ಶಿವಮೊಗ್ಗ: ತುಂಗಾನಾಲೆ ಇಕ್ಕೆಲದ ಮನೆಗಳ ತೆರವು ಆದೇಶ ವಿರುದ್ಧ ಬೃಹತ್ ಪ್ರತಿಭಟನೆ

ಶಿವಮೊಗ್ಗ, ನ.27: ನಗರದಲ್ಲಿ ಹಾದು ಹೋಗಿರುವ ತುಂಗಾ ಎಡದಂಡೆ ನಾಲೆ ಇಕ್ಕೆಲದ ಸರಕಾರಿ ಭೂಮಿಯಲ್ಲಿ ಸಾವಿರಾರು ಮನೆ ತೆರವಿಗೆ ಮುಂದಾಗಿರುವ ಜಿಲ್ಲಾಡಳಿತದ ನಿರ್ಧಾರ ಖಂಡಿಸಿ ಸೋಮವಾರ ಜೆಡಿಎಸ್ ನಗರ ಘಟಕವು ಪ್ರತಿಭಟನಾ ರ್ಯಾಲಿ ನಡೆಸಿ, ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿತು.
ವಾಸಸ್ಥಳದ ಆಧಾರದ ಮೇಲೆ ನಿವಾಸಿಗಳಿಗೆ ಆಧಾರ್, ಪಡಿತರ, ಎಪಿಕ್ ಕಾರ್ಡ್ ನೀಡಲಾಗಿದೆ. ಮನೆ ನಿರ್ಮಿಸಿಕೊಂಡು ವಾಸಿಸುತ್ತಿರುವವರಲ್ಲಿ ಮುಕ್ಕಾಲುಪಾಲು ಜನರು ದಲಿತರು, ಅಲ್ಪಸಂಖ್ಯಾತರು, ಹಿಂದುಳಿದವರು, ಶೋಷಿತ ವರ್ಗಗಳಿಗೆ ಸೇರಿದವರಾಗಿದ್ದಾರೆ. ಈ ಮನೆಗಳೇ ಅವರ ಜೀವನಾಧಾರವಾಗಿದ್ದು, ಒಕ್ಕಲೆಬ್ಬಿಸಿದರೆ ಅಕ್ಷರಶಃ ಇವರು ಬೀದಿಗೆ ಬೀಳಲಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಕಳೆದ ಹಲವು ದಶಕಗಳ ಹಿಂದಿನಿಂದಲೂ ಬಡವರು ತುಂಗಾ ನಾಲೆಯ ಇಕ್ಕೆಲಗಳಲ್ಲಿ ಮನೆ ನಿರ್ಮಿಸಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಈ ಮೂಲಕ ಬದುಕು ಕಟ್ಟಿಕೊಂಡಿದ್ದಾರೆ. ಇಲ್ಲಿರುವ ಮನೆಗಳಿಗೆ ಸ್ಥಳೀಯಾಡಳಿತಗಳಿಂದ ಮೂಲಸೌಕರ್ಯಗಳಾದ ರಸ್ತೆ, ನೀರು, ವಿದ್ಯುತ್, ಒಳಚರಂಡಿ ಸೇರಿದಂತೆ ಎಲ್ಲ ರೀತಿಯ ಸೌಲಭ್ಯ ಕಲ್ಪಿಸಲಾಗಿದೆ ಎಂದರು.
ಇತ್ತೀಚೆಗೆ ಜಿಲ್ಲಾಧಿಕಾರಿ ನಾಲೆಯ ಇಕ್ಕೆಲಗಳಲ್ಲಿರುವ ಮನೆಗಳ ತೆರವಿಗೆ ಮೌಖಿಕ ಆದೇಶ ನೀಡಿದ್ದಾರೆ. ಇದರಿಂದ ಇಲ್ಲಿ ವಾಸಿಸುತ್ತಿರುವ ಸಾವಿರಾರು ಕುಟುಂಬಗಳು ತೀವ್ರ ಆತಂಕಕ್ಕೆ ಒಳಗಾಗುವಂತಾಗಿದೆ ಎಂದು ಪ್ರತಿಭಟನಾಕಾರರು ದೂರಿದ್ದಾರೆ.
ಪ್ರಸಕ್ತ ನಗರದಲ್ಲಿ ಖಾಸಗಿ ನಿವೇಶನಗಳ ಬೆಲೆ ಗಗನಕ್ಕೇರಿದೆ. ಬಡ-ಮಧ್ಯಮ ವರ್ಗದವರು ನಿವೇಶನ ಖರೀದಿಸಲು ಅಸಾಧ್ಯವಾದ ಮಾತಾಗಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.
ಜಿಲ್ಲಾಡಳಿತವು ನಾಲೆಯ ಇಕ್ಕೆಲಗಳಲ್ಲಿ ಮನೆ ನಿರ್ಮಿಸಿಕೊಂಡಿರುವವರಿಗೆ ಕೊಳಚೆ ನಿರ್ಮೂಲನ ಮಂಡಳಿಯಿಂದ ಹಕ್ಕುಪತ್ರ ನೀಡಿ, ಬಡವರು ನೆಮ್ಮದಿಯಾಗಿ ಜೀವನ ನಡೆಸಲು ಅನುವು ಮಾಡಿ ಕೊಡಲು ಅವಕಾಶ ಕಲ್ಪಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ಪ್ರತಿಭಟನೆಯಲ್ಲಿ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಶ್ರೀಕಾಂತ್, ಜಿಲ್ಲಾಧ್ಯಕ್ಷ ಎಚ್.ಎನ್. ನಿರಂಜನ್, ನಗರಾಧ್ಯಕ್ಷ ಎ.ಟಿ. ಸುಬ್ಬೇಗೌಡ, ಯುವಘಟಕದ ಜಿಲ್ಲಾಧ್ಯಕ್ಷ ಜಿ.ಡಿ. ಮಂಜುನಾಥ್, ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಮೊಹಮ್ಮದ್ ಯೂಸುಫ್ ಭಯ್ಯಾ, ರಾಜ್ಯ ಮುಖಂಡ ಕಲೀಂ ಪಾಷಾ, ಮೇಯರ್ ಏಳುಮಲೈ, ಕಾರ್ಪೊರೇಟ್‌ರಗಳಾದ ಎಚ್. ಫಾಲಾಕ್ಷಿ, ನಾಗರಾಜ್ ಕಂಕಾರಿ ಮತ್ತಿತರರಿದ್ದರು.







