ಬ್ಯಾರಿ ಸಾಹಿತ್ಯ ಅಕಾಡಮಿಗೆ ಹೊಸ ಸಾರಥ್ಯ
ಮಂಗಳೂರು, ನ. 27: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ನಾಲ್ಕನೆ ಅವಧಿಯ ತಂಡವನ್ನು ರಾಜ್ಯ ಸರಕಾರ ಪ್ರಕಟಿಸಿದ್ದು, ಅಧ್ಯಕ್ಷ ಸಹಿತ 13 ಮಂದಿಯ ಹೆಸರನ್ನು ನ.14ರಂದು ಸರಕಾರ ಬಿಡುಗಡೆ ಮಾಡಿದೆ.
ಅಕಾಡಮಿಯ ನೂತನ ಅಧ್ಯಕ್ಷರಾಗಿ ಚಿಕ್ಕಮಗಳೂರು ಜಿಪಂನ ಮಾಜಿ ಅಧ್ಯಕ್ಷ ಹಾಗೂ ಅಕಾಡಮಿಯ ಪ್ರಥಮ ಅವಧಿಯ ಸದಸ್ಯರಾಗಿದ್ದ ಕಾಂಗ್ರೆಸ್ ಮುಂದಾಳು ಕರಂಬಾರು ಮುಹಮ್ಮದ್ ಅವರನ್ನು ಸರಕಾರ ನೇಮಿಸಿದೆ.
ಉಳಿದಂತೆ ಸದಸ್ಯರಾಗಿ ಸಲೀಂ ಬರಿಮಾರು ಬಂಟ್ವಾಳ, ಕೆ.ಎಂ. ಮುಹಮ್ಮದ್ ಅನ್ಸಾರ್ ಬೆಳ್ಳಾರೆ, ಪಿ.ಎಂ. ಹಸನಬ್ಬ ಮೂಡುಬಿದಿರೆ, ಬಶೀರ್ ಅಹ್ಮದ್ ಕಿನ್ಯ, ಮುಹಮ್ಮದ್ ತನ್‌ಸೀಫ್ ಕಿಲ್ಲೂರು ಬೆಳ್ತಂಗಡಿ, ಅಬ್ದುಲ್ ರಹ್ಮಾನ್ ಕುತ್ತೆತ್ತೂರು, ಆಯಿಶಾ ಯು.ಕೆ. ಉಳ್ಳಾಲ, ಬಶೀರ್ ಬೈಕಂಪಾಡಿ, ಎಸ್.ಎಂ.ಶರೀಫ್ ಮಡಿಕೇರಿ, ಅತ್ತೂರು ಚೈಯಬ್ಬ ಬೆಂಗಳೂರು, ಆರೀಫ್ ಪಡುಬಿದ್ರೆ, ಹುಸೈನ್ ಕಾಟಿಪಳ್ಳ ಅವರನ್ನು ನೇಮಕ ಮಾಡಲಾಗಿದೆ.
ಕಳೆದ ಮೂರು ತಿಂಗಳಿನಿಂದ ಅಕಾಡಮಿಗೆ ಅಧ್ಯಕ್ಷರು-ಸದಸ್ಯರಿಲ್ಲದೆ ಅನಾಥವಾಗಿತ್ತು. ಇದೀಗ ಹೊಸ ತಂಡವನ್ನು ಸರಕಾರವು ನೇಮಕಗೊಳಿಸುವ ಮೂಲಕ ಅಕಾಡಮಿಗೆ ಕಾರ್ಯಚಟುವಟಿಕೆಗೆ ಚಾಲನೆ ನೀಡಿದಂತಾಗಿದೆ.
ಈ ಬಾರಿ ಅಕಾಡಮಿಯ ಅಧ್ಯಕ್ಷ ಸ್ಥಾನಕ್ಕೆ ಭಾರೀ ಪೈಪೋಟಿ ಇತ್ತು. ಕಳೆದ ಮೂರು ಅವಧಿಯಲ್ಲಿ ದ.ಕ.ಜಿಲ್ಲೆಯವರಿಗೇ ಅಧ್ಯಕ್ಷ ಸ್ಥಾನ ಲಭಿಸಿದ ಕಾರಣ ಹೊರ ಜಿಲ್ಲೆಗೆ ನೀಡಬೇಕು ಎಂಬ ಬೇಡಿಕೆ ಇತ್ತು. ಅದರಂತೆ ಮಾಜಿ ಸಚಿವ ಹಾಗು ಬ್ಯಾರಿ ಸಮಾಜದ ಮುಂದಾಳು ಬಿ.ಎ.ಮೊಯ್ದಿನ್ ಅವರ ಸಲಹೆ ಸೂಚನೆಯಂತೆ ಸಚಿವರಾದ ಯು.ಟಿ.ಖಾದರ್ ಮತ್ತು ರಮಾನಾಥ ರೈ ಹಾಗು ಶಾಸಕ ಬಿ.ಎ.ಮೊಯ್ದಿನ್ ಬಾವಾ ಅವರು ಪರಸ್ಪರ ಸಮಾಲೋಚನೆ ನಡೆಸಿ ಹೊಸ ತಂಡದ ಪಟ್ಟಿಯನ್ನು ಸರಕಾರಕ್ಕೆ ಕಳುಹಿಸಿಕೊಟ್ಟಿದ್ದರು. ಅದರಂತೆ ಸರಕಾರ ಹೊಸ ಪಟ್ಟಿ ಬಿಡುಗಡೆಗೊಳಿಸಿದೆ.







