ಕೃಷ್ಣ ಮಠದಲ್ಲಿ ಜೈವಿಕ ತ್ಯಾಜ್ಯ ಸಂಸ್ಕರಣಾ ಘಟಕ ಉದ್ಘಾಟನೆ

ಉಡುಪಿ, ನ.27: ಶ್ರೀಕೃಷ್ಣ ಮಠದಲ್ಲಿ ಜೈವಿಕ ಸಂಸ್ಕರಣಾ ಘಟಕವನ್ನು ಪರ್ಯಾಯ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರು ಇಂದು ಉದ್ಘಾಟಿಸಿದರು.
ಪೇಜಾವರ ಕಿರಿಯ ಯತಿ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಘಟಕದ ಇಂಜಿನಿಯರ್ ವಸಿಷ್ಠ ಮಾಯಾಂಕ್, ಮಠದ ದಿವಾನರಾದ ರಘುರಾಮ ಆಚಾರ್, ಶ್ರೀರವಿಶಂಕರ್ ವಿದ್ಯಾ ಮಂದಿರ್ ಟ್ರಸ್ಟ್‌ನ ಆಡಳಿತಾಧಿಕಾರಿ ಪ್ರಶಾಂತ್ ವಿ.ಕುಮಾರ್ ಹಾಗೂ ಮಠದ ಸಾರ್ವಜನಿಕ ಸಂಪರ್ಕಾಧಿಕಾರಿ ರಾಮಚಂದ್ರ ಉಪಾಧ್ಯಾಯ ಉಪಸ್ಥಿತರಿದ್ದರು.
ಸ್ವಚ್ಛ ಭಾರತ ಯೋಜನೆಯ ಭಾಗವಾಗಿ ಉಡುಪಿ ಜಿಲ್ಲೆಯನ್ನು ತ್ಯಾಜ್ಯ ಮುಕ್ತ ಗೊಳಿಸುವ ಬಗ್ಗೆ ಜಿಲ್ಲಾಡಳಿತ ಮಹತ್ವದ ಹೆಜ್ಜೆಯಿಟ್ಟಿರುವ ಹಿನ್ನಲೆಯಲ್ಲಿ ನಾಡಿನ ಪ್ರಸಿದ್ಧ ಯಾತ್ರಾ ಕೇಂದ್ರವಾದ ಉಡುಪಿ ಶ್ರೀಕೃಷ್ಣ ಮಠದಲ್ಲಿ ಜೈವಿಕ ತಾಜ್ಯ ನಿರ್ವಹಣಾ ಘಟಕವನ್ನು ಅಳವಡಿಸುವ ಮೂಲಕ ಮಹತ್ವದ ಅಭಿಯಾನಕ್ಕೆ ಸ್ಪಂದನೆ ನೀಡಲಾಗಿದೆ. ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್‌ನ ಶ್ರೀರವಿಶಂಕರ ಗುರೂಜಿ ನೇತೃತ್ವದ ಶ್ರೀಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದ ಪ್ರಾಯೋಜಕತ್ವ ದಲ್ಲಿ ಸುಮಾರು 13 ಲಕ್ಷ ರೂ. ವೆಚ್ಚದಲ್ಲಿ ಈ ಘಟಕವನ್ನು ಸ್ಥಾಪಿಸಲಾಗಿದೆ.
ನಿತ್ಯ ಸಾವಿರಾರು ಯಾತ್ರಿಗಳಿಗೆ ಇಲ್ಲಿ ಅನ್ನದಾನದ ವ್ಯವಸ್ಥೆ ಇರುವುದರಿಂದ ದೊಡ್ಡ ಮಟ್ಟದಲ್ಲಿ ಜೈವಿಕ ತ್ಯಾಜ್ಯ ಉತ್ಪತ್ತಿಯಾಗುತ್ತಿದ್ದು, ಇವುಗಳನ್ನು ಈ ಯಂತ್ರದ ಮೂಲಕ ಸಂಸ್ಕರಿಸಿ ಕೆಲವು ದ್ರಾವಣಗಳನ್ನು ನಿಗದಿತ ಪ್ರಮಾಣದಲ್ಲಿ ಮಿಶ್ರಗೊಳಿಸಿ ಹತ್ತು ದಿನಗಳ ಕಾಲ ಇಡಲಾಗುತ್ತದೆ. ಬಳಿಕ ಇದು ಅತ್ಯುತ್ತಮ ಸಾವಯವ ಗೊಬ್ಬರವಾಗಿ ಪರಿವರ್ತನೆಯಾಗುತ್ತದೆ.
ಈ ಗೊಬ್ಬರವನ್ನು ಆಸಕ್ತ ಕೃಷಿಕರಿಗೆ ಸಾಂಕೇತಿಕ ದರದಲ್ಲಿ ವಿತರಿಸುವ ಯೋಚನೆ ಇದೆ. ಯಂತ್ರದ ನಿರ್ವಹಣೆ ವಚ್ಚವನ್ನು ಸರಿದೂಗಿಸುವ ನಿಟ್ಟಿನಲ್ಲಿ ಮಾತ್ರ ದರವನ್ನು ವಿಧಿಸಲಾಗುತ್ತದೆ. ಈ ಮೂಲಕ ಉಡುಪಿಯ ಕೃಷಿಕರಿಗೆ ಉತ್ತಮ ಜೈವಿಕ ಗೊಬ್ಬರ ಲಬಿಸುತ್ತದೆ. ಈ ಯಂತ್ರದ ಅಳವಡಿಕೆ ಮೂಲಕ ಮುಂದಿನ ದಿನಗಳಲ್ಲಿ ಕೃಷ್ಣಮಠದಲ್ಲಿ ಊಟದ ಎಲೆ, ತರಕಾರಿ, ಹೂ, ಮೊದಲಾದ ಜೈವಿಕ ತ್ಯಾಜ್ಯ ನಿರ್ವಹಣೆ ಸುಲಭವಾಗಲಿದೆ. ಈ ಮಾದರಿಯ ಘಟಕ ದಕ್ಷಿಣ ಭಾರತದಲ್ಲಿ ಇದೇ ಪ್ರಥಮದ್ದಾಗಿದೆ ಎಂದು ಮಠದ ಪ್ರಕಟಣೆ ತಿಳಿಸಿದೆ.







