ಪತ್ರಕರ್ತರಿಗೆ ಸಾಮಾಜಿಕ ಹೊಣೆಗಾರಿಕೆ ಇರಬೇಕು: ಮೃತ್ಯುಂಜಯ

ಮಂಡ್ಯ, ನ.27: ಪತ್ರಕರ್ತರಾದವರು ಜಾತ್ಯತೀತ ಮನೋಭಾವ ಹಾಗೂ ಸಾಮಾಜಿಕ ಹೊಣೆಗಾರಿಕೆ ಹೊಂದಿರಬೇಕು ಎಂದು ಕವಿ ಹಾಗೂ ಉಪನ್ಯಾಸಕ ಕೆ.ಪಿ.ಮೃತ್ಯುಂಜಯ ಅಭಿಪ್ರಾಯಪಟ್ಟಿದ್ದಾರೆ.
ಸೋಮವಾರ ನಗರದ ವಾರ್ತಾಭವನದಲ್ಲಿ ಪ್ರಾದೇಶಿಕ ಮತ್ತು ರಾಜ್ಯ ಪತ್ರಿಕಾ ವರದಿಗಾರರ ಒಕ್ಕೂಟದ ವತಿಯಿಂದ ಆಯೋಜಿಸಿದ್ದ ರಾಜಶೇಖರ ಕೋಟಿ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಾಮಾಜಿಕ ಬದ್ಧತೆ, ಹೊಣೆಗಾರಿಕೆ, ಜವಾಬ್ಧಾರಿ ಇಲ್ಲದವರು ಪತ್ರಕರ್ತ, ಸಾಹಿತಿ, ಉಪನ್ಯಾಸಕರಾಗಲು ಸಾಧ್ಯವಿಲ್ಲ. ಆ ನಿಟ್ಟಿನಲ್ಲಿ ಪತ್ರಕರ್ತರು ಜವಾಬ್ಧಾರಿಂದ ಕೆಲಸ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.
ಪ್ರಗತಿಪರ, ಜನಪರ, ಶೋಷಿತರ ಪರವಾದ ಚಳವಳಿಗಳಲ್ಲಿ ಸಕ್ರಿಯರಾಗಿದ್ದ ಸಂಪಾದಕ ರಾಜಶೇಖರ ಕೋಟಿ ಅವರು, ಆಂದೋಲನ ಪತ್ರಿಕೆಯ ಮೂಲಕ ಸಮಾಜವನ್ನು ಜಾಗೃತಗೊಳಿಸುವ ಕೆಲಸ ಮಾಡಿದ್ದಾರೆ ಎಂದು ಸ್ಮರಿಸಿದರು.
ಪ್ರೊ.ಜಿ.ಟಿ.ವೀರಪ್ಪ ಮಾತನಾಡಿ, ರಾಜಶೇಖರ ಕೋಟಿ ಅವರು ಪತ್ರಿಕಾಧರ್ಮದ ಗೆರೆಯನ್ನು ದಾಟಲಿಲ್ಲ. ಅವರಲ್ಲಿ ಜನಪರ ಕಾಳಜಿ, ಬದ್ಧತೆ ಇತ್ತು. ಶೋಷಿತರ ಪರವಾಗಿದ್ದರು. ಪತ್ರಿಕೋದ್ಯಮಿ ಆಗಿರದೆ ಶ್ರೇಷ್ಠ ಪತ್ರಕರ್ತರಾಗಿದ್ದರು ಎಂದರು.
ಕೋಟಿ ಅವರ ಜತೆಗಿನ ಒಡನಾಟವನ್ನು ಸ್ಮರಿಸಿದ ಜಾಗೃತ ಅಂಕಣಕಾರರ ವೇದಿಕೆ ಅಧ್ಯಕ್ಷ ಪ್ರೊ.ಸಿ.ಸಿದ್ದರಾಜು ಆಲಕೆರೆ, ಆಂದೋಲನ ಪತ್ರಿಕೆ ಮೂಲಕ ಹಲವಾರು ಸಾಮಾನ್ಯ ಓದುಗರು ಉತ್ತಮ ಪತ್ರಕರ್ತರಾಗಿ ಹೊರಹೊಮ್ಮಿದ್ದಾರೆ ಎಂದು ಹೇಳಿದರು.
ರಾಜಶೇಖರ ಕೋಟಿ ಅವರ ನಿಧನದಿಂದ ದಲಿತಪರ, ರೈತಪರ, ಕಾರ್ಮಿಕ ಮತ್ತು ಮಹಿಳಾ ಪರ ಹೋರಾಟಗಳಿಗೆ ಹಿನ್ನಡೆಯಾಗಿದೆ ಎಂದು ವಿಷಾದಿಸಿದ ಡಿ. ದೇವರಾಜ ಅರಸು ವೇದಿಕೆ ಅಧ್ಯಕ್ಷ ಎಲ್. ಸಂದೇಶ್, ಸೈದ್ಧಾಂತಿಕ ತಳಹದಿಯ ಮೇಲೆ ಪತ್ರಿಕೋದ್ಯಮವನ್ನು ಕಟ್ಟಿ ಬೆಳೆಸಿದ ಕೋಟಿ ಹೊಸ ತಲೆಮಾರಿನ ಪತ್ರಕರ್ತರಿಗೆ ಆದರ್ಶವಾಗಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಈ ವೇಳೆ ರೆಡ್‍ಕ್ರಾಸ್ ಜಿಲ್ಲಾ ಸಭಾಧ್ಯಕ್ಷೆ ಮೀರಾ ಶಿವಲಿಂಗಯ್ಯ, ಹಿರಿಯ ಪತ್ರಕರ್ತರಾದ ಕೆ.ಎನ್.ರವಿ, ಡಿ. ದೇವರಾಜ ಕೊಪ್ಪ, ಕುಂಟನಹಳ್ಳಿ ಮಲ್ಲೇಶ, ಸಿರಿಗನ್ನಡ ವೇದಿಕೆ ಅಧ್ಯಕ್ಷ ಮಹದೇವು ನುಡಿ ನಮನ ಸಲ್ಲಿಸಿದರು.
ಸಭೆಯಲ್ಲಿ ಒಕ್ಕೂಟದ ಅಧ್ಯಕ್ಷ ಬಿ.ಟಿ.ಮೋಹನ್‍ಕುಮಾರ್, ಕಾರ್ಯಾಧ್ಯಕ್ಷ ಎಂ.ಶಿವಕುಮಾರ್, ಪದಾಧಿಕಾರಿಗಳಾದ ಮಾದರಹಳ್ಳಿ ರಾಜು, ಕೆ.ಶ್ರೀನಿವಾಸ್, ನವೀನ, ಬಿ.ಕೆಸತೀಶ್, ಶಿವರಾಜ್, ನಾಗಯ್ಯ, ಸಿದ್ದೇಗೌಡ, ಬಾಬು, ಪ್ರಗತಿಪರ ಸಂಘಟನೆಗಳ ಮುಖಂಡರಾದ ಕಲಾವಿದ ಪ್ರಕಾಶ್, ಸಿದ್ದಶೆಟ್ಟಿ, ಕಾಂತರಾಜು, ಇಂಡುವಾಳು ಬಸವರಾಜು ಇತರರು ಉಪಸ್ಥಿತರಿದ್ದರು.







