ಟೆನಿಸ್ ರ‍್ಯಾಂಕಿಂಗ್: ಸುಮಿತ್ ಜೀವನಶ್ರೇಷ್ಠ ಸಾದನೆ
ಹೊಸದಿಲ್ಲಿ, ನ.27: ಎಟಿಪಿ ಸಿಂಗಲ್ಸ್ ರ‍್ಯಾಂಕಿಂಗ್‌ನಲ್ಲಿ 96 ಸ್ಥಾನ ಭಡ್ತಿ ಪಡೆದಿರುವ ಭಾರತದ ಯುವ ಆಟಗಾರ ಸುಮಿತ್ ನಗಾಲ್ ಜೀವನಶ್ರೇಷ್ಠ 225 ರ‍್ಯಾಂಕ್ ಪಡೆದಿದ್ದಾರೆ. ಶನಿವಾರ ಬೆಂಗಳೂರು ಓಪನ್ ಪ್ರಶಸ್ತಿ ಜಯಿಸಿರುವ ಹಿನ್ನೆಲೆಯಲ್ಲಿ ನಗಾಲ್ ರ‍್ಯಾಂಕಿಂಗ್‌ನಲ್ಲಿ ಭಾರೀ ಏರಿಕೆಯಾಗಿದೆ. ಚೊಚ್ಚಲ ಚಾಲೆಂಜರ್ ಟ್ರೋಫಿ ಜಯಿಸಿದ್ದ ನಗಾಲ್ 100 ರ‍್ಯಾಂಕಿಂಗ್ ಪಾಯಿಂಟ್ಸ್ ಪಡೆದಿದ್ದರು. ಬೆಂಗಳೂರು ಓಪನ್‌ನ ಸೆಮಿಫೈನಲ್‌ನಲ್ಲಿ ನಗಾಲ್ ವಿರುದ್ಧ ಸೋತಿದ್ದ ಯೂಕಿ ಭಾಂಬ್ರಿ 2 ಸ್ಥಾನ ಭಡ್ತಿ ಪಡೆದು 116ನೇ ರ‍್ಯಾಂಕಿನಲ್ಲಿದ್ದಾರೆ. ಈ ಮೂಲಕ ಭಾರತದ ಅಗ್ರ ರ‍್ಯಾಂಕಿನ ಸಿಂಗಲ್ಸ್ ಆಟಗಾರನಾಗಿ ಮುಂದುವರಿದಿದ್ದಾರೆ.
ರಾಮ್‌ಕುಮಾರ್(137), ನಗಾಲ್(225), ಪ್ರಜ್ಞೇಶ್ ಗುಣೇಶ್ವರನ್(256) ಹಾಗೂ ಎನ್.ಶ್ರೀರಾಮ್ ಬಾಲಾಜಿ(372) ಭಾಂಬ್ರಿ ನಂತರದ ಸ್ಥಾನದಲ್ಲಿದ್ದಾರೆ. ಮೈಕಲ್ ಎಲ್ಗಿನ್‌ರೊಂದಿಗೆ ಬೆಂಗಳೂರು ಓಪನ್‌ನಲ್ಲಿ ಡಬಲ್ಸ್ ಪ್ರಶಸ್ತಿ ಜಯಿಸಿದ್ದ ಎಡಗೈ ಆಟಗಾರ ಡಿವಿಜ್ ಶರಣ್ 4 ಸ್ಥಾನ ಭಡ್ತಿ ಪಡೆದು ಜೀವನಶ್ರೇಷ್ಠ 47ನೇ ಸ್ಥಾನಕ್ಕೇರಿದ್ದಾರೆ. ಡಬ್ಲುಟಿಎ ರ‍್ಯಾಂಕಿಂಗ್‌ನಲ್ಲಿ ಅಂಕಿತಾ ರೈನಾ ಸಿಂಗಲ್ಸ್‌ನಲ್ಲಿ ಭಾರತದ ನಂ.1 ಆಟಗಾರ್ತಿಯಾಗಿ ಮುಂದುವರಿದಿದ್ದಾರೆ. ರೈನಾ 16 ಸ್ಥಾನ ಭಡ್ತಿ ಪಡೆದು 277ನೇ ಸ್ಥಾನಕ್ಕೇರಿದ್ದಾರೆ. ಅಂಕಿತಾ ಮುಂಬೈ ಓಪನ್‌ನಲ್ಲಿ ಕ್ವಾರ್ಟರ್‌ಫೈನಲ್‌ನಲ್ಲಿ ಮುಗ್ಗರಿಸಿದ್ದರು. ಡಬಲ್ಸ್‌ನಲ್ಲಿ ಸಾನಿಯಾ ಮಿರ್ಝಾ 12ನೇ ಸ್ಥಾನದಲ್ಲಿದ್ದಾರೆ.







