ಮೂಲಸೌಕರ್ಯಕ್ಕೆ ಪ್ರಥಮ ಆದ್ಯತೆ: ಸಚಿವ ರೈ
ಕೊಯಿಲ: ಸರಕಾರಿ ಪ್ರೌಢಶಾಲೆ ರಜತ ಮಹೋತ್ಸವ ಸಮಾರೋಪ

ಬಂಟ್ವಾಳ, ನ. 27: ಸಂಗಬೆಟ್ಟು ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಸಹಿತ ಕೆಲವೊಂದು ರಸ್ತೆ ಮತ್ತು ಸೇತುವೆ ನಿರ್ಮಾಣ ಕಾಮಗಾರಿ ನಡೆದಿದ್ದು, ಕೊಯಿಲ ಸರಕಾರಿ ಪ್ರೌಢಶಾಲೆಗೆ ಕೊಠಡಿ ಮತ್ತು ಶೌಚಾಲಯ ನಿರ್ಮಾಣ ಮತ್ತಿತರ ಮೂಲಭೂತ ಸೌಕರ್ಯ ಒದಗಿಸಲು ಪ್ರಥಮ ಆದ್ಯತೆ ನೀಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ತಾಲೂಕಿನ ಕೊಯಿಲ ಸರಕಾರಿ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ರಜತ ಮಹೋತ್ಸವ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್, ಸದಸ್ಯರಾದ ಚಂದ್ರಪ್ರಕಾಶ ಶೆಟ್ಟಿ, ಬಿ.ಪದ್ಮಶೇಖರ ಜೈನ್, ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಕೆ.ಮಾಯಿಲಪ್ಪ ಸಾಲ್ಯಾನ್, ಎಪಿಎಂಸಿ ಸದಸ್ಯ, ರಜತ ಮಹೋತ್ಸವ ಸಮಿತಿ ಗೌರವಾಧ್ಯಕ್ಷ ಎಂ.ಪದ್ಮರಾಜ ಬಲ್ಲಾಳ್ ಮತ್ತಿತರರು ಶುಭ ಹಾರೈಸಿದರು.
ಸ್ಥಳೀಯ ತಾಪಂ ಸದಸ್ಯೆ ಮಂಜುಳಾ ಸದಾನಂದ, ಗ್ರಾಪಂ ಸದಸ್ಯೆ ಶೋಭಾ ಎನ್.ಸಪಲ್ಯ, ಶಿಕ್ಷಣ ಸಂಯೋಜಕಿ ಸುಜಾತ ಶೆಟ್ಟಿ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಮೇಲ್ವಿಚಾರಕಿ ಹರಿಣಾಕ್ಷಿ, ವಿಜಯಾ ಬ್ಯಾಂಕಿನ ಶಾಖಾಧಿಕಾರಿ ಬೇಬಿ ಕುಂದರ್, ಶಾಲಾಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ದೇವಪ್ಪ ಕರ್ಕೇರ ಮತ್ತಿತರರು ಇದ್ದರು.
ಇದೇ ವೇಳೆ ನಿವೃತ್ತ ಮುಖ್ಯಶಿಕ್ಷಕ ನಾರಾಯಣ ನಾಯಕ್ ಕರ್ಪೆ ಸಹಿತ ಕಿಶೋರ್, ಜನಾರ್ದನ ಇವರನ್ನು ಸನ್ಮಾನಿಸಲಾಯಿತು.
ರಜತ ಸಮಿತಿ ಅಧ್ಯಕ್ಷ ಜಗದೀಶ ಕೊಯಿಲ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು.







