ಕಾನೂನು ಹೋರಾಟಕ್ಕೂ ಸಿದ್ಧ: ಮೂರ್ತಿ
ಲೈಂಗಿಕ ಕಿರುಕುಳ ಆರೋಪ
ಬೆಂಗಳೂರು, ನ. 27: "ನನ್ನ ವಿರುದ್ಧದ ಲೈಂಗಿಕ ಕಿರುಕುಳ ಆರೋಪದಲ್ಲಿ ಯಾವುದೇ ಹುರುಳಿಲ್ಲ. ತಾನೂ ದಲಿತನೆಂಬ ಕಾರಣಕ್ಕೆ ವಿನಾಕಾರಣ ಆರೋಪ ಮಾಡುತ್ತಿದ್ದು, ಇದರ ವಿರುದ್ಧ ತಾನೂ ಕಾನೂನು ಹೋರಾಟ ನಡೆಸುವೆ" ಎಂದು ವಿಧಾನಸಭೆ ಕಾರ್ಯದರ್ಶಿ ಎಸ್. ಮೂರ್ತಿ ತಿಳಿಸಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿನ ತನ್ನ ಕೊಠಡಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ನನ್ನ ಮೇಲಿನ ಆರೋಪ ಶುದ್ಧ ಸುಳ್ಳು. ನಾನು ಕಾರ್ಯದರ್ಶಿ ಹುದ್ದೇಗೇರಿದ ಬಳಿಕ ನನ್ನ ವಿರುದ್ಧ ಒಂದು ಗುಂಪು ವ್ಯವಸ್ಥಿತ ಪಿತೂರಿ ನಡೆಸುತ್ತಿದೆ. ನಾನು ನನ್ನ ಕಚೇರಿಯ ಮಹಿಳಾ ಸಿಬ್ಬಂದಿಯನ್ನು ಅತ್ಯಂತ ಗೌರವದಿಂದ ನೋಡಿಕೊಳ್ಳುತ್ತಿದ್ದೇನೆ ಎಂದರು.
ನನಗೂ ಮದುವೆ ವಯಸ್ಸಿಗೆ ಬಂದಿರುವ ಮಗಳಿದ್ದು, ನಾನೇಕೆ ಅವರಿಗೆ ಲೈಂಗಿಕ ಕಿರುಕುಳ ನೀಡಲಿ. ಲೈಂಗಿಕ ಕಿರುಕುಳ ಆರೋಪ ಮಾಡುವವರಿಗೆ ವಿಧಾನಸೌಧದಲ್ಲಿ ಇರುವ ಮಹಿಳಾ ದೂರು ಪ್ರಾಧಿಕಾರಕ್ಕೆ ದೂರು ನೀಡುವುದಿಲ್ಲ. ಬದಲಿಗೆ ಪ್ರಚಾರಕ್ಕಾಗಿ ಮಾಧ್ಯಮಗಳ ಮೂಲಕ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ ಎಂದು ಆರೋಪಿಸಿದರು.
ಸಚಿವಾಲಯದಲ್ಲಿ 1500 ಮಂದಿ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದು, 500ಕ್ಕೂ ಹಚ್ಚು ಮಂದಿ ಹೆಣ್ಣು ಮಕ್ಕಳಿದ್ದಾರೆ. ಯಾರೊಬ್ಬರಿಗೂ ನಾನು ಕಿರುಕುಳ ನೀಡಿಲ್ಲ ಮತ್ತು ನೀಡುವುದು ಇಲ್ಲ. ಅಧಿವೇಶನದ ಹಿನ್ನೆಲೆಯಲ್ಲಿ ಸಿಬ್ಬಂದಿಗೆ ಕೆಲಸ-ಕಾರ್ಯ ಹಂಚಿಕೆ ಮಾಡಲಾಗಿದೆ. ಆದರೆ, ದೊಡ್ಡ ಮೊತ್ತದ ವೇತನ ಪಡೆದು ಕೆಲಸ ಮಾಡದೆ ಇದ್ದರೆ ಪ್ರಶ್ನಿಸುವುದು ತಪ್ಪೇ? ಕಂಪ್ಯೂಟರ್ ವಿಭಾಗದ ಹೊಣೆ ಹೊತ್ತವರು ತಮ್ಮ ಜವಾಬ್ದಾರಿಯನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸದಿರುವುದರಿಂದ ಸಚಿವಾಲಯಕ್ಕೆ 87ಲಕ್ಷ ರೂ. ಹೊರೆಯಾಗಿದೆ. ಇದನ್ನು ಪ್ರಶ್ನಿಸಿದ ಕಾರಣಕ್ಕೆ ತನ್ನನ್ನು ಬ್ಲಾಕ್‌ಮೇಲ್ ಮಾಡಲಾಗುತ್ತಿದೆ ಎಂದು ದೂರಿದರು.
ದಲಿತರು ಮತ್ತು ಶೋಷಿತ ಸಮುದಾಯದವರು ಉನ್ನತ ಹುದ್ದೆಗೇರಬಾರದೆಂದು ಸುಳ್ಳು ಆರೋಪ ಮಾಡಲಾಗುತ್ತಿದೆ. ಇದನ್ನು ತಾನೂ ಸಹಿಸುವುದಿಲ್ಲ. ಕಾನೂನು ಹೋರಾಟ ಮಾಡುವೆ. ಜತೆಗೆ ಪರಿಶಿಷ್ಟ ಜಾತಿ ಮತ್ತು ಪಂಗಡ ದೌರ್ಜನ್ಯ ತಡೆ ಕಾಯ್ದೆಯಡಿಯೂ ಮೊಕದ್ದಮೆ ದಾಖಲಿಸಲು ಉದ್ದೇಶಿಸಿದ್ದೇನೆ ಎಂದು ಮೂರ್ತಿ ತಿಳಿಸಿದರು.
ಸಚಿವಾಲಯದ ಕಾರ್ಯದರ್ಶಿ ಸ್ಥಾನಕ್ಕೆ ಅಗೌರವ ತರುವ ರೀತಿಯಲ್ಲಿ ಸುಳ್ಳು ಆರೋಪ, ಅನಾವಶ್ಯಕ ಗೊಂದಲ ಸೃಷ್ಟಿ ಸರಿಯಲ್ಲ. ವೈಯಕ್ತಿಕ ದ್ವೇಷದಿಂದ ಇಲ್ಲ-ಸಲ್ಲದ ಆರೋಪ ಮಾಡುತ್ತಿರುವುದು ಅಕ್ಷಮ್ಯ. ಇದನ್ನು ಸಚಿವಾಲಯ ಸಿಬ್ಬಂದಿ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ.
-ಮುದ್ದಯ್ಯ, ಸಚಿವಾಲಯ ನೌಕರರ ಸಂಘದ ಅಧ್ಯಕ್ಷ







