ಪೌರ ಕಾರ್ಮಿಕರನ್ನು ರಕ್ಷಿಸಿದ ಕಾಂಗ್ರೆಸ್: ಕೆ.ಜೆ.ಜಾರ್ಜ್
ಕನ್ನಡ ರಾಜ್ಯೋತ್ಸವ

ಬೆಂಗಳೂರು, ನ.27: ಕಸ ವಿಲೇವಾರಿ ಗುತ್ತಿಗೆ ಮಾಫಿಯಾದಿಂದ ಬಿಬಿಎಂಪಿಯ ಪೌರ ಕಾರ್ಮಿಕರನ್ನು ರಕ್ಷಣೆ ಮಾಡಿದ್ದು ಕಾಂಗ್ರೆಸ್ ಸರಕಾರ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.
ಸೋಮವಾರ ನಗರದ ಬಿಬಿಎಂಪಿ ಪ್ರಧಾನ ಕಚೇರಿಯ ಗಾಜಿನ ಮನೆಯಲ್ಲಿ ಪೌರ ಕಾರ್ಮಿಕರ ಮಹಾಸಂಘ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ಹಿಂದೆ ಕೆಲ ಗುತ್ತಿಗೆದಾರರು ಪೌರಕಾರ್ಮಿಕರನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡು ಸರಿಯಾದ ವೇತನ ನೀಡುತ್ತಿರಲಿಲ್ಲ. ಬಳಿಕ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನ ಮಾಡುತ್ತಿದೆ ಎಂದು ನುಡಿದರು.
ಪೌರ ಕಾರ್ಮಿಕರ ಗುತ್ತಿಗೆ ಪದ್ಧತಿಯನ್ನು ತೆಗೆದು ಎಲ್ಲರಿಗೂ ಪಾಲಿಕೆಯಿಂದಲೇ ನೇರ ವೇತನ ನೀಡಲಾಗುತ್ತದೆ. ಕನಿಷ್ಟ ವೇತನ 17 ಸಾವಿರ ನೀಡಲಾಗುತ್ತಿದೆ. ಇದಕ್ಕೆ ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಕಾರಣ ಎಂದು ನುಡಿದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ 25 ಸಾವಿರ ಪೌರಕಾರ್ಮಿಕರಲ್ಲಿ ಶೇ.40ರಷ್ಟು ಪೌರಕಾರ್ಮಿಕರು ಬಯೋಮೆಟ್ರಿಕ್ ಪದ್ಧತಿಯನ್ನು ಅನುಸರಿಸುತ್ತಿದ್ದಾರೆ. ಉಳಿದ ಶೇ.60ರಷ್ಟು ಕಾರ್ಮಿಕರು ಅನುಸರಿಸುತ್ತಿಲ್ಲ. ಎಲ್ಲರೂ ಬಯೋಮೆಟ್ರಿಕ್ ವ್ಯಾಪ್ತಿಗೆ ಒಳಪಡಬೇಕು ಎಂದು ಸೂಚನೆ ನೀಡಿದರು.
ಗೃಹ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ರಾಜ್ಯದಲ್ಲಿ ನೆಲೆಸಿರುವ ಅನ್ಯ ಭಾಷಿಕರು ಕಡ್ಡಾಯವಾಗಿ ಕನ್ನಡ ಓದಲು, ಬರೆಯಲು ಕಲಿಯಬೇಕು. ವಿವಿಧ ಕೆಲಸ ಹಾಗೂ ಹಲವಾರು ಕಾರಣಗಳಿಂದ ವಿವಿಧ ರಾಜ್ಯಗಳಿಂದ ಹಲವಾರು ಜನರು ಬಂದು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರ ಮಾತೃ ಭಾಷೆ ಯಾವುದೇ ಇರಲಿ ಮೊದಲು ಕನ್ನಡ ಭಾಷೆಯನ್ನು ಕಲಿಯಬೇಕು ಎಂದು ಸಲಹೆ ಮಾಡಿದರು.
ಕಾರ್ಯಕ್ರಮದಲ್ಲಿ ಮೇಯರ್ ಸಂಪತ್‌ರಾಜ್, ಉಪಮೇಯರ್ ಪದ್ಮಾವತಿ ನರಸಿಂಹಮೂರ್ತಿ, ಆಯುಕ್ತ ಮಂಜುನಾಥ್ ಪ್ರಸಾದ್, ಸಂಘದ ಅಧ್ಯಕ್ಷ ನಾರಾಯಣ್ ಸೇರಿ ಪ್ರಮುಖರು ಹಾಜರಿದ್ದರು.







