ಗಣೇಶ್ ಶಿಪ್ಪಿಂಗನ್ನು ಸೋಳಿಸಿದ ನಿರ್ಮಾಣ ಹೋಮ್ಸ್ಗೆ ಕಾರ್ಪೋರೇಟ್ ಕ್ರಿಕೆಟ್ ಟ್ರೋಫಿಯ ಒಡೆತನ

ನಿರ್ಮಾಣ್ ಹೋಮ್ಸ್ ತಂಡ
ಮಂಗಳೂರು, ನ. 27: ಬ್ರಾಂಡ್ ವಿಷನ್ ಇವೆಂಟ್ ಸಂಸ್ಥೆಯು ಸಹ್ಯಾದ್ರಿ ಸಂಸ್ಥೆಯ ಸಹಕಾರದೊಂದಿಗೆ ಅಡ್ಯಾರ್ನ ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಹುಲ್ಲುಹಾಸಿನ ಕ್ರೀಡಾಂಗಣದಲ್ಲಿ ಕರಾವಳಿಯ 24 ವಿವಿಧ ಕಂಪನಿಗಳ ನಡುವೆ ನಡೆದ ಎಕೆ ಕಾರ್ಪೋರೇಟ್ ಲೀಗ್ ಕ್ರಿಕೆಟ್ ಅಂತಿಮ ಪಂದ್ಯದಲ್ಲಿ ನಿರ್ಮಾಣ್ ಹೋಮ್ಸ್ ತಂಡವು ತನ್ನ ಎದುರಾಳಿ ತಂಡ ಗಣೇಶ್ ಶಿಪ್ಪಿಂಗ್ ತಂಡವನ್ನು 36 ರನ್ಗಳ ಅಂತರದಿಂದ ಸುಲಭವಾಗಿ ಮಣಿಸಿತು.
ನೇತ್ರಾವತಿ ನದಿಯ ತಟದ ಹಚ್ಚ ಹಸುರಿನ ಮೈದಾನದಲ್ಲಿ ಹೊನಲು ಬೆಳಕಿನಡಿಯಲ್ಲಿ ಜರಗಿದ ಅಂತಿಮ ಪಂದ್ಯದಲ್ಲಿ ಮೊದಲು ಬ್ಯಾಟಿಂಗಿಗಿಳಿದ ನಿರ್ಮಾಣ್ ತಂಡವು ಮೊದಲ ಚೆಂಡಿನಲ್ಲಿಯೇ ತನ್ನ ವಿಕೇಟನ್ನು ಕಳೆದುಕೊಂಡಿತು. ಎಲ್ಲ ಪಂದ್ಯಗಳಲ್ಲೂ ದೃಢವಾದ ಬ್ಯಾಟಿಂಗನ್ನು ಮಾಡುತ್ತಾ ಬಂದಿದ್ದ ಕೃಷ್ಙ ಪ್ರಸಾದ್ ರವರು ಈ ಭಾರಿಯೂ 27 ರನ್ಗಳನ್ನು ಗಳಿಸಿ ದೊಡ್ಡ ಮೊತ್ತವನ್ನು ಕಟ್ಟುವಲ್ಲಿ ಭದ್ರ ಬುನಾದಿಯನ್ನು ಹಾಕಿದರು.
ಈ ಬುನಾದಿಯ ಮೇಲೆ ತಳವೂರಿ ನಾಲ್ಕು ಸಿಕ್ಸರ್ ಒಂದು ಬೌಂಡರಿಯುಳ್ಳ ಅಜೇಯ 35 ಓಟಗಳನ್ನು ಸಿಡಿಸಿದ ಅಕ್ಷಯ್ರವರು ನಿಗದಿತ 10 ಓವರುಗಳಲ್ಲಿ 85 ರನ್ಗಳ ದೊಡ್ಡ ಮೊತ್ತವನ್ನು ನಿರ್ಮಿಸಿದಾಗ ನಿರ್ಮಾಣ್ ತಂಡ 5 ವಿಕೇಟುಗಳನ್ನು ಕಳೆದುಕೊಂಡಿತ್ತು. ಗಣೇಶ್ ಶಿಪ್ಪಿಂಗಿನ ಪ್ರೀತಮ್ 2, ಶಬೀರ್, ಆವೀಶ್, ಶಮಿತ್ರವರು ತಲಾ ಒಂದೊಂದು ವಿಕೇಟುಗಳನ್ನು ಹಂಚಿಕೊಂಡರು.
ನಿರ್ಮಾಣ್ ತಂಡವು ನೀಡಿದ 86 ಓಟಗಳ ಗುರಿಯನ್ನು ಬೆನ್ನತ್ತಿದ್ದ ಗಣೇಶ್ ತಂಡವು ನಿರ್ಮಾಣ್ ತಂಡದ ಕರಾರುವಕ್ಕಾದ ಬೌಲಿಂಗ್ ದಾಳಿ, ಚುರುಕಿನ ಕ್ಷೇತ್ರರಕ್ಷಣೆಯ ನಡುವೆ ರನ್ ಗಳಿಸಲು ಪರದಾಡುತ್ತಾ ಸಾಗಿ ಕೇವಲ 49 ರನ್ಗಳ ಮೊತ್ತಕ್ಕೆ ಎಲ್ಲಾ ವಿಕೇಟುಗಳನ್ನು ಕಳೆದುಕೊಂಡಿತು. ನಿರ್ಮಾಣ್ ತಂಡವು 36 ರನ್ಗಳ ಗೆಲುವಿನ ನಗೆ ಬೀರಿ ಪ್ರತಿಷ್ಥ್ಠಿತ ಕಾರ್ಪೋರೇಟ್ ಕ್ರಿಕೆಟ್ ಟ್ರೋಫಿಯ ಒಡೆಯನಾಯಿತು.
ಅಂತಿಮ ಪಂದ್ಯದಲ್ಲಿ ಸರ್ವಾಂಗೀಣ ಆಟವನ್ನಾಡಿದ ನಿರ್ಮಾಣ್ ತಂಡದ ಕೃಷ್ಣಪ್ರಸಾದ್ ಪಂದ್ಯ ಪುರುಷೋತ್ತಮ, ಅಕ್ಷಯ್ ಉತ್ತಮ ದಾಂಡುಗಾರ, ಕಾರ್ತಿಕ್ ಸರಣಿ ಶ್ರೇಷ್ಠಮತ್ತು ಗಣೇಶ್ ಶಿಪ್ಪಿಂಗ್ ತಂಡದ ಅನೀಶ್ರವರು ಉತ್ತಮ ಬೌಲರ್ ಆಗಿ ಗೌರವಿಸಲ್ಪಟ್ಟರು.
ಉಪಾಂತ್ಯ ಪಂದ್ಯಗಳಲ್ಲಿ ನಿರ್ಮಾಣ ತಂಡವು 90ರ ಮೊತ್ತವನ್ನು ದಾಖಲಿಸಿದರೆ ಫೋರಂ ಮಾಲ್ ತಂಡವು 51 ರನ್ಗಳನ್ನು ಮಾತ್ರಗಳಿಸಲು ಶಕ್ತವಾಗಿ 39 ರನ್ಗಳ ಅಂತರದಿಂದ ಸೋಲನ್ನು ಕಂಡಿತು. ಮಣಿಪಾಲ್ ಟೆಕ್ನಾಲಜೀಸ್ ತಂಡವು ನೀಡಿದ 62 ರನ್ಗಳ ವಿಜಯದ ಗುರಿಯನ್ನು 4 ವಿಕೇಟುಗಳನ್ನು ಕಳೆದುಕೊಂಡು ತಲಪಿದ ಗಣೇಶ್ ಶಿಪ್ಪಿಂಗ್ ತಂಡವು ವಿಜಯವನ್ನು ಸಾಧಿಸಿತು.
ಅಂತಿಮ ಸಮಾರಂಭದಲ್ಲಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಯುವ ನಾಯಕ ಮಿಥುನ್ ರೈ, ಶಾಸಕ್ ಮೊಯ್ದಿನ್ ಬಾವ, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಸಂಚಾಲಕ ಮನೋಹರ್ ಅಮೀನ್, ತುಳುನಾಡ ರಕ್ಷಣಾ ವೇದಿಕೆಯ ಯೋಗೀಶ್ ಶೆಟ್ಟಿ, ಗಣೇಶ್ ಶಿಪ್ಪಿಂಗಿನ ಮಾಲಕ ಗಣೇಶ್ ಶೆಟ್ಟಿ, ಅಮೃತ್ ಕೇರರ್ಸ್ನ ಭಾಸ್ಕರ್ ಗಡಿಯಾರ್, ಅಂಬರ್ ಕೇಟರರ್ಸ್ ಚಿತ್ರನಟ ಸೌರವ್ ಭಂಡಾರಿ, ಪಂದ್ಯಕೂಟದ ರೂವಾರಿ ನಾಗರಾಜ್, ಸಫ್ತಾರ್ ಅಲಿ, ಸಯ್ಯದ್, ಬಾಲಕೃಷ್ಙ ಪರ್ಕಳ ಮೊದಲಾದವರು ಉಪಸ್ಥಿತರಿದ್ದರು.
ಬ್ರಾಂಡ್ ವಿಷನ್ ಸಂಸ್ಥೆಯ ಅಧ್ಯಕ್ಷ ಸಿರಾಜುದ್ದೀನ್ ಸ್ವಾಗತಿಸಿದರು, ಸಂಚಾಲಕ ಇಮ್ತಿಯಾಝ್ ವಂದಿಸಿದರು. ಆರ್.ಜೆ. ಪ್ರಿಯಾ ಕಾರ್ಯಕ್ರಮ ನಿರ್ವಹಿಸಿದರು.







