಾಗ, ಹೌದು ಚಂಪಾ ಮತ್ತು ನನಗೆ ಉತ್ತಮ ಬಾಂಧವ್ಯವಿದೆ. ಆದರೆ ಇಬ್ಬರ ನಡುವೆ ಅಭಿಪ್ರಾಯ ಬೇಧಗಳಿವೆ. ಅವು ರಿಪೇರಿಯಾಗಲ್ಲ. ಅಭಿಪ್ರಾಯಗಳು ಬದಲಾಗಲ್ಲ ಎಂದು ನಕ್ಕರು.







