ಮಾಯಾಂಕ್ ಮತ್ತೊಂದು ಶತಕ: ಕರ್ನಾಟಕ ಮೇಲುಗೈ
ರಣಜಿ ಟ್ರೋಫಿ
ಹೊಸದಿಲ್ಲಿ, ನ.27: ಆರಂಭಿಕ ಆಟಗಾರ ಮಾಯಾಂಕ್ ಅಗರವಾಲ್ ಸಿಡಿಸಿದ ಸತತ ಎರಡನೇ ಶತಕದ(104 ರನ್)ಸಹಾಯದಿಂದ ಕರ್ನಾಟಕ ತಂಡ ರೈಲ್ವೇಸ್ ವಿರುದ್ಧ ರಣಜಿ ಟ್ರೋಫಿಯ ‘ಎ’ ಗುಂಪಿನ ಪಂದ್ಯದಲ್ಲಿ ಸಂಪೂರ್ಣ ಮೇಲುಗೈ ಸಾಧಿಸಿದೆ.
ರೈಲ್ವೇಸ್ ತಂಡವನ್ನು ಮೊದಲ ಇನಿಂಗ್ಸ್‌ನಲ್ಲಿ 333 ರನ್‌ಗೆ ನಿಯಂತ್ರಿಸಿದ ಕರ್ನಾಟಕ 101 ರನ್ ಇನಿಂಗ್ಸ್ ಮುನ್ನಡೆ ಪಡೆಯಿತು. ಸ್ಪಿನ್ನರ್ ಶ್ರೇಯಸ್ ಗೋಪಾಲ್(4-102), ಕೆ.ಗೌತಮ್(3-70) ಹಾಗೂ ಅಭಿಮನ್ಯು ಮಿಥುನ್(2-68) ರೈಲ್ವೇಸ್ ರನ್ ಓಟಕ್ಕೆ ಕಡಿವಾಣ ಹಾಕಿದರು.
ಎರಡನೇ ಇನಿಂಗ್ಸ್ ಆರಂಭಿಸಿರುವ ಕರ್ನಾಟಕ ಮೂರನೇ ದಿನದಾಟದಂತ್ಯಕ್ಕೆ 1 ವಿಕೆಟ್ ನಷ್ಟಕ್ಕೆ 208 ರನ್ ಗಳಿಸಿದೆ. ಒಟ್ಟಾರೆ 309 ರನ್ ಮುನ್ನಡೆಯಲ್ಲಿದೆ.
ಮೊದಲ ಇನಿಂಗ್ಸ್‌ನಲ್ಲಿ 173 ರನ್ ಗಳಿಸಿ ಕರ್ನಾಟಕ 434 ರನ್ ಗಳಿಸಲು ನೆರವಾಗಿದ್ದ ಮಾಯಾಂಕ್ ಎರಡನೇ ಇನಿಂಗ್ಸ್‌ನಲ್ಲಿ ಮತ್ತೊಂದು ಶತಕ ಸಿಡಿಸಿದರು. ಆರ್.ಸಮರ್ಥ್(56) ಅವರೊಂದಿಗೆ 117 ರನ್ ಸೇರಿಸಿ ತಂಡಕ್ಕೆ ಭದ್ರಬುನಾದಿ ಹಾಕಿಕೊಟ್ಟಿದ್ದ ಮಾಯಾಂಕ್ ಅಜೇಯ 104ರನ್ (157 ಎಸೆತ, 9 ಬೌಂಡರಿ, 3 ಸಿಕ್ಸರ್) ನಿಶ್ಚಲ್‌ಅಜೇಯ 41 (81 ಎಸೆತ, 5 ಬೌಂಡರಿ) ಅವರೊಂದಿಗೆ 2ನೇ ವಿಕೆಟ್‌ಗೆ 91 ರನ್ ಜೊತೆಯಾಟ ನಡೆಸಿ ತಂಡಕ್ಕೆ ಆಸರೆಯಾಗಿದ್ದಾರೆ. ಇದಕ್ಕೆ ಮೊದಲು 4 ವಿಕೆಟ್‌ಗಳ ನಷ್ಟಕ್ಕೆ 241 ರನ್‌ನಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ರೈಲ್ವೇಸ್‌ಗೆ ನಾಯಕ ಹಾಗೂ ವಿಕೆಟ್‌ಕೀಪರ್ ಮಹೇಶ್ ರಾವತ್ ಆಧಾರವಾದರು. 124 ರನ್(182 ಎಸೆತ, 12 ಬೌಂಡರಿ,3 ಸಿಕ್ಸರ್) ಬಾರಿಸಿದ ರಾವತ್ ತಂಡದ ಮೊತ್ತವನ್ನು 330 ರನ್‌ಗೆ ತಲುಪಿಸಿದರು.
ಅರಿಂದರ್ ಘೋಷ್ 91 ರನ್(183 ಎಸೆತ, 13 ಬೌಂಡರಿ, 2 ಸಿಕ್ಸರ್)ಅವರೊಂದಿಗೆ 5ನೇ ವಿಕೆಟ್‌ಗೆ 201 ರನ್ ಜೊತೆಯಾಟ ನಡೆಸಿದ ರಾವತ್ ತಂಡವನ್ನು ಉತ್ತಮ ಮೊತ್ತದತ್ತ ಮುನ್ನಡೆಸಲು ಯತ್ನಿಸಿದರು. ಆದರೆ, ರೈಲ್ವೇಸ್ ಪರ ಈ ಇಬ್ಬರು ಆಟಗಾರರು ಹೊರತುಪಡಿಸಿ ಉಳಿದವರು ಕರ್ನಾಟಕದ ಶಿಸ್ತುಬದ್ಧ ಬೌಲಿಂಗ್‌ಗೆ ಉತ್ತರಿಸಲು ವಿಫಲರಾದರು.
ವೇಗದ ಬೌಲರ್ ಮಿಥುನ್ ಅಗ್ರ ಕ್ರಮಾಂಕದ ಮೃಣಾಲ್ ದೇವಧರ್(7) ಹಾಗೂ ನಿತಿನ್ ಭಿಲೆ(7) ವಿಕೆಟ್ ಉಡಾಯಿಸಿದರೆ, ಗೌತಮ್ ಹಾಗೂ ಎಸ್.ಗೋಪಾಲ್ ಮಧ್ಯಮ ಹಾಗೂ ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳನ್ನು ಕಾಡಿದರು. ತಮ್ಮ್‌ಳಗೆ ಏಳು ವಿಕೆಟ್‌ಗಳನ್ನು ಹಂಚಿಕೊಂಡರು.
ಸಂಕ್ಷಿಪ್ತ ಸ್ಕೋರ್
►ಕರ್ನಾಟಕ ಮೊದಲ ಇನಿಂಗ್ಸ್: 434
►ರೈಲ್ವೇಸ್ ಮೊದಲ ಇನಿಂಗ್ಸ್: 333
(ಮಹೇಶ್ ರಾವತ್ 124, ಅರಿಂದರ್ ಘೋಷ್ 91, ಪ್ರೀತಮ್ ಸಿಂಗ್ 35,ಎಸ್.ಗೋಪಾಲ್ 4-102, ಕೆ.ಗೌತಮ್ 3-70,ಅಭಿಮನ್ಯು ಮಿಥುನ್ 2-68)
►ಕರ್ನಾಟಕ ಎರಡನೇ ಇನಿಂಗ್ಸ್:208/1
(ಮಾಯಾಂಕ್ ಅಗರವಾಲ್ ಅಜೇಯ 104, ಆರ್.ಸಮರ್ಥ್ 56, ನಿಶ್ಚಲ್ ಅಜೇಯ 41)
ಮುಂಬೈ ಕ್ವಾರ್ಟರ್‌ಫೈನಲ್‌ಗೆ ತೇರ್ಗಡೆ
ತ್ರಿಪುರಾ ತಂಡವನ್ನು 10 ವಿಕೆಟ್‌ಗಳ ಅಂತರದಿಂದ ಮಣಿಸಿರುವ ಮುಂಬೈ ತಂಡ ರಣಜಿ ಟ್ರೋಫಿಯಲ್ಲಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿದೆ.
41 ಬಾರಿ ರಣಜಿ ಟ್ರೋಫಿ ಜಯಿಸಿ ದಾಖಲೆ ನಿರ್ಮಿಸಿರುವ ಮುಂಬೈ ತಂಡ ತವರು ಮೈದಾನದಲ್ಲಿ ಸೋಮವಾರ ನಡೆದ ರಣಜಿ ಟ್ರೋಫಿ ‘ಸಿ’ ಗುಂಪಿನ ಪಂದ್ಯದಲ್ಲಿ ಗೆಲ್ಲಲು 63 ರನ್ ಗುರಿ ಪಡೆದಿತ್ತು. ಕೇವಲ 6.2 ಓವರ್‌ಗಳಲ್ಲಿ ಜಯಭೇರಿ ಬಾರಿಸಿತು. ಯುವ ಆಟಗಾರ ಪೃಥ್ವಿ ಶಾ(ಅಜೇಯ 50) ಹಾಗೂ ಮೊದಲ ಇನಿಂಗ್ಸ್‌ನಲ್ಲಿ ಶತಕ ಸಿಡಿಸಿದ್ದ ಜೈ ಬಿಶ್ತಾ(ಅಜೇಯ 13) ಮುಂಬೈಗೆ ಸುಲಭ ಗೆಲುವು ತಂದರು.
ಮುಂಬೈ ಬೋನಸ್ ಅಂಕ ಸಹಿತ ಒಟ್ಟು ಏಳಂಕವನ್ನು ಪಡೆಯಿತು. ಒಟ್ಟು 21 ಅಂಕ ಗಳಿಸಿ ‘ಸಿ’ ಗುಂಪಿನಲ್ಲಿ ಮೊದಲನೇ ಸ್ಥಾನದೊಂದಿಗೆ ಕ್ವಾರ್ಟರ್ ಫೈನಲ್‌ನಲ್ಲಿ ಸ್ಥಾನ ಪಡೆಯಿತು. ಆಂಧ್ರ ಹಾಗೂ ಮಧ್ಯಪ್ರದೇಶ ಎರಡನೇ ಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿವೆ.
8 ವಿಕೆಟ್‌ಗಳ ನಷ್ಟಕ್ಕೆ 421 ರನ್‌ಗೆ ಇನಿಂಗ್ಸ್ ಡಿಕ್ಲೇರ್ ಮಾಡಿದ ಮುಂಬೈ ಮೊದಲ ಇನಿಂಗ್ಸ್‌ನಲ್ಲಿ 226 ರನ್ ಮುನ್ನಡೆ ಪಡೆಯಿತು. ತ್ರಿಪುರಾವನ್ನು 2ನೇ ಇನಿಂಗ್ಸ್‌ನಲ್ಲಿ 288 ರನ್‌ಗೆ ನಿಯಂತ್ರಿಸಿದ್ದ ಮುಂಬೈ ಗೆಲುವಿಗೆ ಸುಲಭ ಸವಾಲು ಪಡೆಯಿತು.







