ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಯಾಗಲು ಹಲವರಲ್ಲಿ ಪೈಪೋಟಿ!
ಬೆಂಗಳೂರು, ನ.27: ರಾಜ್ಯ ಸರಕಾರದ ಮುಖ್ಯಕಾರ್ಯದರ್ಶಿ ಸುಭಾಷ್‌ಚಂದ್ರ ಕುಂಟಿಯಾ ನ.30ರಂದು ಸೇವೆಯಿಂದ ನಿವೃತ್ತರಾಗಲಿದ್ದು, ಅವರ ಸ್ಥಾನಕ್ಕೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಕೆ.ರತ್ನಪ್ರಭಾ, ಕೇಂದ್ರ ಸೇವೆಯಲ್ಲಿರುವ ರಾಜ್ಯದ ಐಎಎಸ್ ಅಧಿಕಾರಿ ಎಸ್.ಕೆ.ಪಟ್ನಾಯಕ್, ಅಭಿವೃದ್ಧಿ ಆಯುಕ್ತ ಬಿ.ಎಂ.ವಿಜಯಭಾಸ್ಕರ್ ನಡುವೆ ತೀವ್ರ ಪೈಪೋಟಿ ಎದುರಾಗಿದೆ.
ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ನೂತನ ಮುಖ್ಯ ಕಾರ್ಯದರ್ಶಿ ನೇಮಕ ಮಾಡುವ ಅಧಿಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ನೀಡಲಾಗಿತ್ತು. ಸೇವಾ ಹಿರಿತನದ ಆಧಾರದಲ್ಲಿ ಮುಂಚೂಣಿಯಲ್ಲಿರುವ ಕೆ.ರತ್ನಪ್ರಭಾ ಅವರನ್ನೆ ಮುಖ್ಯ ಕಾರ್ಯದರ್ಶಿ ಹುದ್ದೆಗೆ ನೇಮಕ ಮಾಡಲು ಸಿದ್ದರಾಮಯ್ಯ ಚಿಂತನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ರಾಜ್ಯ ಪೊಲೀಸ್ ಮಹಾನಿರ್ದೇಶಕರ ಹುದ್ದೆಗೆ ಆಯ್ಕೆ ಮಾಡುವ ಸಂದರ್ಭದಲ್ಲಿ ಸೇವಾ ಹಿರಿತನವನ್ನು ಪರಿಗಣಿಸಿದ್ದ ಮುಖ್ಯಮಂತ್ರಿ, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಹುದ್ದೆಗೆ ನಡೆಯಲಿರುವ ಆಯ್ಕೆಯಲ್ಲಿಯೂ ಇದೇ ಮಾನದಂಡವನ್ನು ಅನುಸರಿಸಲಿದ್ದಾರೆ ಎನ್ನಲಾಗಿದೆ.
ಅರವಿಂದಜಾಧವ್ ಮುಖ್ಯಕಾರ್ಯದರ್ಶಿ ಹುದ್ದೆಯಿಂದ ನಿವೃತ್ತರಾದ ಸಂದರ್ಭದಲ್ಲಿಯೂ ಅವರ ಸ್ಥಾನಕ್ಕೆ ರತ್ನಪ್ರಭಾ ಹೆಸರು ಪ್ರಬಲವಾಗಿ ಚಾಲ್ತಿಯಲ್ಲಿತ್ತು. ಅಲ್ಲದೆ, ದಲಿತ ಸಮುದಾಯದ ಹಲವಾರು ಶಾಸಕರು ರತ್ನಪ್ರಭಾ ಪರವಾಗಿ ಮುಖ್ಯಮಂತ್ರಿ ಬಳಿ ಲಾಬಿ ನಡೆಸಿದ್ದರು ಎಂದು ಹೇಳಲಾಗುತ್ತದೆ. ಆದರೆ, ಕೇಂದ್ರ ಸೇವೆಯಲ್ಲಿದ್ದ ಸುಭಾಷ್‌ಚಂದ್ರ ಕುಂಟಿಯಾರನ್ನು ಸಿದ್ದರಾಮಯ್ಯ ಆಯ್ಕೆಮಾಡಿದ್ದರು.
ಚುನಾವಣಾ ಹೊಸ್ತಿನಲ್ಲಿರುವಾಗ ದಲಿತ ಸಮುದಾಯದ ರತ್ನಪ್ರಭಾ ಅವರನ್ನು ಕಡೆಗಣಿಸಿ, ಬೇರೆಯವರಿಗೆ ಮಣೆ ಹಾಕುವುದು ಬೇಡ ಎಂದು ಹಿರಿಯ ಸಚಿವರು ಮುಖ್ಯಮಂತ್ರಿಗೆ ಸಲಹೆ ನೀಡಿದ್ದಾರೆ. ಅಲ್ಲದೆ, 2018ರ ಮಾರ್ಚ್‌ನಲ್ಲಿ ನಿವೃತ್ತರಾಗಲಿರುವ ರತ್ನಪ್ರಭಾಗೆ ಸೇವಾ ಹಿರಿತನದ ಆಧಾರದಲ್ಲಿ ಮುಖ್ಯಕಾರ್ಯದರ್ಶಿ ಹುದ್ದೆ ನೀಡುವುದು ಸೂಕ್ತ ಎಂಬ ಅಭಿಪ್ರಾಯವು ಹಿರಿಯ ಸಚಿವರಿಂದ ಬಂದಿದೆ ಎಂದು ಹೇಳಲಾಗಿದೆ.
ಮುಖ್ಯಕಾರ್ಯದರ್ಶಿ ಹುದ್ದೆಯ ಆಕಾಂಕ್ಷಿಗಳಾಗಿರುವ ಎಸ್.ಕೆ.ಪಟ್ನಾಯಕ್ ಹಾಗೂ ಬಿ.ಎಂ.ವಿಜಯಭಾಸ್ಕರ್ ಪರವಾಗಿಯೂ ಕೆಲ ಸಚಿವರು ಮುಖ್ಯಮಂತ್ರಿ ಬಳಿ ಲಾಬಿ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಸೇವಾಹಿರಿತನದಲ್ಲಿ ರತ್ನಪ್ರಭಾ ನಂತರ ಪಟ್ನಾಯಕ್ ಇದ್ದು, ಅವರ ನಂತರ ವಿಜಯಭಾಸ್ಕರ್ ಇದ್ದಾರೆ.
ರಾಜ್ಯದ ಮುಖ್ಯಕಾರ್ಯದರ್ಶಿಯಾಗಿ ರತ್ನಪ್ರಭಾ ನೇಮಕವಾದಲ್ಲಿ ರಾಜ್ಯದ ಎರಡು ಪ್ರಮುಖ ಅಧಿಕಾರ ಸ್ಥಾನದಲ್ಲಿ ಮಹಿಳೆಯರು ಇದ್ದಂತಾಗುತ್ತದೆ. ಈಗಾಗಲೇ ರಾಜ್ಯ ಪೊಲೀಸ್ ಮಹಾನಿರ್ದೇಶಕಿಯಾಗಿ ನೀಲಮಣಿರಾಜು ಕರ್ತವ್ಯ ನಿರ್ವಹಿಸುತ್ತಿದ್ದಾರೆ.







