ಚಂಪಾ ರಾಜ್ಯದ ಜನತೆಯಲ್ಲಿ ಕ್ಷಮೆ ಕೇಳಬೇಕು: ಶೋಭಾ ಕರಂದ್ಲಾಜೆ

ಬೆಂಗಳೂರು, ನ.26: ಮೈಸೂರಿನಲ್ಲಿ ನಡೆದ ಕನ್ನಡ ಸಮ್ಮೇಳನದಲ್ಲಿ ಸಾಹಿತಿ ಚಂದ್ರಶೇಖರ್ ಪಾಟೀಲ್ ಅವರು ಕೇಂದ್ರ ಸರಕಾರವನ್ನು ಸುಖಾಸುಮ್ಮನೆ ಟೀಕಿಸಿದ್ದಾರೆ. ಹೀಗಾಗಿ, ಈ ಕೂಡಲೇ ರಾಜ್ಯದ ಜನತೆಯಲ್ಲಿ ಕ್ಷಮೆ ಕೇಳಬೇಕೆಂದು ಸಂಸದೆ ಶೋಭಾ ಕರಂದ್ಲಾಜೆ ಒತ್ತಾಯಿಸಿದ್ದಾರೆ.
ಸೋಮವಾರ ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮೂರು ದಿನಗಳ ಸಾಹಿತ್ಯ ಸಮ್ಮೇಳನದಲ್ಲಿ ಕೆಲವು ಢೊಂಗಿ ಜಾತ್ಯತೀತ ವಾದಿಗಳು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರಕಾರವನ್ನು ಟೀಕಿಸಲು ವೇದಿಕೆಯನ್ನು ದುರ್ಬಳಕೆ ಮಾಡಿಕೊಂಡರು. ಸರಕಾರ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಉದ್ದೇಶಪೂರ್ವಕವಾಗಿಯೂ ಎಡಪಂಥೀಯ ವಿಚಾರಧಾರೆಗಳನ್ನು ಪ್ರಚುರಪಡಿಸಲು ಅವಕಾಶ ನೀಡುವ ಮೂಲಕ ರಾಜ್ಯದ ಜನತೆಗೆ ತಪ್ಪುಸಂದೇಶ ನೀಡಲಾಗಿದೆ. ಇದಕ್ಕೆಲ್ಲಾ ಸಮ್ಮೇಳನಾಧ್ಯಕ್ಷರೇ ನೇರ ಕಾರಣರಾಗಿರುವುದರಿಂದ ಕೂಡಲೇ ಚಂಪಾ ಅವರು ಕ್ಷಮೆ ಕೇಳಬೇಕೆಂದು ಆಗ್ರಹಿಸಿದರು.
ಬಿಜೆಪಿ ಮುಖಂಡ ಯೋಗೀಶ್‌ಗೌಡ ಕೊಲೆ ಪ್ರಕರಣದಲ್ಲಿ ಸಚಿವ ವಿನಯ್ ಕುಲಕರ್ಣಿ, ಡಿವೈಎಸ್ಪಿ ಗಣಪತಿ ಸಾವಿನ ಪ್ರಕರಣದ ಲ್ಲಿ ಕೆ.ಜೆ.ಜಾರ್ಜ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಕೆ.ಜೆ.ಜಾರ್ಜ್ ಅವರು ಗಣಪತಿ ಕುಟುಂಬದವರ ಮೇಲೆ ಯಾವುದೇ ಸಾಕ್ಷಿ ಹೇಳದಂತೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಆಪಾದಿಸಿದರು.
ಯೋಗೀಶ್‌ಗೌಡ ಕೊಲೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿ ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಅವರ ರಕ್ಷಣೆಗೆ ನಿಲ್ಲುವವರ ವಿರುದ್ಧವೂ ಸೂಕ್ತ ಕೈಗೊಳ್ಳಬೇಕೆಂದರು.







