ನ.30ರಿಂದ ಡಿ.2ರವರೆಗೆ ರಾಜ್ಯಮಟ್ಟದ ಯುವಜನೋತ್ಸವ
ಉಡುಪಿ, ನ.27: ಉಡುಪಿ ಜಿಲ್ಲಾಡಳಿತ, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಹಾಗೂ ಜಿಲ್ಲಾ ಯುವ ಸಂಘಗಳ ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ 2017-18ನೆ ಸಾಲಿನ ರಾಜ್ಯಮಟ್ಟದ ಯುವಜನೋತ್ಸವವನ್ನು ನ.30, ಡಿ.1 ಮತ್ತು 2ರಂದು ಅಜ್ಜರಕಾಡು ಒಳಾಂಗಣ ಕ್ರೀಡಾಂಗಣದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮದಲ್ಲಿ 15ವರ್ಷದಿಂದ 29ವರ್ಷದವರೆಗಿನ ಯುವಕ/ಯುವತಿಯರಿಗೆ ಜನಪದ ನೃತ್ಯ, ಜನಪದ ಹಾಡು, ಏಕಾಂಕ ನಾಟಕ, ಆಶು ಭಾಷಣ, ಶಾಸ್ತ್ರೀಯ ನೃತ್ಯ, ಶಾಸ್ತ್ರೀಯ ಗಾಯನ, ಶಾಸ್ತ್ರೀಯ ವಾದನ, ಹಾರ್ಮೋನಿಯಂ, ಗಿಟಾರ್ ವಾದನ ಸ್ಪರ್ಧೆಗಳು ನಡೆಯಲಿವೆ. ರಾಜ್ಯದ 30 ಜಿಲ್ಲೆಗಳ ಸುಮಾರು 1500ಕ್ಕೂ ಸ್ಪರ್ಧಾಳುಗಳು ಹಾಗೂ ತಂಡದ ವ್ಯವಸ್ಥಾಪಕರು ಇದರಲ್ಲಿ ಭಾಗವಹಿಸಲಿರುವರು ಎಂದು ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ನ.30ರಂದು ಸಂಜೆ 6ಗಂಟೆಗೆ ಕಾರ್ಯಕ್ರಮವನ್ನು ಸಚಿವ ಪ್ರಮೋದ್ ಮಧ್ವರಾಜ್ ಉದ್ಘಾಟಿಸಲಿದ್ದು, ಇದಕ್ಕೂ ಮುನ್ನಾ ಸಂಜೆ 5ಗಂಟೆಗೆ ಬೆಂಗಳೂರಿನ ಆನಂದ ವಿಕ್ರಮ ನೇತೃತ್ವದ ಶೈಲೂಶಂ ತಂಡದಿಂದ ನೃತ್ಯ ದರ್ಪಣ ಕಾರ್ಯಕ್ರಮ ನಡೆಯಲಿದೆ. ಉದ್ಘಾಟನಾ ಸಮಾರಂಭದ ಬಳಿಕ ಸಾಯಿದೀಪ ಕಲಾತಂಡ ಶಿವಮೊಗ್ಗ ಇವರಿಂದ ಸುಗಮ ಸಂಗೀತ ಕಾರ್ಯಕ್ರಮ ಜರಗಲಿದೆ. ಡಿ.2ರಂದು ಅಪರಾಹ್ನ 12ಗಂಟೆಗೆ ಸ್ಪರ್ಧೆಯ ಸಮಾರೋಪ ಸಮಾರಂಭ ನಡೆಯಲಿದೆ. ಸ್ಪರ್ಧೆಗಳಲ್ಲಿ ರಾಜ್ಯದ ವಿವಿಧ ಕಲಾಕ್ಷೇತ್ರದ ಅನುಭವಿ ತೀರ್ಪುಗಾರರನ್ನು ನಿಯೋಜಿಸಲಾಗಿದೆ.
ನ.30ರ ಅಪರಾಹ್ನ 2ಗಂಟೆಯಿಂದ ವಿವಿಧ ಸ್ಪರ್ಧೆಗಳು ನಡೆಯಲಿದ್ದು, ಜಿಲ್ಲಾ ಮಟ್ಟದ ಯುವಜನೋತ್ಸವ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದ ಸ್ಪರ್ಧಿ ಗಳು ಮಾತ್ರ ರಾಜ್ಯಮಟ್ಟದ ಸ್ಪರ್ಧೆಗೆ ಅರ್ಹರಾಗಿರುತ್ತಾರೆ. ರಾಜ್ಯಮಟ್ಟದ ಸ್ಪರ್ಧೆ ಯಲ್ಲಿ ವಿಜೇತ ಸ್ಪರ್ಧಿಗಳಿಗೆ ನಗದು ಬಹುಮಾನ, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆ ನೀಡಲಾಗುವುದು. ಇದರಲ್ಲಿ ಪ್ರಥಮ ಸ್ಥಾನ ಪಡೆದ ಸ್ಪರ್ಧಾಳುಗಳು ರಾಷ್ಟ್ರ ಮಟ್ಟದ ಯುವಜನೋತ್ಸವ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ.
ಸುದ್ದಿಗೋಷ್ಠಿಯಲ್ಲಿ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ, ಕೆಡಿಪಿ ಸದಸ್ಯ ಉಮೇಶ್ ನಾಯ್ಕಿ ಉಪಸ್ಥಿತರಿದ್ದರು.







