'ಕೆ2 ಕೆರಿಯರ್ ಉತ್ಸವ'ಕ್ಕೆ ಅದ್ದೂರಿ ತೆರೆ
ಬೆಂಗಳೂರು, ನ.27: ನಗರದ ನಿಮ್ಹಾನ್ಸ್ ಕನ್ವೆನ್ಷನ್ ಹಾಲ್‌ನಲ್ಲಿ ಕೆ2 ಲರ್ನಿಂಗ್ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಕೆರಿಯರ್ ಉತ್ಸವ ಇಂದು ಅದ್ದೂರಿ ತೆರೆ ಕಂಡಿತು.
ಶೈಕ್ಷಣಿಕ ಕ್ಷೇತ್ರದ ಎಲ್ಲಾ ವಿಭಾಗಗಳ ಸಂಸ್ಥೆಗಳು ಪಾಲ್ಗೊಂಡಿದ್ದ ಈ ಶೈಕ್ಷಣಿಕ ಉತ್ಸವದಲ್ಲಿ ನಗರದ ಹೆಸರಾಂತ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು, ಪೋಷಕರು, ಉಪನ್ಯಾಸಕರು ಸೇರಿದಂತೆ ಶೈಕ್ಷಣಿಕ ಕ್ಷೇತ್ರಕ್ಕೆ ಸಂಬಂಧಿಸಿದ ದಿಗ್ಗಜರು ಅತ್ಯಂತ ಉತ್ಸಾಹದಿಂದ ಭಾಗವಹಿಸಿದ್ದರು.
ಉತ್ಸವದಲ್ಲಿ ಆಯೋಜಿಸಿದ್ದ ಹಲವಾರು ಕಾರ್ಯಾಗಾರ ಮತ್ತು ವಿಚಾರ ಸಂಕಿರಣಗಳಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡು ತಮ್ಮ ಭವಿಷ್ಯದ ವೃತ್ತಿ ಜೀವನಕ್ಕೆ ಸಂಬಂಧಿಸಿದ ವಿಚಾರಗಳನ್ನು ತಿಳಿದುಕೊಂಡರು. ಇಲ್ಲಿ ದೇಶದ 500ಕ್ಕೂ ಹೆಚ್ಚು ಶೈಕ್ಷಣಿಕ ಸಂಸ್ಥೆಗಳು, ಅತ್ಯುನ್ನತ ಕಾಲೇಜುಗಳು ಭಾಗವಹಿಸಿ ಕೆರಿಯರ್ ಉತ್ಸವಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದವು.
ಹಲವಾರು ಉದ್ದಿಮೆಗಳ ಪರಿಣಿತರು ಮತ್ತು ವೃತ್ತಿ ಸಂಬಂಧಿತ ಸಮಾಲೋಚಕರು, ಕುತೂಹಲ ಭರಿತ ವಿದ್ಯಾರ್ಥಿ ಸಮೂಹ ಮತ್ತು ತಮ್ಮ ಮಕ್ಕಳ ಭಷ್ಯದ ಬಗ್ಗೆ ಚಿಂತಿಸುತ್ತಿರುವ ಪೋಷಕ ಸಮುದಾಯದ ಪ್ರಶ್ನೆಗಳಿಗೆ ಸೂಕ್ತ ಉತ್ತರ ನೀಡಿದರಲ್ಲದೇ, ಈ ಮೂಲಕ ಅವರಲ್ಲಿದ್ದ ಹಲವಾರು ಗೊಂದಲಪೂರಿತ ಅಂಶಗಳಿಗೆ ಪರಿಹಾರಗಳನ್ನೂ ಸೂಚಿಸಿದರು. ಅದೇ ರೀತಿ ಮಕ್ಕಳ ಭವಿಷ್ಯದ ವೃತ್ತಿ ಬದುಕಿನ ಬಗ್ಗೆ ಇದ್ದ ಅಸ್ಪಷ್ಟತೆಯನ್ನು ತೊಡೆದುಹಾಕಿ ಸ್ಪಷ್ಟ ಮಾರ್ಗವನ್ನು ಸೂಚಿಸಿದರು.
ಈ ವೇಳೆ ಮಾತನಾಡಿದ ಚೇತನ್ ಭಗತ್, ನೀವು ನಿಮ್ಮ ಹೃದಯ ಮತ್ತು ಭಾವನೆಗಳಿಗೆ ಪೂರಕವಾಗಿ ಮುಂದಿನ ಹೆಜ್ಜೆ ಇಡಿ. ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವ ನಿಟ್ಟಿನಲ್ಲಿ ನೀವೆ ನಿರ್ಧಾರ ಕೈಗೊಳ್ಳಿ. ಉತ್ತಮವಾದ ಶಿಕ್ಷಣ ಮುಂದಿನ ಜೀವನಕ್ಕೆ ದಾರಿದೀಪವಾಗುತ್ತದೆ ಎಂದು ಹೇಳಿದರು.
ಕೆರಿಯರ್ ಉತ್ಸವ ವಿದ್ಯಾರ್ಥಿಗಳು ಭವಿಷ್ಯದ ವೃತ್ತಿ ಜೀವನದ ಬಗ್ಗೆ ಹತ್ತು ಹಲವಾರು ಮಾಹಿತಿಗಳನ್ನು ಪಡೆಯುತ್ತಾರೆ. ಅಲ್ಲದೆ, ದೇಶ ವಿದೇಶಗಳ ಸಂಪೂರ್ಣ ಮಾಹಿತಿಯೂ ಇಲ್ಲಿ ದೊರೆಯುತ್ತದೆ. ಜೊತೆಗೆ, ವಿದ್ಯಾರ್ಥಿಗಳು ತಮಗಿಷ್ಟವಾದ ಕ್ಷೇತ್ರದ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಲು ಇದೊಂದು ಸದಾವಕಾಶವಾಗಿದೆ ಎಂದು ತಿಳಿಸಿದರು.
ಸಂಸ್ಥೆಯ ಸಂಸ್ಥಾಪಕ ಶ್ರೀಪಾಲ್ ಜೈನ್ ಮಾತನಾಡಿ, ಕೆರಿಯರ್ ಉತ್ಸವದ 5ನೆ ಸರಣಿ ಇದಾಗಿದ್ದು, 100ಕ್ಕೂ ಹೆಚ್ಚು ವೃತ್ತಿಗಳ ಆಯ್ಕೆಯನ್ನು ವಿದ್ಯಾರ್ಥಿಗಳಿಗೆ ನೀಡಲಾಗಿದೆ. ಅದರಲ್ಲಿ ತಮಗಿಷ್ಟವಾದ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುವ ಸೂಕ್ತ ವೇದಿಕೆಯನ್ನು ಒದಗಿಸಿದ್ದೇವೆ. ವಿದ್ಯಾರ್ಥಿಗಳಿಗೆ ಅತ್ಯುತ್ತಮವಾದ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡುವ ಮೂಲಕ ಅವರು ಸಮಾಜದಲ್ಲಿ ಅತ್ಯುತ್ತಮವಾದ ಜೀವನ ನಡೆಸಲು ಸಹಕಾರಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಸೂಕ್ತ ಮಾರ್ಗದರ್ಶನವಿಲ್ಲದೆ ಅನ್ಯ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುವುದನ್ನು ತಪ್ಪಿಸುವುದು, ಪೋಷಕರ ತಪ್ಪುನಿರ್ಧಾರದಿಂದ ಮಕ್ಕಳಿಗೆ ಇಷ್ಟವಿಲ್ಲದ ವೃತ್ತಿಗೆ ತಳ್ಳುವುದನ್ನು ತಪ್ಪಿಸುವ ಉದ್ದೇಶದಿಂದ ಈ ಕೆರಿಯರ್ ಉತ್ಸವವನ್ನು ಆಯೋಜಿಸಿದ್ದು, ಬಹುತೇಕ ಯಶಸ್ವಿಯಾಗಿದೆ ಎಂದರು.







