ಸಾರಿಗೆ ವ್ಯವಸ್ಥೆಯನ್ನು ಅಭಿವೃದ್ಧಿಗೊಳಿಸಲು ರಾಜ್ಯ ರಸ್ತೆ ಸಾರಿಗೆ ನಿಗಮ ಬದ್ಧ: ರೇವಣ್ಣ

ಶಿಕಾರಿಪುರ, ನ.27: ತಾಲೂಕಿನಲ್ಲಿ ರಾಜ್ಯ ರಸ್ತೆ ಸಾರಿಗೆ ನಿಗಮದ ಡಿಪೋ ಸ್ಥಾಪಿಸಿ ಹೊಸ ಬಸ್‌ಗಳ ಸಂಚಾರ ಆರಂಭಿಸಿ, ಈ ಮೂಲಕ ಸಾರಿಗೆ ವ್ಯವಸ್ಥೆಯನ್ನು ಅಭಿವೃದ್ಧಿಗೊಳಿಸಲು ರಾಜ್ಯ ರಸ್ತೆ ಸಾರಿಗೆ ನಿಗಮ ಬದ್ಧವಾಗಿದೆ ಎಂದು ರಾಜ್ಯ ಸಾರಿಗೆ ಸಚಿವ ಎಚ್.ಎಂ ರೇವಣ್ಣ ತಿಳಿಸಿದ್ದಾರೆ.
ಸೋಮವಾರ ಪಟ್ಟಣದ ಸಂತೆ ಮೈದಾನದ ಬಳಿ ರಾಜ್ಯ ರಸ್ತೆ ಸಾರಿಗೆ ನಿಗಮದ ನೂತನ ಬಸ್ ನಿಲ್ದಾಣ ಲೋಕಾರ್ಪಣೆಗೊಳಿಸಿ ಹಾಗೂ ಹೊಸ ಬಸ್ ಸಂಚಾರಕ್ಕೆ ಹಸಿರು ನಿಶಾನೆ ತೋರಿ ಬಳಿಕ ಅವರು ಮಾತನಾಡಿದರು.
ರಾಜ್ಯ ರಸ್ತೆ ಸಾರಿಗೆ ನಿಗಮ ದೇಶದಲ್ಲಿಯೇ ಸಂಚಾರಿ ವ್ಯವಸ್ಥೆಯಲ್ಲಿ ಪ್ರಥಮ ಸ್ಥಾನವನ್ನು ಹೊಂದಿದ್ದು, ಉತ್ತಮ ಸೇವೆಯಿಂದಾಗಿ 210 ವಿವಿಧ ಪ್ರಶಸ್ತಿಗಳನ್ನು ಗಳಿಸಿದೆ ಎಂದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿಶೇಷ ಸಹಕಾರದಿಂದ ಈ ಹಿಂದೆ ಸಾರಿಗೆ ಇಲಾಖೆಯನ್ನು ನಿರ್ವಹಿಸಿದ್ದ ಅವರ ಮಾರ್ಗದರ್ಶನದನ್ವಯ 4 ವಿಭಾಗಗೊಳಿಸಿರುವುದು ಯಶಸ್ಸಿಗೆ ಮುಖ್ಯ ಕಾರಣವಾಗಿದೆ ಎಂದು ತಿಳಿಸಿದರು.
ದಾವಣಗೆರೆ ವಿಭಾಗದಿಂದ ಶಿವಮೊಗ್ಗ ಹಾಗೂ ಚಿತ್ರದುರ್ಗವನ್ನು ಪ್ರತ್ಯೇಕಗೊಳಿಸುವಂತೆ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹಾಗೂ ಶಾಸಕ ರಾಘವೇಂದ್ರರ ಮನವಿಗೆ ಪೂರಕವಾಗಿ ಶಿವಮೊಗ್ಗವನ್ನು ಪ್ರತ್ಯೇಕ ವಿಭಾಗವಾಗಿಸಲಾಗಿದ್ದು, ಈ ದಿಸೆಯಲ್ಲಿ ಶಿಕಾರಿಪುರಕ್ಕೆ ಹೊಸ ಬಸ್ ನಿಲ್ದಾಣವನ್ನು ಮಂಜೂರುಗೊಳಿಸಲಾಗಿದೆ. ಕಂದಾಯ ಸಚಿವರು ತಾಲೂಕಿನಲ್ಲಿ 4 ಎಕರೆ ಭೂಮಿಯನ್ನು ರಸ್ತೆ ಸಾರಿಗೆ ನಿಗಮಕ್ಕೆ ಹಸ್ತಾಂತರಗೊಳಿಸಿದಲ್ಲಿ ಡಿಪೋ ಸ್ಥಾಪನೆ ಬೇಡಿಕೆಯನ್ನು ಪೂರೈಸಲಾಗುವುದು. ಹೊಸ 91 ಬಸ್ ಮಾರ್ಗಗಳಿಗೆ ಅರ್ಜಿ ಬಾಕಿಯಿದ್ದು ಜಿಲ್ಲಾಧಿಕಾರಿ ಹಾಗೂ ರಸ್ತೆ ಇಲಾಖೆ ಅಧಿಕಾರಿಗಳು ಈ ಕೂಡಲೇ ಅರ್ಜಿಯನ್ನು ವಿಲೇಗೊಳಿಸಿ ಹೊಸ ಸಂಚಾರ ಆರಂಭಕ್ಕೆ ಆದೇಶಿಸಿರುವುದಾಗಿ ಹೇಳಿದರು.
ಸಂಚಾರ ವ್ಯವಸ್ಥೆಗೆ ಉತ್ತಮ ಸೇವೆಯನ್ನು ಸಲ್ಲಿಸುತ್ತಿರುವ ರಾಜ್ಯ ರಸ್ತೆ ಸಾರಿಗೆ ಇಲಾಖೆ ಅಂಗವಿಕಲರಿಗೆ, ಹಿರಿಯ ನಾಗರೀಕರಿಗೆ,ಸ್ವಾತಂತ್ರ ಹೋರಾಟಗಾರರಿಗೆ ಪಾಸ್ ಸೌಲಭ್ಯ ಕಲ್ಪಿಸಿದ್ದು 1ರಿಂದ 7ನೆ ತರಗತಿ ಮಕ್ಕಳಿಗೆ ಉಚಿತ ಪಾಸ್ ನೀಡಲಾಗುತ್ತಿದೆ. ಇಲಾಖೆಯ ಸೌಲಭ್ಯ ಸರ್ವರಿಗೂ ದೊರಕಬೇಕು ಈ ದಿಸೆಯಲ್ಲಿ ತಾಲೂಕಿನಾದ್ಯಂತ ಸಂಚಾರ ವ್ಯವಸ್ಥೆ ಸುಗಮಗೊಳಿಸುವ ದಿಸೆಯಲ್ಲಿ ಬದ್ಧನಾಗಿರುವುದಾಗಿ ತಿಳಿಸಿದರು.
ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಮಾತನಾಡಿ, ತಾಲೂಕಿನ ಸಂಚಾರ ವ್ಯವಸ್ಥೆಯಲ್ಲಿ ಹೊಸ ಅಧ್ಯಾಯ ಆರಂಭವಾಗಿದ್ದು, ಯಡಿಯೂರಪ್ಪ ಹಾಗೂ ರಾಘವೇಂದ್ರರ ಶ್ರಮದಿಂದ ಆರಂಭವಾದ ಬಸ್ ನಿಲ್ದಾಣದ ಜತೆಗೆ ರಾತ್ರಿ ವೇಳೆಯಲ್ಲಿ ಸಂಚಾರದ ಬೇಡಿಕೆಯನ್ನು ಸಾರಿಗೆ ಸಚಿವರು ಪೂರೈಸುವ ವಿಶ್ವಾಸ ಹೊಂದಿರುವುದಾಗಿ ತಿಳಿಸಿ ಪೂರಕವಾಗಿ ಸ್ಪಂದಿಸುವುದಾಗಿ ಭರವಸೆ ನೀಡಿದರು.
ಕೆಎಸ್ಸಾರ್ಟಿಸಿ ಅಧ್ಯಕ್ಷ ಶಾಸಕ ಗೋಪಾಲ ಪೂಜಾರಿ ಮಾತನಾಡಿ, ನಿಗಮಕ್ಕೆ ಉಚಿತವಾಗಿ 4 ಎಕರೆ ಭೂಮಿ ಹಸ್ತಾಂತರಗೊಳಿಸಿದಲ್ಲಿ ಸಂಪುಟದಲ್ಲಿ ತೀರ್ಮಾನಿಸಿ ಡಿಪೋ ಆರಂಭಗೊಳಲಾಗುವುದು. ನಿಲ್ದಾಣದಲ್ಲಿ ಡಾಂಬರೀಕರಣಕ್ಕೆ 20 ಲಕ್ಷ ಬಿಡುಗಡೆಗೊಳಿಸಿದ್ದು, ತಂಗುದಾಣಕ್ಕೆ 10 ಲಕ್ಷ ಮಂಜೂರುಗೊಳಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ವಿ.ಪ ಸದಸ್ಯ ಪ್ರಸನ್ನಕುಮಾರ್, ಶಾಸಕ ರಾಘವೇಂದ್ರ ಮಾತನಾಡಿದರು. ತಾ.ಪಂ ಅಧ್ಯಕ್ಷ ಪರಮೇಶ್ವರಪ್ಪ, ಪುರಸಭಾಧ್ಯಕ್ಷೆ ರತ್ನಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ನಾಗರಾಜಗೌಡ, ರೂಪಕಲಾ ಹೆಗ್ಡೆ, ಜಿ.ಪಂ ಸದಸ್ಯ ನರಸಿಂಗನಾಯ್ಕ, ಮಮತಾಸಾಲಿ, ಆರುಂಧತಿ, ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ವಿಶ್ವನಾಥ, ಅಶ್ವಥ್, ಜಗದೀಶಚಂದ್ರ, ಲಿಂಗರಾಜ, ನರೇಂದ್ರ ಕುಮಾರ್, ಶಿವರಾಜ್ ಮತ್ತಿತರರು ಉಪಸ್ಥಿತರಿದ್ದರು.







